ಗಲ್ಫ್ ಮೆಡಿಕಲ್ ಯುನಿವರ್ಸಿಟಿಗೆ 101-200ರ ಪಟ್ಟಿಯಲ್ಲಿ ಸ್ಥಾನ

2023ರ ಸಾಲಿನ ‘ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್’ ರ‍್ಯಾಂಕಿಂಗ್ಸ್

Update: 2023-06-16 15:53 GMT

ದುಬೈ, ಜೂ. 16: ಅರಬ್ ಕೊಲ್ಲಿ ವಲಯದ ಮುಂಚೂಣಿಯ ವೈದ್ಯಕೀಯ ವಿಶ್ವವಿದ್ಯಾನಿಲಯಗಳ ಪೈಕಿ ಒಂದಾಗಿರುವ ಗಲ್ಫ್  ಮೆಡಿಕಲ್ ಯುನಿವರ್ಸಿಟಿ (ಜಿಎಮ್‌ಯು)ಯು 2023ರ ಸಾಲಿನ ಜಾಗತಿಕ ‘ಟೈಮ್ಸ್ ಹೈಯರ್ ಎಜುಕೇಶನ್ (ಟಿಎಚ್‌ಇ) ಇಂಪ್ಯಾಕ್ಟ್ ರ‍್ಯಾಂಕಿಂಗ್ಸ್’ನಲ್ಲಿ, ‘‘ಗುಣಮಟ್ಟದ ಶಿಕ್ಷಣ’’ ಮತ್ತು ‘‘ಆರೋಗ್ಯ ಮತ್ತು ಸೌಖ್ಯ’’ ಎರಡೂ ವಿಭಾಗಗಳಲ್ಲಿ 101ರಿಂದ 200ರ ನಡುವಿನ ಸ್ಥಾನವನ್ನು ಪಡೆದುಕೊಂಡಿದೆ.

ಅದೂ ಅಲ್ಲದೆ, ವಿಶ್ವವಿದ್ಯಾನಿಲಯವು ‘‘ಅಸಮಾನತೆಗಳನ್ನು ತಗ್ಗಿಸುವ’’ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ 95ನೇ ರ‍್ಯಾಂಕ್ ಗಳಿಸಿದೆ. ಇದು ಅಸಮಾನತೆಗಳನ್ನು ಕಡಿಮೆಗೊಳಿಸುವ ಹಾಗೂ ವೈವಿಧ್ಯತೆ ಮತ್ತು ಸರ್ವರ ಒಳಗೊಳ್ಳು ವಿಕೆಗೆ ಒತ್ತು ನೀಡುವ ವಿಶ್ವವಿದ್ಯಾನಿಲಯದ ಬದ್ಧತೆಗೆ ಪುರಾವೆಯಾಗಿದೆ ಎಂದು ಗಲ್ಫ್  ಮೆಡಿಕಲ್ ಯುನಿವರ್ಸಿಟಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಈ ವರ್ಷದ ರ‍್ಯಾಂಕಿಂಗ್‌ಗಳಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯು ತನ್ನ ಹಿಂದಿನ ವರ್ಷದ ಸ್ಥಾನವನ್ನು ಗಣನೀಯ ಅಂತರದಿಂದ ಹಿಂದಿಕ್ಕಿದೆ. ಈ ಬಾರಿ ನೂರಕ್ಕೂ ಅಧಿಕ ಸ್ಥಾನಗಳನ್ನು ಜಿಗಿದಿರುವ ವಿಶ್ವವಿದ್ಯಾನಿಲಯವು, ಜಾಗತಿಕ ಮಟ್ಟದ 1,590 ವಿಶ್ವವಿದ್ಯಾನಿಲಯಗಳ ಪೈಕಿ 301-400ರಲ್ಲಿ ಸ್ಥಾನ ಪಡೆದಿದೆ. ಇದು ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪರಿಣಾಮಕ್ಕಾಗಿ ಶ್ರಮಿಸುವ ತನ್ನ ನಿರಂತರ ಬದ್ಧತೆಗೆ ಸಂದ ಪುರಸ್ಕಾರವಾಗಿದೆ ಎಂದು ವಿಶ್ವವಿದ್ಯಾನಿಲಯದ ಹೇಳಿಕೆ ತಿಳಿಸಿದೆ.

‘‘ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ನಾವು ಮಾಡಿರುವ ಸಾಧನೆಯ ಬಗ್ಗೆ ನನಗೆ ಅಗಾಧ ಹೆಮ್ಮೆಯಿದೆ’’ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸ್ಸಮ್ ಹಮ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ರ‍್ಯಾಂಕಿಂಗ್‌ನಲ್ಲಿ ನಾವು ಸಾಧಿಸಿರುವ ಈ ಗಣನೀಯ ಜಿಗಿತವು, ನಮ್ಮ ಬೋಧಕ ಸಿಬ್ಬಂದಿ, ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಹಾಗೂ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಹಿದ್ದೀನ್‌ರ ನಿರಂತರ ಬೆಂಬಲಕ್ಕೆ ಸಂದ ಜಯವಾಗಿದೆ’’ ಎಂದು ಅವರು ಹೇಳಿದ್ದಾರೆ.

ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 25ನೇ ವರ್ಷದಲ್ಲಿ ನಾವು ಪಡೆದಿರುವ ಈ ಯಶಸ್ಸು, ಹೊಸತನವನ್ನು ತರುವ, ಬೆಳೆಯುವ ಮತ್ತು ನಿರಂತರವಾಗಿ ಸುಧಾರಿಸುವ ನಮ್ಮ ಧ್ಯೇಯಕ್ಕೆ ಪ್ರೇರಕ ಶಕ್ತಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯದ ಗುಣಮಟ್ಟ ಮತ್ತು ಸಾಂಸ್ಥಿಕ ಪ್ರಭಾವ ವಿಭಾಗದ ಉಪ ಕುಲಪತಿ ಹಾಗೂ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಕಾಲೇಜ್ ಆಫ್ ಫಾರ್ಮಸಿಯ ಡೀನ್ ಪ್ರೊ. ಶರೀಫ್ ಖಲೀಫ, ಶೈಕ್ಷಣಿಕ ವಿಭಾಗದ ಉಪ ಕುಲಪತಿ ಹಾಗೂ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮೆಡಿಸಿನ್‌ನ ಡೀನ್ ಪ್ರೊ. ಮಂದ ವೆಂಕಟರಾಮನ್ ಮತ್ತು ತುಂಬೆ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಪ್ರೆಸಿಶನ್ ಮೆಡಿಸಿನ್‌ನ ನಿರ್ದೇಶಕ ಪ್ರೊ. ಸಲೀಮ್ ಚೌಯಬ್ ವಿಶ್ವವಿದ್ಯಾನಿಲಯದ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Similar News