ಸುಳ್ಳು ಸುದ್ದಿಗಳ ಕಾರ್ಖಾನೆಯ ಕಟ್ಟುಕತೆಗಳು

Update: 2023-06-12 06:04 GMT

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗಲಭೆಕೋರ, ಹಿಂಸಾ ಪ್ರಚೋದಕ ಶಕ್ತಿಗಳ ಸೋಲಿನ ನಂತರ ಶಾಂತಿಪ್ರಿಯ, ಸಭ್ಯ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈ ಪರಾಭವದಿಂದ ಕೋಮುವಾದದ ವಿಷ ಸರ್ಪ ಸಂಪೂರ್ಣ ಸತ್ತು ಹೋಗಿಲ್ಲ. ಗಾಯ ಗೊಂಡು ಮತ್ತೆ ತಲೆ ಎತ್ತಲು ಸಜ್ಜಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಈ ನಿಟ್ಟಿನಲ್ಲಿ ತುಂಬಾ ಮುಖ್ಯವಾಗಿದೆ. ಒಕ್ಕೂಟ ಸರಕಾರದ ಸೂತ್ರ ಹಿಡಿಯಲು ಮತ್ತೆ ಅವರು ತಯಾರಾಗುತ್ತಿದ್ದಾರೆ. ಅವರ ಬಳಿ ದೇಶವನ್ನು ಮುನ್ನಡೆಸುವ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳಿಲ್ಲ. ಅವರ ಗೆಲುವಿನ ಬತ್ತಳಿಕೆಯಲ್ಲಿರುವುದು ಜನಾಂಗ ದ್ವೇಷದ, ಜನ ವಿಭಜನೆಯ ಅಪಾಯಕಾರಿ ಅಸ್ತ್ರ ಮಾತ್ರ. ಜನರ ನಡುವೆ ಹುಳಿ ಹಿಂಡಲು ಸುಳ್ಳು ಸುದ್ದಿಗಳನ್ನು ಹರಡುವುದು ಅವರ ಇನ್ನೊಂದು ಕುತಂತ್ರ.

