ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ
ಪೈಯವರ ಸಂಶೋಧನೆಯಲ್ಲಿ ಪ್ರಾದೇಶಿಕ ಅಧ್ಯಯನದ ಬಹುತ್ವದ ಮಾದರಿಗಳು ದೊರೆಯುತ್ತವೆ. ಅವರು ಸ್ಥಳನಾಮಗಳು, ಧಾರ್ಮಿಕ ಕೇಂದ್ರಗಳು, ಧಾರ್ಮಿಕ ವ್ಯಕ್ತಿಗಳು, ಜಾನಪದ ಕಲೆಗಳು, ಪದ್ಧತಿಗಳು: ಇವೆಲ್ಲವನ್ನೂ ತಮ್ಮ ಅಧ್ಯಯನದ ಶಿಸ್ತಿಗೆ ಒಳಪಡಿಸುತ್ತಾರೆ. ಅವರು ವ್ಯಕ್ತಿ ಸಮುದಾಯ, ಕಾಲ ಮತ್ತು ಪರಿಸರಗಳನ್ನು ಸಮಗ್ರ, ಸಾವಯವ, ಸೂಕ್ಷ್ಮ ಅವಲೋಕನದ ಮೂಲಕ ಪರಿಶೀಲಿಸುತ್ತಾರೆ. ಇದು ನಾವು ಇವತ್ತು ಹೇಳುವ ಬಹುತ್ವದ ನಿಜವಾದ ಪರಿಕಲ್ಪನೆ. ರಾಷ್ಟ್ರಕವಿ ಗೋವಿಂದ ಪೈಯವರು ನಮಗೆ ಕಾವ್ಯಕ್ಷೇತ್ರದಲ್ಲಿ ಗಾಂಧಿವಾದಿಯಾಗಿ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಸಮಾಜವಾದಿಯಾಗಿ ಕಾಣಿಸುತ್ತಾರೆ. ಮತ್ತೆ ಮತ್ತೆ ಗೋವಿಂದ ಪೈ ನಮಗೆ ಬೇಕಾಗುತ್ತಾರೆ.;

ಕನ್ನಡದ ಮೊತ್ತ ಮೊದಲನೆಯ ರಾಷ್ಟ್ರಕವಿ ಗೋವಿಂದ ಪೈ (23 ಮಾರ್ಚ್ 1883-6 ಸೆಪ್ಟಂಬರ್ 1963) ಅವರನ್ನು ಕುರಿತು ರಾಷ್ಟ್ರಕವಿ ಕುವೆಂಪು ಹೇಳಿದ ಮಾತು: ‘‘ಅವರೇ ತಾವೊಂದು ಗೊಮ್ಮಟಸಮ ಮಹಾಕಾವ್ಯ’’. ಮಾಸ್ತಿಯವರು ಪೈಗಳ ಬಗ್ಗೆ ಹೇಳಿದ ಮಾತು: ‘‘ಕಾವ್ಯವನ್ನು ಬಾಳುವುದು, ಕಾವ್ಯವನ್ನು ಹಾಡುವುದು, ಹೊರಗಿನ ಇತಿಹಾಸ ಆತ್ಮದ ಇತಿಹಾಸದಲ್ಲಿ ಅನ್ವೇಷಣೆ ಮಾಡುವುದು-ಇದು ಇವರ ಜೀವನದ ಕಾರ್ಯಕ್ರಮ’’. ಆಧುನಿಕ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಕಾವ್ಯ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಸಮಪ್ರಮಾಣದಲ್ಲಿ ಮಹತ್ತರ ಸಾಧನೆ ಮಾಡಿದ ಗೊಮ್ಮಟ ಸದೃಶ ಸಾಹಿತಿ ಗೋವಿಂದ ಪೈ. 165 ಕನ್ನಡ ಕವಿತೆಗಳು, 235 ಸಂಶೋಧನಾ ಲೇಖನಗಳು/ಗದ್ಯ ಬರಹಗಳು, ಜಪಾನಿನ ಎಂಟು ನೋ ನಾಟಕಗಳ ಅನುವಾದ ಸಹಿತ 11 ನಾಟಕಗಳು: ಇದು ಪೈ ಅವರ ಬೃಹತ್ ವಾಙ್ಮಯ ಜಗತ್ತು.
