ರಾಜ್ಯದಲ್ಲಿ ಖಾಸಗಿ ಮತ್ತು ವಿದೇಶಿ ಕೃಷಿ ವಿವಿಗಳಿಗೆ ಅನುಮತಿ ಬೇಕೆ?

ದೇಶದಲ್ಲಿ ಶೇ.99ರಷ್ಟು ಕೃಷಿ ಶಿಕ್ಷಣ ನಡೆಯುತ್ತಿರುವುದು ಕೇವಲ ಸರಕಾರಿ ವಿವಿಗಳಿಂದ ಮಾತ್ರ. ದೇಶವು ಕೃಷಿ ರಂಗದಲ್ಲಿ ಹಸಿರು, ಹಳದಿ, ನೀಲಿ, ಬಿಳಿ, ಸ್ವರ್ಣ ಮುಂತಾದ ಅನೇಕ ಕ್ರಾಂತಿಗಳನ್ನು ಮೂಡಿಸಿ, ಆಹಾರ ಭದ್ರತೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿರುವುದು ಕೇವಲ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಿಂದ ಎಂಬುದನ್ನು ನಾವು ಮರೆಯಬಾರದು. ಸರಕಾರವೇ ಸರಕಾರಿ ಕೃಷಿ ಶಿಕ್ಷಣ ಕೀಳೆಂದರೆ ನ್ಯಾಯ ಎಲ್ಲಿದೆ? ಫಿನ್ಲ್ಯಾಂಡ್, ಜರ್ಮನಿ, ಸ್ವೀಡನ್, ಆಸ್ಟ್ರೇಲಿಯ ಮತ್ತು ಅಮೆರಿಕದ ಸರಕಾರಿ ಶಿಕ್ಷಣವನ್ನು ಕೊಂಡಾಡುವ ನಾವು, ಸಂವಿಧಾನಬದ್ಧವಾಗಿ ನಮ್ಮಲ್ಲಿರುವ ಉತ್ಕೃಷ್ಟ ಕೃಷಿ ಶಿಕ್ಷಣವನ್ನು ಉಳಿಸಿ ಬೆಳೆಸಿಕೊಳ್ಳಬೇಕೇ ವಿನಹಃ ಕಳೆದುಕೊಳ್ಳುವ ಆಲೋಚನೆ ಮಾಡಬಾರದು.

Update: 2024-11-24 08:28 GMT

ಸಾಂದರ್ಭಿಕ ಚಿತ್ರ

1997ರ ಎಂ.ಎಸ್. ಸ್ವಾಮಿನಾಥನ್ ಸಮಿತಿ ವರದಿಯ ಪ್ರಕಾರ (ಕೃಷಿ ಶಿಕ್ಷಣ-1997) ದೇಶದಲ್ಲಿರುವ ಖಾಸಗಿ ಕೃಷಿ ಕಾಲೇಜುಗಳು ಸೂಕ್ತ ಸೌಲಭ್ಯವಿಲ್ಲದೆೆ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಹಾಗಾಗಿ ಅಪ್ರಯೋಜಕ ಕೃಷಿ ಪದವೀಧರರು ಹೊರಹೊಮ್ಮುತ್ತಿದ್ದಾರೆ ಎಂದು ದಾಖಲಿಸಲಾಗಿದೆ. ಅದೇ ವರದಿಯ ಪುಟ 13ರಲ್ಲಿ ಕೃಷಿ ಶಿಕ್ಷಣ ರಾಜ್ಯ ವ್ಯಾಪ್ತಿಯಲ್ಲಿದ್ದು, ಗುಣಮಟ್ಟ ಕಾಪಾಡಲು ಸರಕಾರವೇ ಆಯವ್ಯಯವನ್ನು ನೋಡಿಕೊಳ್ಳುವುದು ಮೂಲಭೂತ ಕರ್ತವ್ಯ ಮತ್ತು ಸೂಕ್ತ ಎಂದು ಅಭಿಪ್ರಾಯ ಪಡಲಾಗಿದೆ.

ದೇಶದಲ್ಲಿ ಕೃಷಿ ಶಿಕ್ಷಣ, ರಾಜ್ಯ ಸರಕಾರಗಳ ನಿಯಂತ್ರಣದಲ್ಲಿರಬೇಕೆಂಬ ನಿಯಮ ಭಾರತೀಯ ಅನುಸಂಧಾನ ಪರಿಷತ್ತಿನಲ್ಲಿದೆ. ಹಾಗಾಗಿ ಎಲ್ಲಾ ರಾಜ್ಯಗಳು ಇದನ್ನು ಪಾಲಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿಯೂ ಕೃಷಿ ಶಿಕ್ಷಣ 1963 ಕೃಷಿ ಕಾಯ್ದೆಗೆ ಒಳಪಟ್ಟಿದ್ದು ನಂತರ 2009ರಲ್ಲಿ ತಿದ್ದುಪಡಿಗಳೊಂದಿಗೆ ಹೊಸ ಕಾಯ್ದೆ ಜಾರಿ ಮಾಡಲಾಗಿದೆ.