ಗುಜರಾತಿನಂತೆ ಇತರ ರಾಜ್ಯಗಳನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಲು ಹೆಣಗಾಡುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ವಿಫಲ ಪ್ರಯೋಗ ನಡೆಸಿ ಮುಖಭಂಗಕ್ಕೊಳಗಾಯಿತು. ಇಲ್ಲಂತೂ ರಾಜ್ಯ ಬಿಜೆಪಿ ಅಧ್ಯಕ್ಷರೇ ನೀರು, ರಸ್ತೆ, ಮನೆ, ಶಿಕ್ಷಣದ ಬಗ್ಗೆ ಮಾತಾಡಬೇಡಿ ಲವ್ ಜಿಹಾದ್, ಹಿಜಾಬ್, ಮತಾಂತರ, ಹಲಾಲ್ ಕಟ್ ಬಗ್ಗೆ ಮಾತ್ರ ಮಾತಾಡಿ ಎಂದು ತಮ್ಮ ಕಾರ್ಯಕರ್ತರಿಗೆ ಬಹಿರಂಗವಾಗಿ ಕರೆ ನೀಡಿದ್ದರು. ಆದರೆ ಇಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಪ್ರತ್ಯಾಸ್ತ್ರದ ಹೊಡೆತಕ್ಕೆ ಜನದ್ವೇಷದ ಅಸ್ತ್ರ ತತ್ತರಿಸಿ ನೆಲಕ್ಕಪ್ಪಳಿಸಿತು.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಏನೇ ಆಗಿರಲಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೋಮುವಾದಿ ಶಕ್ತಿಗಳ ಸುಳ್ಳಿನ ಕಾರ್ಖಾನೆ ಹಗಲೂ ರಾತ್ರಿ ಕೆಲಸ ಮಾಡುತ್ತಿದೆ. ಹೊಸ, ಹೊಸ ಸುಳ್ಳುಗಳನ್ನು ಸೃಷ್ಟಿಸಿ ಜನಸಾಮಾನ್ಯರ ನಡುವೆ ಗಲಿಬಿಲಿ ಉಂಟು ಮಾಡಲು ಯತ್ನಿಸುತ್ತಿದೆ. ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂಥ ಸುಳ್ಳು ಸೃಷ್ಟಿಸುವ ಕಾರ್ಖಾನೆಗಳ, ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ಅಗತ್ಯ ಅದಕ್ಕಿದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಯಾವುದೆಂದರೆ ಮುನ್ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಬಾಲಾಸೋರ್ ರೈಲು ದುರಂತವನ್ನು ತನ್ನ ಕೋಮು ರಾಜಕೀಯಕ್ಕೆ ಬಳಸಿಕೊಳ್ಳಲು ಇದು ಯತ್ನಿಸಿತು. ಈ ದುರಂತಕ್ಕೆ ಭಾರತದ ಬಹುದೊಡ್ಡ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಯತ್ನಿಸಿದ ಅದರ ಸಂಚು ಬಟಾಬಯಲಾಗಿದೆ.ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ಈ ದುರಂತಕ್ಕೆ ಮುಸಲ್ಮಾನರು ಕಾರಣ ಎಂದು ಸುಳ್ಳು ಪ್ರಚಾರ ನಡೆಸಿತು. ಮುಸಲ್ಮಾನರ ವಿರುದ್ಧ ಬಹುಸಂಖ್ಯಾತ ಹಿಂದೂಗಳನ್ನು ಎತ್ತಿಕಟ್ಟುವ ಅದೇ ಹಳೆಯ ತಂತ್ರವನ್ನು ಮಾಡಿತು. ಬಾಲಾಸೋರ್ ರೈಲು ದುರಂತಕ್ಕೆ ಶುಕ್ರವಾರದ ನಮಾಝ್ ಮತ್ತು ಮಸೀದಿ ಕಾರಣ ಎಂಬರ್ಥದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು. ರೈಲು ದುರಂತದ ಚಿತ್ರವನ್ನು ಅಂಥ ಪೋಸ್ಟ್‌ಗಳ ಜೊತೆಗೆ ಹಂಚಿಕೊಳ್ಳಲಾಯಿತು. ಚಲ್ಲಾಪಿಲ್ಲಿಯಾಗಿ ಬಿದ್ದಿರುವ ರೈಲು ಬೋಗಿಗಳು ಮತ್ತು ರೈಲು ಹಳಿಯ ಸಮೀಪ ಇರುವ ಮಸೀದಿಯನ್ನು ಹೋಲುವ ಕಟ್ಟಡವನ್ನು ಈ ಪೋಸ್ಟ್‌ಗಳಲ್ಲಿ ಗುರುತು ಮಾಡಿ ಹಾಕಲಾಯಿತು. ಆದರೆ ಈ ಬಗ್ಗೆ ಆಳವಾದ ತನಿಖೆ ನಡೆಸಿದ ಒಡಿಶಾದ ಪೊಲೀಸರು ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಾಸೋರ್ ರೈಲು ದುರಂತಕ್ಕೆ ಹಳಿಯಲ್ಲಿದ್ದ ಇಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿನ ಲೋಪ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೂ ರೈಲು ದುರಂತಕ್ಕೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಅಪಘಾತಕ್ಕೆ ಮಸೀದಿಯೇ ಕಾರಣ ಎಂದು ಕೆಲವರು ಪೋಸ್ಟ್ ಹಾಕಿದರು. ಈ ಮೂಲಕ ಒಡಿಶಾ ರಾಜ್ಯದಲ್ಲಿನ ಕೋಮು ಸೌಹಾರ್ದಕ್ಕೆ ಕೊಳ್ಳಿ ಇಡಲು ಯತ್ನಿಸಿದರು. ಈ ರೀತಿ ಸುಳ್ಳು ಪೊಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಒಡಿಶಾ ಪೊಲೀಸ್ ಇಲಾಖೆ ತಿಳಿಸಿದೆ. ವಾಸ್ತವವಾಗಿ ರೈಲು ಹಳಿಯ ಸಮೀಪ ಇರುವುದು ಮಸೀದಿಯಲ್ಲ, ದೇವಾಲಯ. ಅದನ್ನು ಮಸೀದಿ ಎಂದು ಬಿಂಬಿಸಿ ಸುಳ್ಳು ಸುದ್ದಿ ಹರಡಲಾಯಿತು ಎಂದು ತಿಳಿದು ಬಂದಿದೆ.

