ಎನ್‌ಆರ್‌ಐ ಉದ್ಯಮಿ ಹನಿ ಎಂ ಹನೀಫ್ ಗೆ ಪ್ರತಿಷ್ಠಿತ ಬಿಝಿನೆಸ್ ಎಕ್ಸಲೆನ್ಸ್ ಪ್ರಶಸ್ತಿ
ದುಬೈನಲ್ಲಿ ನಡೆದ ಮಾಸ್ಟರ್ ವಿಷನ್ ಇಂಟರ್‌ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭ
ದುಬೈ: ಮಂಗಳೂರು ಮೂಲದ ಖ್ಯಾತ ಎನ್‌ಆರ್‌ಐ ಯುವ ಉದ್ಯಮಿ, ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ. ಇದರ ಸಿಇಒ ಹನಿ ಎಂ ಹನೀಫ್ ಅವರಿಗೆ ಪ್ರತಿಷ್ಠಿತ ಬಿಝಿನೆಸ್ ಎಕ್ಸೆಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯನ್ನು ಮೇ 27ರಂದು ದುಬೈನ ಅಲ್ ನಸ್ರ್ ಲೀಶರ್‌ಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ ವಿಷನ್ ಇಂಟರ್‌ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಭಾರತದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಜೋಸೆಫ್ ಕುರಿಯನ್ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹನಿ ಎಂ ಹನೀಫ್, ತಮ್ಮ ಉದ್ಯಮದ ಯಶಸ್ಸಿಗೆ ಸಹಕರಿಸಿದ ತಮ್ಮ ಕುಟುಂಬ, ಸೇವಾ ಪೂರೈಕೆದಾರರು ಮತ್ತು ಗ್ರಾಹಕರಿಗೆ ತಮ್ಮ ಧನ್ಯವಾದ ತಿಳಿಸಿದರು. ಉದ್ಯಮಿಗಳಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಯುಎಇ ಆಡಳಿತ ಒದಗಿಸುವ ವೇದಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ಮುಖ್ಯ ಕಾರ್ಯಾಲಯವನ್ನು ಹೊಂದಿರುವ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕೋ ಸಂಸ್ಥೆಯ ಮಾರ್ಕೆಟಿಂಗ್ ಕಚೇರಿ ನ್ಯೂಯಾರ್ಕ್‌ನಲ್ಲಿದೆ. ಕಂಪೆನಿಯು ಸಾಸ್, ಡ್ರೆಸ್ಸಿಂಗ್ಸ್, ಮೆಯೊನೀಸ್, ಟಾರ್ಟಿಲ್ಲಾ, ಸಲ್ಸಾ, ಪೊಟ್ಯಾಟೋ ಚಿಪ್ಸ್, ಪಾಪ್‌ಕಾರ್ನ್, ಸಿರಪ್‌ಗಳು, ಆಲಿವ್ಸ್ ಮತ್ತಿತರ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದೆ. ಇವುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಜನಪ್ರಿಯವಾಗಿವೆ.
ಸಂಸ್ಥೆಯ ಪ್ರಾದೇಶಿಕ ಕಚೇರಿಗಳು ದುಬೈ, ಲಂಡನ್, ಮೆಕ್ಸಿಕೋದಲ್ಲಿವೆ. ತನ್ನ ಇತ್ತೀಚಿನ ಯೋಜನೆಯ ಭಾಗವಾಗಿ ಸಂಸ್ಥೆಯು ಬ್ಯುಸಿನೆಸ್ ಟು ಕನ್ಸ್ಯೂಮರ್ (ಬಿ2ಸಿ) ಕ್ಷೇತ್ರಕ್ಕೂ ಕಾಲಿಡುತ್ತಿದ್ದು ಜಗತ್ತಿನಾದ್ಯಂತ ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಉದ್ದೇಶವನ್ನು ಹೊಂದಿದೆ.