2014ರಲ್ಲಿ ಬೆಂಗಳೂರಿನ ರೈ ಟೆಕ್ ಎಂಬ ಖಾಸಗಿ ಶಿಕ್ಷಣ ಸಂಸ್ಥೆ ಇಂಜಿನಿಯರಿಂಗ್ ಜೊತೆಗೆ ಕೃಷಿ ಪದವಿ ನೀಡಲು ನಿಯಮಬಾಹಿರವಾಗಿ ಉನ್ನತ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿತ್ತು. ಐಸಿಎಆರ್ ಮಾನದಂಡಗಳನ್ನು ಗಾಳಿಗೆ ತೂರಿ, ನಾಲ್ಕು ಗೋಡೆಗಳ ಮಧ್ಯೆ ವಾರ್ಷಿಕ ಸುಮಾರು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುತ್ತಿತ್ತು. ಮುಂದೆ ತನ್ನ ವಿದ್ಯಾರ್ಥಿಗಳಿಗೆ ರಾಜ್ಯದ ಎಲ್ಲಾ ಸರಕಾರಿ ಕೃಷಿ ವಿವಿಗಳಲ್ಲಿ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ ಅವಕಾಶ ನೀಡುವಂತೆ ಕೋರಿತ್ತು. (ರಿಟ್ ಪಿಟಿಷನ್ ನಂ. 22103/2018 ರೈ ಟೆಕ್ / ಕರ್ನಾಟಕ ಸರಕಾರ, ಕೃಷಿ ಇಲಾಖೆ, ಕರ್ನಾಟಕ). ನಂತರ ಸರಕಾರ ಮತ್ತು ಎಲ್ಲಾ ಕೃಷಿ ವಿವಿಗಳು ಸೇರಿ ಅನುಮತಿಯನ್ನು ನಿರಾಕರಿಸಿದರಲ್ಲದೆ, ಕೇವಲ ಐಸಿಎಆರ್/ಸರಕಾರಿ ಮಾನ್ಯತೆಯ ಕೃಷಿ ಪದವೀಧರರು ಮಾತ್ರ ತಮ್ಮಲ್ಲಿ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಹರು ಎಂಬ ನಿಯಮಗಳನ್ನು ಜಾರಿಗೆ ತಂದರು.

ಇದರ ಮಧ್ಯೆ ಖಾಸಗಿ ಕೃಷಿ ಶಿಕ್ಷಣಕ್ಕೆ ಅಫಿಲಿಯೇಶನ್ ನೀಡಲು ಕರ್ನಾಟಕ ಕೃಷಿ ಇಲಾಖೆಯು 2015ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಐಸಿಎಆರ್ ನಿಯಮಗಳನ್ನು ಶೇ. 10 ರಷ್ಟು ಪಾಲಿಸಲಾಗದ ಖಾಸಗಿಯವರಿಗೆ ಅಫಿಲಿಯೇಶನ್ ನೀಡಬಾರದೆಂದು ಮತ್ತು ಬೆಂಗಳೂರಿನ ರೈ ಟೆಕ್ ಖಾಸಗಿ ವಿವಿಯಲ್ಲಿ ಕೃಷಿ ಪದವಿಯನ್ನು ನಿಲ್ಲಿಸಬೇಕೆಂದು 2016ರಲ್ಲಿ ರಾಜ್ಯದ 5 ಸರಕಾರಿ ಕೃಷಿ ವಿವಿ ವಿದ್ಯಾರ್ಥಿಗಳು ಸತತ ಒಂದು ವಾರದ ಕಾಲ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಮತ್ತು ರೈತ ಮುಖಂಡರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದರು ಮತ್ತು ಅಂದಿನ ಸದನದಲ್ಲಿಯೂ ಖಾಸಗಿ ಕೃಷಿ ಶಿಕ್ಷಣದ ಬಗ್ಗೆ ಪ್ರಶ್ನೆ ಎದ್ದಿತ್ತು. ಪ್ರತಿಭಟನೆಗೆ ಸ್ಪಂದಿಸಿದ ಅಂದಿನ ಕೃಷಿ ಮಂತ್ರಿ ಕೃಷ್ಣ ಭೈರೇಗೌಡರು ಖಾಸಗಿ ಅಫಿಲಿಯೇಶನ್ ಪಕ್ರಿಯೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದರು. ವಿಶೇಷವಾಗಿ ರೈ ಟೆಕ್ ಅಕ್ರಮ ಕೃಷಿ ಶಿಕ್ಷಣವನ್ನು ಅಧ್ಯಯನ ಮಾಡಲು ಬೆಂಗಳೂರು ಕೃವಿವಿಯ ವಿಶ್ರಾಂತ ಕುಲಪತಿಗಳಾದ ಡಾ. ಶೀಲವಂತರ ನೇತೃತ್ವದಲ್ಲಿ ಒಂದು ವಿಚಾರಣಾ ಸಮಿತಿಯನ್ನು ರಚಿಸಿದ್ದರು.

ಮುಂದೆ, 09.10.2017ರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, 28.06.2017ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಖಾಸಗಿಯವರಿಗೆ ಅಫಿಲಿಯೇಶನ್ ನೀಡಲು ಅಧಿಸೂಚನೆ ಮಾಡಿದವು. ಇದನ್ನು ಬೆಂಗಳೂರು ಕೃಷಿ ವಿವಿ ಸಹ ಎಲ್ಲರಿಗಿಂತ ಮೊದಲೇ ಮಾಡಿತ್ತು. ನಂತರ ಬೆಂಗಳೂರು ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿಯ 371ನೇ ಸಭೆಯ ತೀರ್ಮಾನದಂತೆ ಸ್ಥಳೀಯ ಉಪ ಸಮಿತಿಯು ಅಫಿಲಿಯೇಶನ್ ಕೋರಿರುವ ಕಾಲೇಜುಗಳನ್ನು ಸಂದರ್ಶಿಸಿ ವರದಿ ಸಲ್ಲಿಸಿತ್ತು. ಆದರೆ, ಇತರ ಯಾವುದೇ ಕೃವಿವಿಗೆ ಅಂದು ಸೂಕ್ತವಾದ ಅಪ್ಲಿಕೇಶನ್ ಬಂದಿರಲಿಲ್ಲವಾದ್ದರಿಂದ, ಅಲ್ಲಿ ಅಫಿಲಿಯೇಶನ್ ಪ್ರಶ್ನೆಯೇ ಬರಲಿಲ್ಲ.