ಇಷ್ಟೇ ಅಲ್ಲ ದುರಂತ ನಡೆದ ಬಾಲಾಸೋರ್ ಸಮೀಪದ ರೈಲು ನಿಲ್ದಾಣದ ಸ್ಟೇಶನ್ ಮಾಸ್ಟರ್ ಮುಹಮ್ಮದ್ ಶರೀಫ್ ಎಂದೂ ದುರಂತ ನಡೆದ ನಂತರ ಆತ ನಾಪತ್ತೆಯಾಗಿದ್ದಾನೆ ಎಂದೂ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಹರಿ ಬಿಡಲಾಯಿತು. ಆದರೆ ವಾಸ್ತವವಾಗಿ ಅಲ್ಲಿನ ರೈಲ್ವೆ ಸ್ಟೇಶನ್ ಮಾಸ್ಟರ್ ಎಸ್.ಬಿ. ಮೊಹಂತಿ ಎಂಬುದು ನಂತರ ಬಯಲಿಗೆ ಬಂತು. ಸದರಿ ರೈಲ್ವೆ ನಿಲ್ದಾಣದ ಸಿಬ್ಬಂದಿಯಲ್ಲಿ ಮುಹಮ್ಮದ್ ಶರೀಫ್ ಎಂಬ ವ್ಯಕ್ತಿಯೇ ಇಲ್ಲ ಎಂದೂ ಇದು ಬೇಕಂತಲೇ ಸೃಷ್ಟಿಸಿದ ಸುಳ್ಳು ಸುದ್ದಿಯೆಂದೂ ಪೊಲೀಸರು ನಂತರ ತಿಳಿಸಿದ್ದಾರೆ.

ದೇಶದಲ್ಲಿ ಯಾವುದೇ ದುರ್ಘಟನೆ ನಡೆದರೂ ಅದನ್ನು ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸಲು ಬಳಸಿಕೊಳ್ಳುವ ಅತ್ಯಂತ ಕೆಟ್ಟ ಚಾಳಿ ಆರಂಭವಾಗಿ ವರ್ಷಗಳೇ ಆದವು. ಪ್ರಕೃತಿ ವಿಕೋಪವಾದರೂ ಆ ಸಮುದಾಯದ ಜನರು ಬೆಲೆ ತೆರಬೇಕು. ಕೊರೋನ ಬಂದಾಗಲೂ ಒಂದು ನಿರ್ದಿಷ್ಟ ಸಮುದಾಯದವರೇ ಇದಕ್ಕೆ ಕಾರಣ ಎಂಬ ಅತ್ಯಂತ ದುಷ್ಟ ಅಪಪ್ರಚಾರ ನಡೆಯಿತು. ಮುಸಲ್ಮಾನ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳ ಮೇಲೆ ದ್ವೇಷ ಸಾಧಿಸುವ ಹುನ್ನಾರ ನಡೆಯಿತು. ಇದೊಂದು ರೋಗಿಷ್ಟ ಮನಸ್ಥಿತಿಯಾಗಿ ರೂಪು ತಾಳುತ್ತಿರುವುದು ಭಾರತದ ದುರಂತ.