ಕನ್ನಡ ಸಾಹಿತ್ಯ ಪರಿಷತ್ತು ಮುಂಬೈಯಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೋವಿಂದ ಪೈ ಅವರು ತಮ್ಮ ಭಾಷಣದಲ್ಲಿ ಹೇಳಿದ ಒಂದು ಮಾತು: ‘‘ನಾನು ಎರಡು ತಾಯಂದಿರ ಕೂಸು. ಕೊಂಕಣಿ ನನ್ನ ಹೆತ್ತ ತಾಯಿ; ಕನ್ನಡ, ಸಾಕುತಾಯಿ’’. ಅವರ ಜನಪ್ರಿಯ ಕವನ ‘ಕನ್ನಡಿಗರ ತಾಯಿ’ ಆರಂಭವಾಗುವುದು ಹೀಗೆ: ‘‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!’’
ಕವಿಯಾಗಿ ಗೋವಿಂದ ಪೈ ಅವರದ್ದು ಹೊಸ ಮಾರ್ಗದ ಅನ್ವೇಷಣೆ. ಹೊಸಗನ್ನಡ ಕವಿತೆಯಲ್ಲಿ ಆದಿಪ್ರಾಸದ ಕಟ್ಟಳೆಯನ್ನು ತ್ಯಜಿಸುವ ಧೈರ್ಯವನ್ನು ಮೊದಲು ಮಾಡಿದವರು ಗೋವಿಂದ ಪೈ. ಅವರ ಕವನ ಸಂಕಲನಗಳು: ಗಿಳಿವಿಂಡು, ನಂದಾದೀಪ, ಹೃದಯರಂಗ, ವಿಟಂಕ ಮತ್ತು ಖಂಡಕಾವ್ಯಗಳು.
ಗೋವಿಂದ ಪೈ ಅವರ ಖಂಡಕಾವ್ಯಗಳು ಬಹುಭಾಷೆಗಳ ಬಹುಧರ್ಮಗಳ ಬಹು ದಾರ್ಶನಿಕತೆಗಳ ಅಭಿವ್ಯಕ್ತಿಯ ದೃಷ್ಟಿಯಿಂದ ಕನ್ನಡದಲ್ಲಿ ವಿಶಿಷ್ಟವಾಗಿವೆ. ಯೇಸುವಿನ ಕಡೆಯ ದಿನವನ್ನು ಕುರಿತ ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ ದಿನವನ್ನು ಕುರಿತ ‘ವೈಶಾಖಿ’-ಕನ್ನಡದ ಮಹತ್ವದ ಎರಡು ಖಂಡಕಾವ್ಯಗಳು. ‘ಗೊಲ್ಗೊಥಾ’ದಲ್ಲಿ ಪೈಯವರು ‘ಹೊಸ ಒಡಂಬಡಿಕೆ’ ಬೈಬಲ್ ಪಠ್ಯದ ಸುವಾರ್ತೆಗಳನ್ನು ಆಕರಗಳನ್ನಾಗಿ ಬಳಸಿ, ಆ ಸುವಾರ್ತೆಗಳ ವಚನಗಳ ಭಾವಗಳನ್ನು ಕನ್ನಡದಲ್ಲಿ ತಂದಿದ್ದಾರೆ. ಅಲ್ಲಿ ಬರುವ ಅನೇಕ ಮಾತುಗಳು ಮತದ ಸಂಕುಚಿತತೆಯನ್ನು ಮೀರಿ ವಿಶ್ವಾತ್ಮಕತೆಯನ್ನು ಸಾರುತ್ತವೆ. ‘ಲೋಕವಿವನ ಮನೆ, ಲೋಕರುದ್ಧರಣವೇ ಮನೆವಾರ್ತೆ’; ‘ಸತ್ಯವೆನ್ನಯ ರಾಜ್ಯ, ಸತ್ಯವನ್ನೀಡೇರಿಸುವ ರಾಜನಾಮ್ ಗಡ’; ‘ಕ್ಷಮಿಸು ಇವರನು ಎಲೆ ತಂದೆ, ತಾವ್ ಏನನ್ ಎಸಗಿದಪೆವೆಂದು ಅರಿಯರ್ ಇವರು’. ‘ವೈಶಾಖಿ’ ಕಾವ್ಯದಲ್ಲಿ ಬುದ್ಧನ ಕಡೆಯ ದಿನದ ನಿರೂಪಣೆಯಲ್ಲಿ ‘ಬೌದ್ಧ ಧರ್ಮದ ಪಾಲಿ ಭಾಷೆಯಲ್ಲಿ ಇರುವ ಮಹಾಪರಿನಿಬ್ಬಾನ ಸುತ್ತವನ್ನು ಆಧರಿಸಿರುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ. ವೈಶಾಖಿ ಕಾವ್ಯದ ಬುದ್ಧ ವಚನಗಳು ಸಾರ್ವಕಾಲಿಕವಾಗಿವೆ: ‘ನೂರಾಳ್ಗಳಂ ರಣದಿ ಗೆದ್ದವಗಿಂತ ತನ್ನ ತಾಂ ಗೆದ್ದವನೆ ಜೇತರೊಳಗೆ ಉತ್ತಮಂ’; ‘ಯಾರು ಅನ್ಯ ಧರ್ಮಮಂ, ಯಾರು ಅನ್ಯ ಜನಗಳ ಸ್ವಾತಂತ್ರ್ಯವಂ ಮನ್ನಿಸುವರೊ ತಮ್ಮದರಂತೆ, ಅವರ ಧರ್ಮಂ, ಜನಂ, ಸ್ವಾತಂತ್ರ್ಯ ಬಾನಂತೆ ಬೆಳೆಯುತಿದೆ; ಯಾರು ಅನ್ಯ ಧರ್ಮವಂ ಅನ್ಯರ ಸ್ವಾತಂತ್ರ್ಯ ಕೆಡಿಸುವರೋ ಅವರ ಧರ್ಮಂ, ಜನಂ, ಸ್ವಾತಂತ್ರ್ಯವು ಎದ್ದ ತೆರೆಯಂತೆ ಕುಸಿದು ಅಳಿಯುತಿದೆ’.