ಬೆಂಗಳೂರು ಕೃಷಿ ವಿವಿಯ 375ನೇ ವ್ಯವಸ್ಥಾಪನಾ ಮಂಡಳಿ ಸಭೆಯ ನಡವಳಿಗಳ ಪ್ರಕಾರ, (11ನೇ ಜುಲೈ 2017) ಅಫಿಲಿಯೇಶನ್ ಬಯಸಿದ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿದ ಸ್ಥಳೀಯ ತನಿಖಾ ಸಮಿತಿಯು ತಮ್ಮ ವರದಿಯಲ್ಲಿ ಸೂಕ್ತ ಸೌಲಭ್ಯ ಮತ್ತು ಗುಣಮಟ್ಟವಿಲ್ಲದ ಶಿಕ್ಷಣವು ಕೃಪಾಂಕಗಳನ್ನು ನೀಡಿ ತಾರತಮ್ಯ ಮಾಡುತ್ತಾ, ಭಾರೀ ಡೊನೇಶನ್ಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಕೃಷಿ ರಂಗಕ್ಕೆ ಮಾರಕ ಎಂದು ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ವಿಷಯವನ್ನು ಮುಂದೂಡಿತ್ತು. ಅಂದು ಸಮಿತಿಯ ನೇತೃತ್ವ ವಹಿಸಿದವರು, ಖಾಸಗಿ ಕೃಷಿ ಶಿಕ್ಷಣದ ವಿರುದ್ಧ ಸೈದ್ಧಾಂತಿಕ ನಿಲುವು ಹೊಂದಿದ್ದ ಮಾಜಿ ವ್ಯವಸ್ಥಾಪನಾ ಮಂಡಳಿ ಸದಸ್ಯರೂ ಆದ ದಿ. ಪ್ರೊ. ಶಕುಂತಲಾ ಶ್ರೀಧರ್. ಅಲ್ಲಿಗೆ ಅಫಿಲಿಯೇಶನ್ ವಿಷಯ ತಾತ್ಕಾಲಿಕವಾಗಿ ನಿಂತಿತ್ತು.

2017 ಮತ್ತು 2018ರಲ್ಲಿ ರಾಜ್ಯದಾದ್ಯಂತ ಕೃಷಿ ವಿದ್ಯಾರ್ಥಿಗಳು ಖಾಸಗಿ ಕೃಷಿ ಶಿಕ್ಷಣವನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನಾಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸಚಿವರು ಹಾಗೂ ಪ್ರಗತಿಪರ ಹೋರಾಟಗಾರರಾದ ಬಿ.ಟಿ. ಲಲಿತಾ ನಾಯಕ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಘಯ್ಯ, ಉಪಾಧ್ಯಕ್ಷ ರಾಮಸ್ವಾಮಿಯವರು ಖಾಸಗಿ ಕೃಷಿ ಶಿಕ್ಷಣದಿಂದ ಕೃಷಿ ರಂಗಕ್ಕೂ ಮಾರಕ ಮತ್ತು ಗ್ರಾಮೀಣ ರೈತಾಪಿ ವರ್ಗದ ಶಿಕ್ಷಣಕ್ಕೂ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಸರಕಾರವನ್ನು ಎಚ್ಚರಿಸಿದ್ದರು.

ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲಿಯೇಶನ್ ನೀಡದಂತೆ ಮತ್ತು ರೈ ಟೆಕ್ ಎಂಬ ಖಾಸಗಿ ವಿವಿಯನ್ನು ಮುಚ್ಚಿಸಬೇಕಾಗಿ ದಿ: 19-6-2018ರಂದು ರಾಜ್ಯದ ಎಲ್ಲಾ ಕೃಷಿ ವಿವಿಯ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಟೌನ್ಹಾಲ್ ಮುಂಭಾಗದಿಂದ ಫ್ರೀಡಂ ಪಾರ್ಕ್ವರೆಗೂ ಕಾಲು ನಡಿಗೆಯಲ್ಲಿ ಜಾಥಾ ಮಾಡಿ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಹಾಜರಾದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕೃಷಿ ಪದವೀಧರರೂ ಆದ ಕೃಷಿ ಸಚಿವ ಶಿವಶಂಕರ ರೆಡ್ಡಿಯವರು ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ವಿದ್ಯಾರ್ಥಿ ನಾಯಕರ ಸಭೆಯನ್ನು ಕರೆದು ಖಾಸಗೀಕರಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಾಗಾಗಿ ಅಂದಿನ ವಿದ್ಯಾರ್ಥಿ ಸಮೂಹ ಪರೀಕ್ಷೆಗಳನ್ನು ಬದಿಗೊತ್ತಿ ಸುಮಾರು ಒಂದು ತಿಂಗಳ ಕಾಲ ಎಲ್ಲಾ ಕೃಷಿ ವಿವಿಯಲ್ಲಿ ಪ್ರತಿಭಟನೆ ಮುಂದುವರಿಸಿತ್ತು. ಆನಂತರ 02.07.2018ರಂದು ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಪ್ರೀಡಂ ಪಾರ್ಕ್ವರೆಗೂ 2ನೇ ಬೃಹತ್ ರ್ಯಾಲಿ ನಡೆಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸದನದಲ್ಲಿ ಪಕ್ಷ ಮತ್ತು ವಿಪಕ್ಷಗಳಿಂದ ವಿಷಯ ಚರ್ಚೆಗೆ ಬಂತು. ರೈ ಟೆಕ್ಗೆ ಶೀಲವಂತರ್ ಸಮಿತಿಯನ್ನು ಕೂಡಲೇ ಮತ್ತೊಮ್ಮೆ ಕಳುಹಿಸಲಾಯಿತು. ಕೃಷಿ ಸಚಿವ ಶಿವಶಂಕರ ರೆಡ್ಡಿಯವರ ಬದ್ಧತೆಯಿಂದ 2018ರ ಸದನದಲ್ಲಿ ರೈ ಟೆಕ್ ವಿರುದ್ಧ ವಿಧೇಯಕವನ್ನು ಮಂಡಿಸಲಾಯಿತು. ಖಾಸಗಿ ರೈ ಟೆಕ್ ವಿವಿಯ ಕಾಯ್ದೆಯಿಂದ ಕೃಷಿ ಪದವಿಯನ್ನು ಶಾಶ್ವತವಾಗಿ ಕೈಬಿಡಲಾಯಿತು ಮತ್ತು ಅಂದಿನ ಎಲ್ಲಾ ಅಫಿಲಿಯೇಶನ್ ಪ್ರಕ್ರಿಯೆಗಳನ್ನು ಸಹ ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.

