ಒಡಿಶಾ ರೈಲು ಅಪಘಾತವು ಸಿಎಜಿ ವರದಿಯ ನಿರ್ಲಕ್ಷಕ್ಕೆ ತೆತ್ತ ಬೆಲೆ?

Update: 2023-06-10 06:04 GMT


ಇತ್ತೀಚೆಗೆ ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತವು ಮಹಾಲೇಖಪಾಲ (ಸಿಎಜಿ)ರು ಕಳೆದ ವರ್ಷ ಸಲ್ಲಿಸಿದ್ದ ವರದಿಯನ್ನು ನಿರ್ಲಕ್ಷಿಸಿದ ತಪ್ಪಿಗೆ ತೆತ್ತಿರುವ ಭಯಂಕರ ಬೆಲೆಯಾಗಿದೆ. ಈ ದುರಂತದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
2022, ಡಿ.21ರಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸಿಎಜಿ ವರದಿಯು 2017-18 ಮತ್ತು 2020-21ರ ನಡುವೆ ರೈಲುಗಳು ಹಳಿ ತಪ್ಪಿದ್ದ ಘಟನೆಗಳನ್ನು ಪರಿಶೀಲಿಸಿತ್ತು. ಇಂತಹ ದುರಂತಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎನ್ನುವುದನ್ನು ಪ್ರಶ್ನಿಸಿದ್ದ ಸಿಎಜಿ ವರದಿಯು ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ಎತ್ತಿ ತೋರಿಸಿತ್ತು. ರೈಲು ಹಳಿ ತಪ್ಪಿದಾಗ ಸರಿಯಾಗಿ ತನಿಖೆ ನಡೆಸದಿರುವುದು, ಸೂಕ್ತ ವರದಿಯನ್ನು ಸಲ್ಲಿಸದಿರುವುದು, ರಾಷ್ಟ್ರೀಯ ರೇಲ್ ಸಂರಕ್ಷಣ ಕೋಶ (ಆರ್‌ಆರ್‌ಎಸ್‌ಕೆ)ದಲ್ಲಿರುವ ಹಣವನ್ನು ಬಳಸಿಕೊಳ್ಳುವಲ್ಲಿ ಜಿಪುಣತನ, ಹಳಿಗಳ ನವೀಕರಣವನ್ನು ಸರಿಯಾಗಿ ಕೈಗೊಳ್ಳದಿದ್ದುದು, ಸುರಕ್ಷತೆಯನ್ನು ನೋಡಿಕೊಳ್ಳಲು ಸಾಕಷ್ಟು ಸಿಬ್ಬಂದಿ ಕೊರತೆಯಂತಹ ಹಲವಾರು ಸಮಸ್ಯೆಗಳನ್ನು ವರದಿಯು ಬೆಟ್ಟು ಮಾಡಿತ್ತು.

ಪ್ರಯಾಣಿಕರ ಸುರಕ್ಷತೆಯ ಕುರಿತು ರೈಲ್ವೆ ಸಚಿವಾಲಯಕ್ಕೆ ಎಚ್ಚರಿಕೆ ನೀಡಿರುವ ಸಿಎಜಿ ವರದಿಯು ಬಹಿರಂಗಗೊಂಡ ಹಲವು ತಿಂಗಳುಗಳ ಬಳಿಕ ಒಡಿಶಾ ರೈಲು ದುರಂತ ಸಂಭವಿಸಿದೆ. ಮಾಧ್ಯಮಗಳು ವರದಿಯು ಕಂಡುಕೊಂಡಿರುವ ಲೋಪಗಳನ್ನು ಬೆಟ್ಟು ಮಾಡುತ್ತಿದ್ದರೆ ಈ ಘಟನೆಯು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಆಡಿಟಿಂಗ್‌ನ ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿನ ದೋಷದ ಬಗ್ಗೆ ನಮಗೆ ಎಚ್ಚರಿಕೆಯನ್ನೂ ನೀಡಿದೆ.
ವರದಿಯನ್ನು ಮೊದಲೇ ಬಹಿರಂಗಗೊಳಿಸಬಹುದಿತ್ತಲ್ಲವೇ ಎನ್ನುವುದು ಉತ್ತರವನ್ನು ಬೇಡುವ ಮೊದಲ ಪ್ರಶ್ನೆಯಾಗಿದೆ.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವಂತೆ ಕರಡು ಆಡಿಟ್ ವರದಿ ಸಿದ್ಧಗೊಂಡ ನಂತರ ಅದರಲ್ಲಿಯ ಅಂಶಗಳನ್ನು ಚರ್ಚಿಸಲು ಜೂನ್ 2022ರಲ್ಲಿ ರೈಲ್ವೆ ಮಂಡಳಿ ಮಟ್ಟದಲ್ಲಿ ಸಭೆಯೊಂದು ನಡೆದಿತ್ತು. ಕೆಲವು ತಿಂಗಳುಗಳ ಬಳಿಕ, 2022ರ ಸೆಪ್ಟಂಬರ್ ಮೊದಲ ವಾರದಲ್ಲಿ ವರದಿಯು ಅಂತಿಮಗೊಂಡಿತ್ತು. ಸಿಎಜಿ ತನ್ನ ವರದಿಯನ್ನು ಸೆ.9ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನ 2022,ಡಿ.7ರಂದು ಆರಂಭಗೊಂಡಿತ್ತು.