ಪೈಯವರು ಮಹಾಪುರುಷರ ಕಡೆಯ ದಿನದ ಬಗ್ಗೆ ಬರೆದ ಎರಡು ಅಪೂರ್ಣ ಕಾವ್ಯಗಳು ಇವೆ: ಶ್ರೀಕೃಷ್ಣನ ಕೊನೆಯ ದಿನದ ಚಿತ್ರಣದ ‘ಪ್ರಭಾಸ’ ಮತ್ತು ಮಹಾತ್ಮಾ ಗಾಂಧಿ ಕೊನೆಯ ದಿನದ ಕುರಿತ ಖಂಡಕಾವ್ಯ ‘ದೆಹಲಿ’. ಯೇಸು, ಬುದ್ಧ, ಕೃಷ್ಣರ ಮೂಲಕ ಮೂರು ಧರ್ಮಗಳನ್ನು ಮತ್ತು ಗಾಂಧಿ ಮೂಲಕ ಆ ಮೂರರ ಸಂಯೋಗದ ವಿಶ್ವಾತ್ಮಕತೆಯನ್ನು ಸಾರುವ ಕಾವ್ಯಗಳು ಪೈ ಅವರ ಬಹುತ್ವದ ಪರಿಕಲ್ಪನೆಯ ಅಪೂರ್ವ ಮಾದರಿಗಳು.
ಗೋವಿಂದ ಪೈಯವರು ಗಾಂಧೀಜಿಯವರ ಸತ್ಯಾಗ್ರಹ ಚಳವಳಿಯಿಂದ ಪ್ರೇರಣೆ ಪಡೆದು ಅಸ್ಪಶ್ಯತಾ ನಿವಾರಣೆ, ಭಾವೈಕ್ಯ, ಸ್ವಾತಂತ್ರ್ಯ ಮುಂತಾದ ವಿಷಯಗಳ ಬಗ್ಗೆ ಕವನಗಳನ್ನು ಬರೆದರು. ಅವರು ಖಾದಿವ್ರತವನ್ನು ಸ್ವೀಕರಿಸಿ ತಮ್ಮ ಬದುಕಿನ ಕೊನೆಯವರೆಗೂ ಖಾದಿವಸ್ತ್ರವನ್ನೇ ಉಡುತ್ತಿದ್ದರು. ಪೈಯವರು ದೇಶಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳಲು ನೌಸಾರಿ ಯಾತ್ರೆಯನ್ನು ಕೈಗೊಂಡರು. ಅಲ್ಲಿ ಗಾಂಧಿಯವರ ಆಪ್ತರಾದ ಕಾಕಾ ಕಾಲೇಲ್ಕರ್ ಅವರ ಪರಿಚಯವಾಯಿತು. ಕಾಲೇಲ್ಕರರೊಂದಿಗೆ ಪೈಗಳಿಗಾದ ಪರಿಚಯ, ಮುಂದೆ ಒಂದು ಐತಿಹಾಸಿಕ ಘಟನೆಗೂ ಕಾರಣವಾಯಿತು. ಕಾಲೇಲ್ಕರರು ಒಮ್ಮೆ ಮಂಗಳೂರಿಗೆ ಬಂದಿದ್ದಾಗ ಮಿತ್ರರಾದ ಪೈಗಳನ್ನು ಭೇಟಿಯಾಗಲು ಮಂಜೇಶ್ವರಕ್ಕೆ ಹೋದರು. ಪೈಗಳು ಕಾಲೇಲ್ಕರ್ರಿಗೆ ತಮ್ಮಲ್ಲಿದ್ದ ಒಂದು ಊರುಗೋಲಿನ ಹಳೆಯ ಬೆತ್ತವನ್ನು ಉಡುಗೊರೆಯಾಗಿ ಕೊಟ್ಟರು. ಮಹಾತ್ಮಾ ಗಾಂಧಿಯವರು 1930ರಲ್ಲಿ ದಂಡಿಯಾತ್ರೆಗೆ ಹೊರಟಾಗ ಕಾಲೇಲ್ಕರ್ ಆ ಬೆತ್ತವನ್ನು ಗಾಂಧೀಜಿ ಅವರಿಗೆ ಕೊಟ್ಟರು. ಗಾಂಧಿಯವರು ದಂಡಿ ಯಾತ್ರೆಯಲ್ಲಿ ಬಳಸಿದ ಬೆತ್ತವು ಪೈಯವರು ಕಾಲೇಲ್ಕರ್ರಿಗೆ ಉಡುಗೊರೆಯಾಗಿ ಕೊಟ್ಟ ಬೆತ್ತವೇ ಆಗಿದೆ. (ಉಲ್ಲೇಖ: ಕಯ್ಯಾರ ಕಿಞ್ಞಣ್ಣ ರೈ: ಮಹಾಕವಿ ಗೋವಿಂದ ಪೈ).