ಹೀಗೆ, ಮಹಾರಾಷ್ಟ್ರದಲ್ಲಿ 2002ಕ್ಕೂ ಮುಂಚೆ ಖಾಸಗಿ ಕೃಷಿ ಶಿಕ್ಷಣ ಇರಲಿಲ್ಲ. ಆದರೆ ಸರಕಾರಿ ಕೃಷಿ ವಿವಿಗಳು ಅಫಿಲಿಯೇಶನ್ ನೀಡಲು ಪ್ರಾರಂಭ ಮಾಡಿದ ಪರಿಣಾಮ, ಕೇವಲ 2002 ರಿಂದ 2014ರಷ್ಟರೊಳಗೆ 156 ಕಾಲೇಜುಗಳು ಹುಟ್ಟಿಕೊಂಡವು. 2016ರಲ್ಲಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಐಸಿಎಆರ್ ಕೇಂದ್ರ ತಂಡ ಅಫಿಲಿಯೇಶನ್ ಕಾಲೇಜುಗಳಿಂದ ಶಿಕ್ಷಣ ಮತ್ತು ಸಂಶೋಧನೆಯಲ್ಲಾಗಿರುವ ಪರಿಣಾಮಗಳು, ಕ್ಷೀಣಿಸಿರುವ ಗುಣಮಟ್ಟವನ್ನು ಗಮನಿಸಿ ಅಫಿಲಿಯೇಶನ್ ನೀಡಲು ನಿರಾಕರಿಸಿತ್ತು. ಅಲ್ಲಿನ ರೈತರು ಖಾಸಗಿ ಕೃಷಿ ಕಾಲೇಜುಗಳನ್ನು ‘ಬಿಳಿ ಆನೆ’ಗಳೆಂದು ಟೀಕಿಸಿದ್ದರು.

ಆಂಧ್ರಪ್ರದೇಶದಲ್ಲಿ ಖಾಸಗಿ ಕೃಷಿ ಪದವೀಧರರು ರಾಜಕೀಯ ಬಲದಿಂದ 2017ರಲ್ಲಿ (ಜಿ.ಒ. 64) ಕೃಷಿ ಇಲಾಖೆಯ ಸರಕಾರಿ ಕೆಲಸಕ್ಕೆ ಐಸಿಎಆರ್ ಮಾನ್ಯತೆಯ ಪದವಿ ಕಡ್ಡಾಯ ಎಂಬ ಪದಗಳನ್ನು ತೆಗೆಸಿದ್ದರು. ಎಚ್ಚೆತ್ತ ಸರಕಾರಿ/ಐಸಿಎಆರ್ ಮಾನ್ಯತೆಯ ವಿದ್ಯಾರ್ಥಿಗಳು ಖಾಸಗಿಯವರ ಕಾಲೇಜುಗಳ ಬಿಟ್ಟಿ ಪದವಿಗಳ ಕರ್ಮಕಾಂಡ ಬೀದಿಗೆ ತಂದು, ಹೋರಾಡಿ ಜಿ.ಒ. 64ನ್ನು ಹಿಂಪಡೆಯುವಂತೆ ಮಾಡಿದ್ದರು. 1983-84ರಲ್ಲಿ ಕರ್ನಾಟಕದ ಕನಕಪುರ ರಸ್ತೆಯಲ್ಲಿ ಖಾಸಗಿ ಪಶುವೈದ್ಯಕೀಯ ಕಾಲೇಜೊಂದು ತಲೆ ಎತ್ತಿತ್ತು. ಅಂದಿನ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಗುಣಮಟ್ಟದ ಶಿಕ್ಷಣ ಕೊರತೆಯನ್ನು ಗಮನಿಸಿ ಖಾಸಗಿ ಪಶುವೈದ್ಯಕೀಯ ಕಾಲೇಜಿಗೆ ಬೀಗ ಹಾಕಿಸಿದ್ದು ಇತಿಹಾಸ.