ಚಳಿಗಾಲದ ಅಧಿವೇಶನ ಇನ್ನೇನು ಕೊನೆಗೊಳ್ಳುತ್ತದೆ ಎನ್ನುವಾಗ ಡಿ.20-22ರಂದು 17 ಆಡಿಟ್ ವರದಿಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಸಿಎಜಿ ವರದಿಗಳನ್ನು ಸಂಸತ್ ಅಧಿವೇಶನದ ಕೊನೆಯ ವಾರದಲ್ಲಿ ಮಂಡಿಸಲು ಕೇಂದ್ರವು ಯೋಜನೆಯನ್ನು ಹೊಂದಿದ್ದಾಗ ಪ್ರತಿಪಕ್ಷಗಳು ಯಾವ ಕಳವಳಗಳನ್ನೆತ್ತಲು ಸಾಧ್ಯ?

ಆಡಿಟ್ ವರದಿಯು ರೈಲ್ವೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಎತ್ತಿದ್ದ ಕಳವಳಗಳನ್ನು ಚರ್ಚಿಸಲು ಒಂದು ಅಧ್ಯಾಯವನ್ನೇ ಮೀಸಲಿರಿಸಿದೆ. ಈ ಅಂಶವೇ ಹಳಿತಪ್ಪುವಿಕೆ ಕುರಿತು. ಈ ವಿಷಯಾಧಾರಿತ ಆಡಿಟ್ ವರದಿಯನ್ನು ಆರಂಭಿಕ ಚರ್ಚೆಗೆತ್ತಿಕೊಳ್ಳುವಂತೆ ಸಂಸದೀಯ ಸಮಿತಿಯ ಮೇಲೆ ಒತ್ತಡ ಹೇರಬೇಕಿತ್ತು. ಆಡಿಟ್ ವರದಿಯು ಸಾರ್ವಜನಿಕ ಡೊಮೇನ್‌ನಲ್ಲಿದ್ದಾಗ ಸ್ಥಾಯಿ ಸಮಿತಿಯು ಮೂರು ಬಾರಿ ಸಭೆ ಸೇರಿತ್ತು. ಮೊದಲ ಎರಡು ಸಭೆಗಳು 2023-24ನೇ ವಿತ್ತವರ್ಷಕ್ಕಾಗಿ ಅನುದಾನ ಕೋರಿಕೆಗಳನ್ನು ಚರ್ಚಿಸಿದ್ದರೆ, ‘ರೈಲ್ವೆ ಕಾರ್ಯಾಚರಣೆಗಳಲ್ಲಿ ಸುರಕ್ಷತಾ ಕ್ರಮಗಳು’ ಕುರಿತು ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿಯ ಪ್ರತಿನಿಧಿಗಳಿಂದ ಮಾಹಿತಿ ನೀಡಿಕೆ ಮೂರನೇ ಸಭೆಯ ಅಜೆಂಡಾದಲ್ಲಿನ ವಿಷಯವಾಗಿತ್ತು.