ಮುಸಲ್ಮಾನರೂ ಈ ಭಾರತದ ಪ್ರಜೆಗಳು. ಅವರಿಗೆ ಸರಕಾರದಿಂದ ಎಲ್ಲ ಸೌಲಭ್ಯಗಳನ್ನು ಹಕ್ಕಿನಿಂದ ಪಡೆಯಲು ಯಾರ ಯಾವ ಮುಲಾಜು ಅಗತ್ಯವಿಲ್ಲ. ಆದರೆ ಸೆಕ್ಯುಲರ್ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಂದಿಷ್ಟು ನೆರವು ನೀಡಲು ಮುಂದಾದರೂ ಅದಕ್ಕೂ ಅಪಪ್ರಚಾರ ಮಾಡಲಾಗುತ್ತದೆ. ಕೋಮುವಾದಿ ಸಂಘಟನೆಗಳು ಮಾತ್ರವಲ್ಲ ಕೆಲವು ಟಿ.ವಿ.ಮಾಧ್ಯಮಗಳೂ ಸುಳ್ಳು ಪ್ರಚಾರ ಮಾಡುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಬೆಂಗಳೂರಿನಲ್ಲಿರುವ ಹಜ್ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೫ ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ ಎಂಬ ಹೇಳಿಕೆಯನ್ನು ಕನ್ನಡ ಸುದ್ದಿ ವಾಹಿನಿಯೊಂದು ಇತ್ತೀಚೆಗೆ ಪ್ರಸಾರ ಮಾಡಿತು. ಈ ಪ್ರಸಾರದ ಸುದ್ದಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿ ಸಾಕಷ್ಟು ಪ್ರತಿಕ್ರಿಯೆಗಳೂ ಬಂದವು. ಎಷ್ಟು ಬಣ್ಣ ಬಳೆದು ಪ್ರಚಾರ ಮಾಡಲಾಯಿತೆಂದರೆ ನೂತನ ಸಂಸತ್ ಭವನಕ್ಕೆ ೮೮೫ ಕೋಟಿ ರೂ., ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಅಂದಾಜು ವೆಚ್ಚ ೩,೦೦೦ ಕೋಟಿ ರೂ., ಆದರೆ ಹಜ್ ಭವನಕ್ಕೆ ೫,೦೦೦ ಕೋಟಿ ರೂ.ಗಳನ್ನು ಸಿದ್ದರಾಮಯ್ಯನವರು ನೀಡಿದ್ದಾರೆ ಎಂದು ಜಾಲತಾಣದಲ್ಲಿ ಅಪಪ್ರಚಾರ ನಡೆಯಿತು.

ಆದರೆ ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಪ್ರತ್ರಿಕೆಯೊಂದು ಸಂಪರ್ಕಿಸಿದಾಗ ಇದು ಹಸಿಸುಳ್ಳು ಎಂದು ಅವರು ಸ್ಪಷ್ಕೃತಾಗಿ ಹೇಳಿದರು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಐದು ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದು ಬೇರೆ ವಿಷಯ.ಆದರೆ ಹಜ್ ಭವನ ನವೀಕರಣಕ್ಕಾಗಿ ಮುಖ್ಯಮಂತ್ರಿಗಳು ನೀಡಿದ್ದು ಐದು ಕೋಟಿ ರೂ. ಮಾತ್ರ, ಈ ಕುರಿತು ತಮ್ಮ ಹೇಳಿಕೆಯನ್ನು ಕೆಲವು ಟಿ.ವಿ.ಮಾಧ್ಯಮಗಳು ತಿರುಚಿ ಸಿಎಂ ಸಿದ್ದರಾಮಯ್ಯನವರು ಹಜ್ ಭವನದ ನವೀಕರಣಕ್ಕೆ ಐದು ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಜಾಲತಾಣದಲ್ಲಿ ಅಪಪ್ರಚಾರ ನಡೆಯಿತು. ಇದು ಮಾಧ್ಯಮಗಳಲ್ಲಿ ಇರುವ ಕೋಮುವಾದಿ ಮನಸ್ಸುಗಳ ಕುತಂತ್ರವಲ್ಲದೇ ಬೇರೇನೂ ಅಲ್ಲ.