2018ರಲ್ಲಿ ಗುಜರಾತ್ನ ಖಾಸಗಿ ಆರ್.ಕೆ. ವಿಶ್ವವಿದ್ಯಾಲಯ (ರೈ ಟೆಕ್) ತನ್ನಲ್ಲಿ ಓದಿದ ಕೃಷಿ ಪದವೀಧರರಿಗೆ ಸರಕಾರದ ಕೃಷಿ ವಿವಿಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶವನ್ನು ಕೋರಿ ಅಹಮದಾಬಾದ್ ನ್ಯಾಯಾಲಯದಲ್ಲಿ (ಅಪ್ಲಿಕೇಶನ್ ನಂ. 15,065 ಆಫ್ 2018 ಆರ್.ಕೆ. ವಿಶ್ವವಿದ್ಯಾಲಯ / ಆನಂದ್ ಕೃಷಿ ವಿವಿ) ಪ್ರಕರಣ ದಾಖಲಿಸಿತ್ತು. ಕೃಷಿ ಶಿಕ್ಷಣದ ಆಪತ್ತನ್ನು ಅರಿತ ಸರಕಾರಿ ಕೃಷಿ ವಿವಿಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಕೊನೆಗೆ, ನ್ಯಾಯಾಲಯ ಖಾಸಗಿ ಕೃಷಿ ವಿವಿ ಐಸಿಎಆರ್ ನಿಬಂಧನೆಗಳನ್ನು ಪಾಲಿಸುವಲ್ಲಿ ವಿಫಲವಾಗಿರುವ ಕಾರಣ, ಖಾಸಗಿ ವಿವಿಯ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಿದ್ದರು. 2018ರಲ್ಲಿ, ಹರ್ಯಾಣದಲ್ಲಿಯೂ ಸರಕಾರಿ ಕೃಷಿ ವಿದ್ಯಾರ್ಥಿಗಳು ಖಾಸಗಿ ಕೃಷಿ ಶಿಕ್ಷಣ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡರು. ಎಲ್ಲವನ್ನು ಗಮನಿಸಿದ ಐಸಿಎಆರ್ ಭಾರತದಲ್ಲಿ ಕೃಷಿ ಪ್ರವೇಶಾತಿ ಪರೀಕ್ಷೆಯಲ್ಲಿ ಐಸಿಎಆರ್ ಮಾನ್ಯತೆಯ ಕೃಷಿ ಪದವೀಧರರನ್ನು ಮಾತ್ರ ಪರಿಗಣಿಸಲು ನಿಯಮಗಳನ್ನು ರೂಪಿಸಿತು.

ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣದ ಹಾಗೆ ನಾಲ್ಕು ಗೋಡೆಗಳ ಮಧ್ಯೆ ಕೃಷಿ ಶಿಕ್ಷಣವನ್ನು ನಡೆಸಲಾಗುವುದಿಲ್ಲ. ಏಕೆಂದರೆ, ಐಸಿಎಆರ್ ಮಾನದಂಡಗಳ ಪ್ರಕಾರ ಕೇವಲ 60 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಒಂದು ಕೃಷಿ ಕಾಲೇಜಿಗೆ ಪ್ರಮುಖವಾಗಿ 26 ವಿಭಾಗಗಳು, ಪ್ರತ್ಯೇಕ ಸಂಶೋಧನಾ ಪ್ರಯೋಗಾಲಯಗಳು, ಸಂಶೋಧನಾ ತಾಕುಗಳು, ಸಂಶೋಧನಾ ಕೇಂದ್ರಗಳು ಬೇಕು, ಕನಿಷ್ಠ 45 ಪ್ರಾಧ್ಯಾಪಕರು, ಅದೂ ಯುಜಿಸಿ ಅರ್ಹತೆ ಹೊಂದಿರಬೇಕು, 43 ಆಡಳಿತ ಸಿಬ್ಬಂದಿಯನ್ನು ಹೊಂದಿರಬೇಕು, ಡೀನ್ ಕಚೇರಿಗೇನೆ ಪ್ರತ್ಯೇಕ 14 ಜನ ಸಿಬ್ಬಂದಿ ಬೇಕು. ಅಲ್ಲದೆ ಕನಿಷ್ಠ 30 ಹೆಕ್ಟೇರ್/74 ಎಕರೆ ಕೃಷಿ ಭೂಮಿ ಬೇಕು. ಯಾವ ಖಾಸಗಿ ಕಾಲೇಜು ಕೂಡಾ ಇಷ್ಟು ಸೌಲಭ್ಯಗಳನ್ನು ಹೊಂದಿರಲು ಸಾಧ್ಯವಿಲ್ಲ. ಸೌಲಭ್ಯವಿಲ್ಲದಿದ್ದರೆ ಅದು ಹೇಗೆ ವಿದ್ಯಾರ್ಥಿಗಳು ಕೃಷಿ ಪದವಿ ಕಲಿಯುತ್ತಾರೆೆ? ಹಾಗಾಗಿ ಎಲ್ಲಾ ರಾಜ್ಯಗಳು ಖಾಸಗಿ ಕೃಷಿ ಶಿಕ್ಷಣವನ್ನು ವಿರೋಧಿಸುತ್ತಿವೆ.

