ತಾಲಿಬಾನ್ ಸರಕಾರದ ಮಾನ್ಯತೆ ಅಸಾಧ್ಯ: ವಿಶ್ವಸಂಸ್ಥೆ

ಮಹಿಳೆಯರ ಮೇಲಿನ ನಿರ್ಬಂಧ ತೆರವಿಗೆ ಆಗ್ರಹ

Update: 2023-06-22 17:18 GMT

ವಿಶ್ವಸಂಸ್ಥೆ: ಅಫ್ಘಾನ್ ನಲ್ಲಿ  ಮಹಿಳೆಯರ ಹಕ್ಕುಗಳಿಗೆ ನಿರ್ಬಂಧ ಜಾರಿಯಲ್ಲಿರುವವರೆಗೆ ಅಲ್ಲಿನ ತಾಲಿಬಾನ್ ಸರಕಾರವನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡುವುದು ಬಹುತೇಕ ಅಸಾಧ್ಯವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.

‘ಅಫ್ಘಾನ್ನಲ್ಲಿ ವಾಸ್ತವಿಕ ಅಧಿಕಾರಿಗಳೊಂದಿಗೆ ನನ್ನ ನಿಯಮಿತ ಚರ್ಚೆಯ ಸಂದರ್ಭ ಅವರು ಜಾರಿಗೆ ತಂದಿರುವ ನಿರ್ಬಂಧಗಳು (ವಿಶೇಷವಾಗಿ ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ) ಯಾವ ರೀತಿ ಅವರಿಗೆ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವುದಕ್ಕೆ ಅಡ್ಡಿಯಾಗುತ್ತಿದೆ ಎಂಬುದನ್ನು ವಿವರಿಸಿದ್ದೇನೆ’ ಎಂದು ಅಫ್ಘಾನ್ ನಲ್ಲಿ ವಿಶ್ವಸಂಸ್ಥೆಯ ನೆರವು ನಿಯೋಗದ ಮುಖ್ಯಸ್ಥೆ ರೋಝಾ ಒಟುಂಬಯೆವ ಹೇಳಿದ್ದಾರೆ. ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘ವಿಶ್ವಸಂಸ್ಥೆ ಮತ್ತದರ ಸದಸ್ಯ ದೇಶಗಳು ಮಾನ್ಯತೆ ನೀಡಬೇಕು ಎಂದು ತಾಲಿಬಾನ್ ಬಯಸುತ್ತಿದೆ. ಆದರೆ ಇದೇ ವೇಳೆ, ವಿಶ್ವಸಂಸ್ಥೆಯ ಸನದಿನಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಸಿದ್ಧಾಂತಗಳಿಗೆ ವಿರುದ್ಧವಾಗಿ ಅವರು ವರ್ತಿಸುತ್ತಿದ್ದಾರೆ. ಮಹಿಳೆಯರ ಹಕ್ಕುಗಳ ಮೇಲಿನ ನಿರ್ಬಂಧದ ಕುರಿತ ಆದೇಶ ಜಾರಿಯಲ್ಲಿರುವವರೆಗೆ ಅವರ ಸರಕಾರವನ್ನು ಅಂತರಾಷ್ಟ್ರೀಯ ಸಮುದಾಯ ಮಾನ್ಯ ಮಾಡುವುದು ಬಹುತೇಕ ಅಸಾಧ್ಯ’ ಎಂದು ತಾಲಿಬಾನ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಲಾಗಿದೆ ಎಂದು ರೋಝಾ ಒಟುಂಬಯೆವ ಹೇಳಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವನ್ನು ಯಾವುದೇ ದೇಶ ಅಥವಾ ಅಂತರಾಷ್ಟ್ರೀಯ ಸಂಘಟನೆ ಅಧಿಕೃತವಾಗಿ ಮಾನ್ಯ ಮಾಡಿಲ್ಲ. 2021ರಲ್ಲಿ ಅಧಿಕಾರಕ್ಕೆ ಮರಳಿದಂದಿನಿಂದ ತಾಲಿಬಾನ್ ಆಡಳಿತವು ಮಹಿಳೆಯರ ಮೇಲೆ ಹಲವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದನ್ನು, ಸರಕಾರಿ ಉದ್ಯೋಗ ಪಡೆಯುವುದನ್ನು, ಸ್ಥಳೀಯ ಮತ್ತು ಅಂತರಾಷ್ಟ್ರೀಯ ಎನ್ಜಿಒ(ಸರಕಾರೇತರ) ಸಂಘಟನೆಗಳಲ್ಲಿ ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಮಹಿಳೆಯರ ಹಕ್ಕುಗಳನ್ನು ನಿರ್ಬಂಧಿಸುವ ಇಂತಹ ಕ್ರಮಗಳನ್ನು ಅಫ್ಘಾನ್ನ ಜನರೇ ವಿರೋಧಿಸುತ್ತಿದ್ದಾರೆ. ಈ ಕ್ರಮಗಳಿಗಾಗಿ ತಾಲಿಬಾನ್ ಅಧಿಕಾರಿಗಳು ಸ್ಥಳೀಯವಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೆಲೆಯನ್ನು ತೆರಬೇಕಾಗಿದೆ. ಸ್ಥಳೀಯವಾಗಿ ಹೇಳುವುದಾದರೆ ದೇಶದ ಜನಸಂಖ್ಯೆಯ 50%ದಷ್ಟು ಜನರಿಗೆ ಸಂಕಷ್ಟ ತರುವ ನೀತಿಯಿಂದಾಗಿ ಅರ್ಥವ್ಯವಸ್ಥೆಗೆ ಹಾನಿಯಾಗುತ್ತಿದೆ. ಕಳೆದ ಎಪ್ರಿಲ್ನಲ್ಲಿ ವಿದೇಶಿ ಎನ್ಜಿಒಗಳಲ್ಲಿ ಕೆಲಸ ಮಾಡುವುದಕ್ಕೆ ಇದ್ದ ನಿರ್ಬಂಧವು ಅಫ್ಘಾನಿಸ್ತಾನದ ಆದ್ಯಂತದ ವಿಶ್ವಸಂಸ್ಥೆ ಕಚೇರಿಗೂ ವಿಸ್ತರಣೆಯಾಗಿದೆ. 

ಇದಕ್ಕೆ ಅಲ್ಲಿನ ಅಧಿಕಾರಿಗಳು ಯಾವುದೇ ವಿವರಣೆ ನೀಡಿಲ್ಲ ಅಥವಾ ನಿರ್ಬಂಧ ಯಾವಾಗ ತೆರವಾಗುತ್ತದೆ ಎಂದು ಮಾಹಿತಿ ನೀಡಿಲ್ಲ. ಅಲ್ಲಿರುವ ನಮ್ಮ ಮಹಿಳಾ ಸಿಬಂದಿಗಳನ್ನು ಅಪಾಯಕ್ಕೆ ಒಡ್ಡಲು ನಾವು ಸಿದ್ಧವಿಲ್ಲ. ಆದ್ದರಿಂದ ಕಚೇರಿಗೆ ಬರಬೇಡಿ ಎಂದವರಿಗೆ ಸೂಚಿಸಿದ್ದೇವೆ. ತಾರತಮ್ಯ ಮಾಡದಿರುವ ನಮ್ಮ ನೀತಿಗೆ ಅನುಗುಣವಾಗಿ ಅಗತ್ಯವಿಲ್ಲದ ಪುರುಷ ಸಿಬಂದಿಗಳನ್ನೂ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.

Similar News