ಮ್ಯಾನ್ಮಾರ್: ಎರಡು ವರ್ಷದಲ್ಲಿ 6 ಸಾವಿರ ನಾಗರಿಕರ ಹತ್ಯೆ: ವರದಿ

Update: 2023-06-13 17:04 GMT

ಓಸ್ಲೊ: ಮ್ಯಾನ್ಮಾರ್ನಲ್ಲಿ 2021ರ ಫೆಬ್ರವರಿಯಲ್ಲಿ ನಡೆದ ಮಿಲಿಟರಿ ದಂಗೆಯ ನಂತರ ಮೊದಲ 20 ತಿಂಗಳಲ್ಲಿ 6 ಸಾವಿರಕ್ಕೂ ಅಧಿಕ ನಾಗರಿಕರು ಹತರಾಗಿದ್ದಾರೆ ಎಂದು ‘ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಆಫ್ ಓಸ್ಲೋ’ ವರದಿ ಮಾಡಿದೆ.

ದಂಗೆಯ ಬಳಿಕ ನಡೆದ ಸಂಘರ್ಷದಲ್ಲಿ ಹತರಾದವರ ಸಂಖ್ಯೆ ಈ ಹಿಂದೆ ವರದಿಯಾಗಿರುವುದಕ್ಕಿಂತ ಅಧಿಕವಾಗಿದೆ. ಸೇನಾಡಳಿತ ಪ್ರಮುಖ ಹಂತಕನಾಗಿದ್ದರೂ, ಸೇನಾಡಳಿತ ವಿರೋಧಿ ಪಡೆಗಳ ಕೈಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಕಲೆಗಳು ಅಂಟಿಕೊಂಡಿವೆ ಎಂದು ಅಧ್ಯಯನ ತಂಡದ ಸದಸ್ಯ ಸ್ಟೈನ್ ಟೊನೆಸನ್ ಹೇಳಿದ್ದಾರೆ.

2021ರ ಫೆಬ್ರವರಿ 1 ಮತ್ತು 2022ರ ಸೆಪ್ಟಂಬರ್ 30ರ ನಡುವಿನ ಅವಧಿಯಲ್ಲಿ ರಾಜಕೀಯ ಕಾರಣಗಳಿಗಾಗಿ 6,337 ನಾಗರಿಕರು ಹತರಾಗಿದ್ದು 2,614 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಸುಮಾರು 50%ದಷ್ಟು ಸಾವಿಗೆ ಸೇನೆ, ಪೊಲೀಸರು ಮತ್ತು ಸಶಸ್ತ್ರ ಹೋರಾಟ ತಂಡ ಕಾರಣವಾಗಿದ್ದರೆ 2,152 ಹತ್ಯೆಗೆ ಸಶಸ್ತ್ರ ವಿರೋಧಿಗಳ ಗುಂಪು ಹೊಣೆಯಾಗಿದೆ. 12 ಹತ್ಯೆಗಳಿಗೆ ಎರಡೂ ಗುಂಪಿಗೆ ಸೇರದವರು ಕಾರಣವಾಗಿದ್ದರೆ  1,170 ಹತ್ಯೆಗೆ ಯಾರು ಕಾರಣವೆಂದು ಇನ್ನೂ ದೃಢಪಟ್ಟಿಲ್ಲ.

ಇದು ಅಂತರಾಷ್ಟ್ರೀಯ ಸಂಘಟನೆಗಳು ವರದಿ ಮಾಡಿರುವ ಹತ್ಯೆಯ ಪ್ರಮಾಣಕ್ಕಿಂತ ಅಧಿಕವಾಗಿದೆ. ವಿಶ್ವಾಸಾರ್ಹ ಮಾಧ್ಯಮ ವರದಿಗಳಿಂದ ಸಂಗ್ರಹಿಸಿದ ಅಂಕಿಅಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಹಲವು ಹತ್ಯೆಗಳು ಬೆಳಕಿಗೆ ಬಾರದೆ ಮುಚ್ಚಿಹೋಗಿರುವ ಸಾಧ್ಯತೆ ಇರುವುದರಿಂದ ವಾಸ್ತವಿಕ ಅಂಕಿಅಂಶ ಇನ್ನೂ ಹೆಚ್ಚಿರಬಹುದು ಎಂದು ವರದಿ ಹೇಳಿದೆ.

Similar News