ಮೊದಲು ಕೋಮು ದ್ವೇಷ ಬೆಳೆಸಲು ಮಸೀದಿಯ ಮುಂದೆ ವಾದ್ಯ ಬಾರಿಸುವಂಥ ತಂತ್ರಗಳನ್ನು ಬಳಸುತ್ತಿದ್ದ ಕೋಮುವಾದಿಗಳು ಈಗ ಆಧುನಿಕ ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸ್ಟೇಟಸ್‌ಗಳನ್ನು ಹಾಕಿ ಗಲಭೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಏನು ಮಾಡಿದರೂ ಹಿಂದೂ-ಮುಸಲ್ಮಾನರ ನಡುವೆ ದ್ವೇಷದ ಅಡ್ಡಗೋಡೆಯನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಯಾವ ರಾಜ್ಯದಲ್ಲಿ ಚುನಾವಣೆ ಇರುತ್ತದೋ ಅಲ್ಲಿ ಇಂಥ ಮಸಲತ್ತು ನಡೆಸುತ್ತಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅಲ್ಲಿ ಕೋಮು ವಿಭಜನೆಯ ಆಟ ಆಡುತ್ತಿದ್ದಾರೆ. ಇತ್ತೀಚೆಗೆ ಕೊಲ್ಲಾಪುರದಲ್ಲಿ ಕೆಲವರು ಮೊಗಲ ದೊರೆ ಔರಂಗಜೇಬ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ರ ಚಿತ್ರ ಹಾಗೂ ಆಕ್ಷೇಪಾರ್ಹ ಆಡಿಯೊವನ್ನು ತಮ್ಮ ಜಾಲತಾಣದ ಸ್ಟೇಟಸ್‌ನಲ್ಲಿ ಹಾಕಿದ್ದರು ಎಂಬುದೇ ದೊಡ್ಡ ವಿವಾದವಾಗಿ ನಗರದಲ್ಲಿ ಹಿಂಸಾಚಾರ, ಕಲ್ಲು ತೂರಾಟ ನಡೆಯಿತು. ಈ ಸ್ಟೇಟಸ್ ಬಂದ ತಕ್ಷಣ ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ಣವಿಸ್ ಮಹಾರಾಷ್ಟ್ರದಲ್ಲಿ ಟಿಪ್ಪು, ಔರಂಗಜೇಬ್ ವೈಭವೀಕರಣವನ್ನು ಸಹಿಸುವುದಿಲ್ಲ ಎಂದು ಹೇಳಿಕೆ ನೀಡಿದರು. ಇದಕ್ಕೆ ಅಧಿಕಾರದಲ್ಲಿರುವ ಪಕ್ಷಗಳೇ (ಬಿಜೆಪಿ ಮತ್ತು ಶಿವಸೇನೆಯ ಏಕನಾಥ ಶಿಂಧೆ ಬಣ) ಕಾರಣ ಎಂದು ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್ ಅವರು ಹೇಳಿಕೆ ನೀಡಿದರು. ನಂತರ ಪವಾರ್ ಅವರಿಗೂ ದಾಭೋಲ್ಕರ್, ಪನ್ಸಾರೆ ಅವರಂತೆ ನಿಮ್ಮನ್ನು ಕೊಲ್ಲುವದಾಗಿ ಬೆದರಿಕೆ ಪತ್ರ ಬಂತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ವಿವರಿಸಬೇಕಾಗಿಲ್ಲ.ಸಿಂದಗಿ ಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದಂಥ ಕಿಡಿಗೇಡಿಗಳೇ ಇಂಥ ಕಿತಾಪತಿ ಮಾಡುತ್ತಾರೆ.

ಕರ್ನಾಟಕ ವಿಧಾನಸಭಾ ಸೋಲಿನ ನಂತರವೂ ಬಿಜೆಪಿಯ ಪ್ರಚಾರ ತಂತ್ರ ಬದಲಾಗಿಲ್ಲ. ಮಹಾರಾಷ್ಟ್ರದಲ್ಲೂ ಗೃಹ ಸಚಿವ ಅಮಿತ್ ಶಾ ಮುಸ್ಲಿಮ್ ಮೀಸಲಾತಿ ವಿರುದ್ಧ ಭಾಷಣ ಮಾಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕೇಂದ್ರದ ಮೋದಿ ಸರಕಾರದ ವೈಫಲ್ಯಗಳನ್ನು ಮುಚ್ಚಿ ಕೊಂಡು ಮತ್ತೆ ಚುನಾವಣೆಯಲ್ಲಿ ಗೆದ್ದು ಬರಲು ಮುಸ್ಲಿಮ್ ವಿರೋಧಿ ಉನ್ಮಾದವನ್ನು ಕೆರಳಿಸುವುದು ಕೋಮುವಾದಿ ಶಕ್ತಿಗಳಿಗೆ ಅನಿವಾರ್ಯವಾಗಿದೆ.