ಆದರೂ, ಇತ್ತೀಚೆಗೆ ಬೆಂಗಳೂರು ಕೃಷಿ ವಿವಿ ಖಾಸಗಿಯವರಿಗೆ ಅಫಿಲಿಯೇಶನ್ ನೀಡಲು ಮತ್ತೊಮ್ಮೆ ಪ್ರಕ್ರಿಯೆ ಪ್ರಾರಂಭಿಸಿತ್ತು. ಮಗದೊಮ್ಮೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು. ಲೆಕ್ಕಿಸದ ಬೆಂಗಳೂರು ಕೃಷಿ ವಿವಿ ಮತ್ತು ಕೃಷಿ ಇಲಾಖೆ ಯಾವುದೋ ಕಾಣದ ಕೈಗಳ ರಾಜಕೀಯದ ಒತ್ತಡಕ್ಕೆ ಮಣಿದು, ಯಾವುದೇ ಅಧಿಸೂಚನೆ ಇಲ್ಲದೆ, ಪತ್ರಿಕಾ ಪ್ರಕಟಣೆಯೂ ಇಲ್ಲದೆ ತರಾತುರಿಯಲ್ಲಿ ಅಕ್ಟೋಬರ್ 28, 2024ರಂದು 2 ಖಾಸಗಿ ಕೃಷಿ ಕಾಲೇಜುಗಳಿಗೆ ಅಫಿಲಿಯೇಷನ್ ನೀಡಲು ನಿರ್ಧಾರ ಕೈಗೊಂಡವು. ದೇಶದ ಸಾವಿರಾರು ಕೃಷಿ ವಿದ್ಯಾರ್ಥಿಗಳ ಒಂದು ದಶಕದ ಸೈದ್ಧಾಂತಿಕ ಹೋರಾಟಕ್ಕೆ ಕೇವಲ ಒಂದು ತಿಂಗಳಲ್ಲಿ ನೀರೆರಚಲಾಯಿತು, ಇದು ಕರ್ನಾಟಕ ಕೃಷಿ ಶಿಕ್ಷಣದ ಇತಿಹಾಸದಲ್ಲಿಯೇ ಕಪ್ಪು ದಿನ.

ಮತ್ತೊಂದು ಕಡೆ, ದಿನಾಂಕ 15.11.2024ರಂದು ಆಸ್ಟ್ರೇಲಿಯದ ವೆಸ್ಟ್ ಸಿಡ್ನಿ ವಿವಿಯ ಅಧಿಕಾರಿಗಳ ತಂಡ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಕೃಷಿ ವಿವಿ ಸ್ಥಾಪಿಸಲು ಅನುಮತಿ ಕೋರಿದೆ. ಸರಕಾರವು ಸಹ ಹಸಿರು ನಿಶಾನೆ ತೋರಿದೆ. ಆದರೆ, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಯಾವುದೇ ಹೊಸ (ಸರಕಾರಿ/ಖಾಸಗಿ) ಕೃಷಿ ಶಿಕ್ಷಣ ಸಂಸ್ಥೆ ಬರಬೇಕೆಂದರೂ ಕೃಷಿ ವಿವಿ ಕಾಯ್ದೆಯ ಪ್ರಕಾರ ಅದು ಆ ವಲಯದ ಸರಕಾರಿ ಕೃಷಿ ವಿವಿ ಮಾನದಂಡಗಳಿಗೆ ಒಳಪಡುತ್ತದೆ, ಅರ್ಥಾತ್ ಕೃಷಿ ಇಲಾಖೆಯ ನಿರ್ಧಾರವೇ ಪ್ರಮುಖ. ಆದ್ದರಿಂದ, ಸರಕಾರ ಏಕಾಏಕಿ ವಿದೇಶಿ ಕೃಷಿ ವಿವಿಗೆ ಅನುಮತಿಸಲು ಹೇಗೆ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಯಕ್ಷ ಪ್ರಶ್ನೆ.

ಕೊರೋನದ ನಂತರ ದೇಶದಲ್ಲಿ ನಿರುದ್ಯೋಗದ ಸಂಖ್ಯೆ ಹೆಚ್ಚಾಗಿದೆ. ಕೃಷಿ ಪದವೀಧರರು ಕೃಷಿ ರಂಗದ ಕೆಲಸಗಳನ್ನು ಬಿಟ್ಟು ಬ್ಯಾಂಕ್ ಸೆಕ್ಟರ್, ಎಲ್ಐಸಿ, ಖಾಸಗಿ ಕಂಪೆನಿಗಳಲ್ಲಿ 15 ರಿಂದ 20 ಸಾವಿರ ರೂ.ಗೆ ದುಡಿಯುತ್ತಿದ್ದಾರೆ. ಕೃಷಿ ಇಲಾಖೆಯು ಸಹ 6ರಿಂದ 7 ವರ್ಷಕ್ಕೊಮ್ಮೆ ನೇಮಕಾತಿಯನ್ನು ಮಾಡುತ್ತದೆ. ಆದರೆ, ಎಲ್ಲಾ ವಿವಿಗಳಿಂದ ಪ್ರತೀ ವರ್ಷ ಹೊರಹೊಮ್ಮುವ ಪದವಿ ಹಾಗೂ ಸ್ನಾತಕ ಪದವೀಧರರ ಸಂಖ್ಯೆ ಸಾವಿರಾರು. 2016ರಲ್ಲಿ ಕೃಷಿ ಇಲಾಖೆ ಕರೆದ 546 ಹುದ್ದೆಗಳಿಗೆ ಸುಮಾರು 10 ಸಾವಿರ ಅಪ್ಲಿಕೇಶನ್ ಬಂದಿದ್ದವು. ಈಗ 2024ರಲ್ಲಿ ಇನ್ನಷ್ಟು ಸಾವಿರ ಪದವೀಧರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಹುಶಃ ಈಗ ಸರಕಾರವೇ ಔದ್ಯೋಗಿಕ ಅಸ್ಥಿರತೆಯನ್ನು ಸೃಷ್ಟಿಸಲು ಹೊರಟಂತಿದೆ.