ಭಾರತೀಯ ರೈಲ್ವೆಯಲ್ಲಿನ ಹಳಿ ತಪ್ಪುವಿಕೆ ಕುರಿತು ಸಿಎಜಿಯ ಕಾರ್ಯಕ್ಷಮತೆ ಆಡಿಟ್ ವರದಿಯನ್ನು ಸ್ಥಾಯಿ ಸಮಿತಿಯು ಅಧ್ಯಯನ ಮಾಡಿತ್ತೇ ಹಾಗೂ ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿ ಪ್ರತಿನಿಧಿಗಳಿಂದ ಕ್ರಮಾನುಷ್ಠಾನ ಟಿಪ್ಪಣಿಗಳನ್ನು ಕೇಳಿತ್ತೇ? ಸಮಿತಿಯು ವರದಿಯನ್ನು ಅಧ್ಯಯನ ಮತ್ತು ಚರ್ಚೆಗೆ ತೆಗೆದುಕೊಂಡಿರದಿದ್ದರೆ ಅದನ್ನು ಯಾವಾಗ ಮಾಡಲು ಉದ್ದೇಶಿಸಿದೆ ಎನ್ನುವುದನ್ನು ಸಮಿತಿಯ ಅಧ್ಯಕ್ಷ ರಾಧಾಮೋಹನ ಸಿಂಗ್ ನಮಗೆ ತಿಳಿಸುವರೇ? ಭಾರತೀಯ ರೈಲ್ವೆಯಲ್ಲಿನ ಹಳಿ ತಪ್ಪುವಿಕೆ ಕುರಿತು ಸಿಎಜಿಯ ಕಾರ್ಯಕ್ಷಮತೆ ಆಡಿಟ್ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆತ್ತಿಕೊಂಡಿತ್ತೇ ಎನ್ನುವುದು ಪ್ರಾಮಾಣಿಕ ಉತ್ತರವನ್ನು ಬೇಡುವ ಇನ್ನೊಂದು ನಿರ್ಣಾಯಕ ಪ್ರಶ್ನೆಯಾಗಿದೆ. ಈ ವರ್ಷದ ಫೆ.22ರಂದು ಇದ್ದಂತೆ ಭಾರತೀಯ ರೈಲ್ವೆಗೆ ಸಂಬಂಧಿಸಿದ ಇನ್ನೊಂದು ಆಡಿಟ್ ಪ್ಯಾರಾಗ್ರಾಫ್ ಚರ್ಚೆಯಲ್ಲಿದೆ ಎನ್ನುವುದನ್ನು ನಾವು ಇತ್ತೀಚೆಗೆ ಸಮಿತಿಯ ವೆಬ್‌ಪುಟದಲ್ಲಿ ಕಂಡುಕೊಂಡಿದ್ದೇವೆ. ಆದರೆ ಈ ಆಡಿಟ್ ಪ್ಯಾರಾಗ್ರಾಫ್ 2021ರ ವರದಿಯದ್ದಾಗಿದೆ. ಸಮಿತಿಯ ಅಧ್ಯಕ್ಷ ಆಧಿರ್‌ರಂಜನ್ ಚೌಧುರಿಯವರು ಇದನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವರೇ?

ಆಡಿಟ್ ವಿಚಾರಣೆಗಳಿಗೆ ಸಂಬಂಧಿತ ಅಧಿಕಾರಿಗಳು ಉತ್ತರಿಸದಿರುವ ಸಮಸ್ಯೆಯನ್ನೂ ಸಿಎಜಿ ವರದಿಯು ಒತ್ತಿ ಹೇಳಿದೆ.

ಸಿಎಜಿ ಆಡಿಟ್ ವರದಿಯು ಅಗತ್ಯ ಅನುಸರಣಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ನಾಲ್ಕು ಶಿಫಾರಸುಗಳನ್ನು ಮಾಡಿದೆ:

*ಅಪಘಾತ ವಿಚಾರಣೆಗಳನ್ನು ನಡೆಸಲು ಮತ್ತು ಅಂತಿಮಗೊಳಿಸಲು ಭಾರತೀಯ ರೈಲ್ವೆಯು ನಿಗದಿತ ಕಾಲಮಿತಿಯ ಕಟ್ಟುನಿಟ್ಟಾದ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು.

*ಹಳಿ ನಿರ್ವಹಣೆಗೆ ಸಂಪೂರ್ಣ ಯಾಂತ್ರೀಕೃತ ವಿಧಾನಗಳನ್ನು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ವಹಣಾ ಚಟುವಟಿಕೆಗಳ ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಲು ಪ್ರಬಲ ಮೇಲ್ವಿಚಾರಣಾ ವ್ಯವಸ್ಥೆಯನ್ನು ಭಾರತೀಯ ರೈಲ್ವೆಯು ಅಭಿವೃದ್ಧಿಗೊಳಿಸಬಹುದು.
*ರೈಲ್ವೆ ಆಡಳಿತವು ಆದ್ಯತಾ ಕಾಮಗಾರಿಗಳ ಕ್ಷೇತ್ರದಲ್ಲಿ ಹಣಕಾಸಿನ ಅಡಚಣೆಗಳನ್ನು ನಿವಾರಿಸಲು ಆರ್‌ಆರ್‌ಎಸ್‌ಕೆ ನಿಧಿಗಳ ನಿಯೋಜನೆಗಾಗಿ ಮಾರ್ಗದರ್ಶಿ ನೀತಿಗಳನ್ನು ಪಾಲಿಸಲೇಬೇಕು.