ಸಾಮಾಜಿಕ ಜಾಲ ತಾಣದ ವಾಟ್ಸ್‌ಆ್ಯಪ್ ಯುನಿವರ್ಸಿಟಿ ಮೂಲಕ ಹೊಸ, ಹೊಸ ಸುಳ್ಳು ಕತೆಗಳನ್ನು ಕಟ್ಟುತ್ತಿದ್ದಾರೆ. ಸಾವರ್ಕರ್‌ರಿಂದ ಸುಭಾಶ್ಚಂದ್ರಬೋಸ್, ಭಗತ್ ಸಿಂಗ್ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ದರು ಎಂಬ ಇನ್ನೊಂದು ಹಸಿ ಸುಳ್ಳಿನ ಕತೆಯನ್ನು ಹೆಣೆದು ಜಾಲತಾಣದಲ್ಲಿ ಬಿಟ್ಟಿದ್ದಾರೆ. ಪತ್ರಿಕೆ, ಪುಸ್ತಕಗಳನ್ನು ಓದದ ಇಂದಿನ ಪೀಳಿಗೆಯ ಯುವಕರು ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಇಂಥ ಸುಳ್ಳುಗಳನ್ನೇ ನಂಬಿ ಮೆದುಳಲ್ಲಿ ವಿಷವನ್ನು ತುಂಬಿಕೊಳ್ಳುತ್ತಿದ್ದಾರೆ. ಕೊನೆಗೆ ಸತ್ಯ ಗೊತ್ತಾದ ನಂತರ ಕರ್ನಾಟಕದ ಮತದಾರರು ತಿರುಗಿ ಬಿದ್ದು ಪಾಠ ಕಲಿಸಿದಂತೆ ಎಲ್ಲಾ ಕಡೆ ಪಾಠ ಕಲಿಸುತ್ತಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜನರ ಮುಂದೆ ಹೋಗಲು ಬಿಜೆಪಿಗೆ ಮುಖವಿಲ್ಲ.ಅದೇ ಹಳೆಯ ಕೋಮು ದ್ವೇಷದ ಪ್ರಚಾರಕ್ಕೆ ಜನ ಮೋಸ ಹೋಗುವುದಿಲ್ಲ ಎಂಬುದು ಕರ್ನಾಟಕದ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನು ಮುಂದೆ ಬರೀ ಮೋದಿ ಪ್ರಭಾವ, ಹಿಂದುತ್ವದಿಂದ ಮಾತ್ರ ಗೆಲ್ಲಲು ಸಾಧ್ಯವಿಲ್ಲ ಎಂದು ಸಂಘಪರಿವಾರದ ಮುಖಪತ್ರ ಕೂಡ ಹೇಳಿದೆ. ಆದರೆ ಬಿಜೆಪಿ ಬಳಿ ಜನಪರವಾದ ಬೇರೆ ಕಾರ್ಯಸೂಚಿಯಿಲ್ಲ. ಮತ್ತೆ ಅದೇ ಹಳೆಯ ಔರಂಗಜೇಬನ ಕತೆಯನ್ನು ವಾಟ್ಸ್‌ಆ್ಯಪ್ ಯುನಿವರ್ಸಿಟಿ ಮೂಲಕ ಅಪಪ್ರಚಾರಕ್ಕೆ ಹೊರಟಿದೆ. ಪ್ರತಿಪಕ್ಷಗಳು, ಜನಪರ ಸಂಘಟನೆಗಳು ಒಂದಾದರೆ ಭಾರತದ ಪ್ರಭುತ್ವದಿಂದ ಮನುವಾದಿ, ಕೋಮುವಾದಿ, ಫ್ಯಾಶಿಸ್ಟ್ ಶಕ್ತಿಗಳನ್ನು ಹೊರದಬ್ಬಬಹುದು.

Similar News