ಪ್ರಸಕ್ತ ಒಬ್ಬ ಎನ್ಆರ್ಐ ವಿದ್ಯಾರ್ಥಿ ಕೃಷಿ ವಿವಿಯಲ್ಲಿ ಶಿಕ್ಷಣ ಗಳಿಸಲು ವಾರ್ಷಿಕ ಶುಲ್ಕ ರೂ. 5 ಲಕ್ಷ. ಅದೇ ಸಾಮಾನ್ಯ ವಿದ್ಯಾರ್ಥಿ ಕಟ್ಟುವ ಸರಾಸರಿ ವಾರ್ಷಿಕ ಶುಲ್ಕ 15ರಿಂದ 40 ಸಾವಿರ ರೂ. ಒಂದು ವೇಳೆ ಖಾಸಗಿ ಶಿಕ್ಷಣಕ್ಕೆ ಅನುಮತಿ ನೀಡಿದರೆ ಸಾಮಾನ್ಯ ಗ್ರಾಮೀಣ ರೈತಾಪಿ ಮಕ್ಕಳು ಡೊನೇಷನ್ ಕಟ್ಟಲು ಸಾಧ್ಯವೇ? ಖಾಸಗಿಯವರು ಸಾಮಾಜಿಕ ನ್ಯಾಯ, ಮೀಸಲಾತಿಯನ್ನು ಪಾಲಿಸುವವರಲ್ಲ. ಕೃಷಿ ಕೋಟಾ ಮೀಸಲಾತಿಯನ್ನು ಖಂಡಿತಾ ನೀಡುವುದಿಲ್ಲ. ಇದು ಸಮಾಜದಲ್ಲಿ ಶ್ರೇಣೀಕೃತ ಕೃಷಿ ಶಿಕ್ಷಣಕ್ಕೆ ಮೊದಲ ಹೆಜ್ಜೆ ಆಗುತ್ತದೆ.

ಈ ಹಿಂದೆ ಅರಣ್ಯ ಸಚಿವರೊಬ್ಬರು ಉತ್ತರ ಕರ್ನಾಟಕದ ಜಿಲ್ಲೆಗೆ ಪ್ರತ್ಯೇಕ ಅರಣ್ಯ ಕೃಷಿ ವಿವಿಯನ್ನು ಕೇಳಿದ್ದರು. ಇನ್ನೊಬ್ಬ ನಾಯಕರು ಹಾಸನ ಜಿಲ್ಲೆಗೆ ಪ್ರತ್ಯೇಕ ಕೃಷಿ ವಿವಿಯ ಪ್ರಸ್ತಾವ ಚರ್ಚೆಗೆ ತಂದಿದ್ದರು. ಇದಲ್ಲದೆ ಇದೀಗ ಮಂಗಳೂರಿನ ಜನಪ್ರತಿನಿಧಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮೀನುಗಾರಿಕೆ ವಿಶ್ವವಿದ್ಯಾನಿಲಯದ ಬಗ್ಗೆ ಚರ್ಚಿಸುತ್ತಿದ್ದಾರೆ. ಮಂಡ್ಯದಲ್ಲಿ ಹೊಸ ಕೃಷಿ ವಿವಿ ಸ್ಥಾಪನೆ ಮಾಡಲು ಸರಕಾರ ಈಗಾಗಲೇ ಕಾರ್ಯನಿರತವಾಗಿದೆ. ವಿಪರ್ಯಾಸವೆಂದರೆ ಈಗಾಗಲೇ ಈ ಜಿಲ್ಲೆಗಳಲ್ಲಿ ಕೃಷಿ ಮತ್ತು ಪಶುಸಂಗೋಪನಾ ಸರಕಾರಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ನಮಗೆ ಖಾಸಗಿ ಮತ್ತು ವಿದೇಶಿ ಅಂದರೆ ಆಹ್ಲಾದಕರ ಭಾವನೆ.

ಪ್ರಸಕ್ತ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ದ್ವಂದ್ವ ನೀತಿಗೆ ಪ್ರತಿರೋಧವನ್ನು ಒಡ್ಡಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ರಾಜ್ಯ ಸರಕಾರವು 2023ರಲ್ಲಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ತಜ್ಞರ ಸಮಿತಿಯನ್ನು ರಚಿಸಿದೆ. ಇದರಲ್ಲಿ ಕೃಷಿ ಮತ್ತು ಸಂಬಂಧಿತ ವಿಜ್ಞಾನದ ವಿಷಯಯಗಳಿಗೂ ಪ್ರತ್ಯೇಕ ಉಪ ಸಮಿತಿಯನ್ನು ಸಹ ರಚಿಸಿದ್ದು, ರೂಪುರೇಷೆಗಳು ಇನ್ನೂ ಚರ್ಚೆಯ ಹಂತದಲ್ಲಿವೆ.

ಮತ್ತೊಂದು ಕಡೆ ಭಾರತ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಜಗತ್ತಿನ 100 ಅತ್ಯುತ್ತಮ ವಿದೇಶಿ ವಿವಿಗಳಿಗೆ ಅನುಮತಿ ನೀಡಲಾಗುವುದು ಎಂಬ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರದ ಶಿಕ್ಷಣ ನೀತಿಯನ್ನೇ ವಿರೋಧಿಸುವ ಕರ್ನಾಟಕ ಸರಕಾರ, ಕೃಷಿ ಶಿಕ್ಷಣದ ರೂಪು ರೇಷೆಗಳ, ಅಂಕಿ ಅಂಶಗಳ ಅರಿವಿಲ್ಲದೆ ಏಕಾಏಕಿ ವಿದೇಶಿ ಕೃಷಿ ವಿವಿಯ ಸ್ಥಾಪನೆಗೆ ತರಾತುರಿಯಲ್ಲಿ ಅನುಮತಿ ನೀಡುತ್ತಿದೆ. ಸರಕಾರವು ಯಾವ ತಜ್ಞರ ಸಮಿತಿಯ ಅಧ್ಯಯನದ ಆಧಾರದ ಮೇಲೆ ಖಾಸಗಿ ಮತ್ತು ವಿದೇಶಿ ಕೃಷಿ ಶಿಕ್ಷಣದ ಆರಂಭಕ್ಕೆ ಕೈ ಹಾಕಿದೆ ಎಂಬುದು ಪ್ರಶ್ನೆ. ಇದೇ ರಾಜ್ಯ ಸರಕಾರ ತರಾತುರಿಯಲ್ಲಿ ಬೆಲೆ ಇಲ್ಲದ ಕೃಷಿ ಡಿಪ್ಲೊಮಾ ಎಂಬ ಕೋರ್ಸನ್ನು ಪ್ರಾರಂಭಿಸಿ ನಂತರ ಅದನ್ನು ಮುಚ್ಚುವ, ಮುಂದುವರಿಸುವ ಆಟ ಆಡಿ ಸಾವಿರಾರು ಅಮಾಯಕ ಗ್ರಾಮೀಣ ರೈತರ ಮಕ್ಕಳನ್ನು ಬೀದಿ ಬೀದಿ ಅಲೆಯುವ ಹಾಗೆ ಮಾಡಿದ್ದು ಪ್ರಸಕ್ತ ಮರೆಯಲಾಗದ ನಿದರ್ಶನ.