*ಆರ್‌ಆರ್‌ಎಸ್‌ಕೆ ನಿಧಿಯಿಂದ ಪಡೆದ ಲಾಭಗಳು ನಿಧಿಯ ಸೃಷ್ಟಿಯ ಹಿಂದಿನ ಉದ್ದೇಶಗಳಿಗೆ ಅನುಗುಣವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಸುರಕ್ಷತಾ ಕಾಮಗಾರಿಯ ಪ್ರತಿಯೊಂದು ಐಟಮ್‌ಗಾಗಿ ವಿವರವಾದ ಫಲಿತಾಂಶ ಚೌಕಟ್ಟನ್ನು ಸಿದ್ಧಪಡಿಸಬಹುದು.

ಈ ನಾಲ್ಕು ಶಿಫಾರಸುಗಳ ಕುರಿತು ಯಾವ ಅನುಸರಣಾ ಕ್ರಮಗಳನ್ನು ಖಚಿತಪಡಿಸಲಾಗಿದೆ ಎನ್ನುವುದನ್ನು ಮಾನ್ಯ ರೈಲ್ವೆ ಸಚಿವರು ತಿಳಿಸುವರೇ?
ಇದೇ ರೀತಿ ವಿವಿಧ ವಲಯಗಳಲ್ಲಿನ ಲೆಕ್ಕ ಪರಿಶೋಧನೆ ಕಾರ್ಯದ ಉಸ್ತುವಾರಿಯನ್ನು ಹೊಂದಿರುವ ಸಿಎಜಿ ಕಚೇರಿಗಳು ಈ ಕಾರ್ಯಕ್ಷಮತೆ ಆಡಿಟ್ ವರದಿಯಲ್ಲಿ ವ್ಯಕ್ತಪಡಿಸಲಾಗಿರುವ ಆಡಿಟ್ ಕಳವಳಗಳ ಕುರಿತು ವಲಯ ಅಧಿಕಾರಿಗಳು ಸಲ್ಲಿಸಿರುವ ಕ್ರಮಾನುಷ್ಠಾನ ಟಿಪ್ಪಣಿಗಳು ಮತ್ತು ಉತ್ತರಗಳನ್ನು ಸಂಕಲಿಸಬೇಕು ಮತ್ತು ಅವುಗಳನ್ನು ರೈಲ್ವೆ ಸುರಕ್ಷತಾ ಆಯುಕ್ತರ ಕಚೇರಿಗೆ ಲಭ್ಯವಾಗಿಸಬೇಕು. ಸಂಪೂರ್ಣ ನಿಷ್ಕ್ರಿಯತೆ ಕಂಡು ಬಂದರೆ ವಲಯ ಆಡಿಟ್ ಕಚೇರಿಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಮತ್ತು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಸ್ಥಿತಿಗತಿ ವರದಿಯನ್ನು ನೀಡಬೇಕು. ಇದೇ ವೇಳೆಗೆ ಪಾರದರ್ಶಕತೆಯ ಹಿತಾಸಕ್ತಿಯಲ್ಲಿ ಸಂಬಂಧಿತ ಕಚೇರಿಗಳು ಈ ಕ್ರಮಾನುಷ್ಠಾನ ಟಿಪ್ಪಣಿಗಳು ಮತ್ತು ಉತ್ತರಗಳನ್ನು (ಅಥವಾ ನಿರೀಕ್ಷಿಸಲಾಗುತ್ತಿರುವ ಉತ್ತರಗಳು ಮತ್ತು ಕ್ರಮಾನುಷ್ಠಾನ ಟಪ್ಪಣಿಗಳ ಕುರಿತು ಕನಿಷ್ಠ ಸ್ಥಿತಿಗತಿ ವರದಿಯನ್ನಾದರೂ) ನಾಗರಿಕರೊಂದಿಗೆ ಹಂಚಿಕೊಳ್ಳುವುದನ್ನು ಪರಿಗಣಿಸಬೇಕು.

2021-2015ರ ಅವಧಿಗಾಗಿ ಭಾರತೀಯ ರೈಲ್ವೆಯಲ್ಲಿ ಹಳಿ ತಪ್ಪುವಿಕೆ ಕುರಿತು ಅನುಸರಣಾ ಕಾರ್ಯಕ್ಷಮತೆ ವರದಿಯನ್ನು ಸಿಎಜಿ ಕೈಗೆತ್ತಿಕೊಳ್ಳಬೇಕು ಮತ್ತು ಇದನ್ನು ನಿಯಮಿತವಾಗಿಸಲು ಪರಿಗಣಿಸಬೇಕು.

 ಕೃಪೆ: 

Similar News