ಖಾಸಗಿಯವರಿಗೆ ಅನುಮತಿಸಿದರೆ ಬೆಂಗಳೂರಿನ ನಾಲ್ಕು ಗೋಡೆಗಳ ಮಧ್ಯೆ ನೂರಾರು ಖಾಸಗಿ ಕೃಷಿ ಕಾಲೇಜುಗಳು ತಲೆ ಎತ್ತಲಿವೆ. ಪರಿಣಾಮ ಕೃಷಿ ಸಂಬಂಧಿತ ಕಾರ್ಪೊರೇಟ್ ಕಂಪೆನಿಗಳು ಸಂಶೋಧನೆಯ ಅನುಮತಿಯೇ ಇಲ್ಲದ ತಮ್ಮ ಕಂಪೆನಿಯ ನಕಲಿ ಬೀಜ, ಗೊಬ್ಬರ, ರಾಸಾಯನಿಕ ಉತ್ಪನ್ನಗಳನ್ನು ಪ್ರಮಾಣೀಕರಿಸಿ ಮಾರುಕಟ್ಟೆಗೆ ಬಿಡುತ್ತವೆ.

ಆದ್ದರಿಂದ, ಕರ್ನಾಟಕದಲ್ಲಿ ಖಾಸಗಿ ಮತ್ತು ವಿದೇಶಿ ಕೃಷಿ ಶಿಕ್ಷಣವನ್ನು ಅನುಮತಿಸುವ ಮುನ್ನ, ರಾಜ್ಯದ ಕೃಷಿ ಶಿಕ್ಷಣದ ಅಧ್ಯಯನಕ್ಕಾಗಿ ಒಂದು ಕೃಷಿ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿ ಅಧ್ಯಯನದ ಮೂಲಕ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಕೃಷಿ ಇಲಾಖೆ ಮತ್ತು ಸರಕಾರಿ ಕೃಷಿ ವಿವಿಗಳು ಪ್ರತೀ ಜಿಲ್ಲೆಯಲ್ಲೂ ನೂರಾರು ಎಕರೆ ಜಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ಅಲ್ಲಿ ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ಇನ್ನಷ್ಟು ಸರಕಾರಿ ಕೃಷಿ ಕಾಲೇಜುಗಳನ್ನು ತೆರೆಯುವುದು ಉತ್ತಮ ನಡೆಯಾಗಬಹುದು.

ದೇಶದಲ್ಲಿ ಶೇ.99ರಷ್ಟು ಕೃಷಿ ಶಿಕ್ಷಣ ನಡೆಯುತ್ತಿರುವುದು ಕೇವಲ ಸರಕಾರಿ ವಿವಿಗಳಿಂದ ಮಾತ್ರ. ದೇಶವು ಕೃಷಿ ರಂಗದಲ್ಲಿ ಹಸಿರು, ಹಳದಿ, ನೀಲಿ, ಬಿಳಿ, ಸ್ವರ್ಣ ಮುಂತಾದ ಅನೇಕ ಕ್ರಾಂತಿಗಳನ್ನು ಮೂಡಿಸಿ, ಆಹಾರ ಭದ್ರತೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿರುವುದು ಕೇವಲ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಿಂದ ಎಂಬುದನ್ನು ನಾವು ಮರೆಯಬಾರದು. ಸರಕಾರವೇ ಸರಕಾರಿ ಕೃಷಿ ಶಿಕ್ಷಣ ಕೀಳೆಂದರೆ ನ್ಯಾಯ ಎಲ್ಲಿದೆ? ಫಿನ್ಲ್ಯಾಂಡ್, ಜರ್ಮನಿ, ಸ್ವೀಡನ್, ಆಸ್ಟ್ರೇಲಿಯ ಮತ್ತು ಅಮೆರಿಕದ ಸರಕಾರಿ ಶಿಕ್ಷಣವನ್ನು ಕೊಂಡಾಡುವ ನಾವು, ಸಂವಿಧಾನಬದ್ಧವಾಗಿ ನಮ್ಮಲ್ಲಿರುವ ಉತ್ಕೃಷ್ಟ ಕೃಷಿ ಶಿಕ್ಷಣವನ್ನು ಉಳಿಸಿ ಬೆಳೆಸಿಕೊಳ್ಳಬೇಕೇ ವಿನಹಃ ಕಳೆದುಕೊಳ್ಳುವ ಆಲೋಚನೆ ಮಾಡಬಾರದು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Contributor - ಡಾ. ರಮೇಶ್ ಕೋಲಾರ

contributor

Similar News