ಗೋವಿಂದ ಪೈಯವರು ಗಾಂಧೀಜಿಯವರನ್ನು ಕುರಿತು ಆರು ಕವನಗಳನ್ನು ಬರೆದಿದ್ದಾರೆ. ಗಾಂಧಿಯವರ ಹತ್ಯೆಯ ಬಳಿಕ ಪೈ ಅವರು ಬರೆದ ಕವನ: ‘ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು’. ಅದರಲ್ಲಿ ಅವರು ಪರಿತಪಿಸುತ್ತಾರೆ: ‘‘ಸ್ವಾರ್ಥಪರರಾಗಿಹೆವು, ದೇವರಿಲ್ಲ ಎಮಗಿಂದು. ಸೋದರತೆ ಇಲ್ಲ, ಮುಂದಿನದು ಇಲ್ಲ ಗೊಡವೆ‘‘. ‘ಸತ್ತು ಗಡ ಬದುಕಿದಿ ಮಹಾತ್ಮ ನೀ ಧನ್ಯ’ ಕವನದಲ್ಲಿ ಪೈ ಹೇಳುತ್ತಾರೆ: ‘‘ಹೊಟ್ಟೆಬಟ್ಟೆಯ ಹಸಿವೆ ದಿಗ್ಬಗಿಯೆ ಮನನೊಂದು ಕಾವೆವು ಇನ್ನು ಎಂದು ಅಹುದೊ ಇದರ ಕೊನೆಯ ಅಂಕ’’. ಪೈ ಅವರ ಮಾನವೀಯ ತುಡಿತದ ಅನೇಕ ಕವನಗಳು ಇವೆ: ಅಣುಬಾಂಬು, ಹಿರೋಷಿಮಾ, ‘ಸತ್ತರೇ ಅಕಟ ಮೂವತ್ತಾಯಿದು ಲಕ್ಷ’, ‘ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ’ ಇತ್ಯಾದಿ.
ಪೈಯವರು 12ನೇ ಶತಮಾನದ ಪಾರಸಿ ಕವಿ ಉಮರ್ ಖಯ್ಯಾಮ್ನ ಐವತ್ತು ರುಬಾಯಿಯತ್ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರಲ್ಲಿ ಮೂಲ ಸಂಸ್ಕೃತಿಯ ಆಶಯ ಸ್ಪಷ್ಟವಾಗಿ ಕಾಣಿಸುತ್ತದೆ. ಅವರು ಡಾ. ಶೇರ್ ಮುಹಮ್ಮದ್ ಇಕ್ಬಾಲ್ರ ಉರ್ದು ಘಜಲ್ ಆಧರಿಸಿ ‘ಹಿಂದೂಸ್ತಾನ್ ಹಮಾರಾ’ ಎನ್ನುವ ಕವನವನ್ನು ರಚಿಸಿದ್ದಾರೆ.
ಸಂಶೋಧಕರಾಗಿ ಗೋವಿಂದ ಪೈ ಅವರದ್ದು ಮಹತ್ವದ ಸಾಧನೆ. ಅವರ ಗ್ರಂಥ ಸಂಗ್ರಹದಲ್ಲಿ 36 ಭಾಷೆಗಳ ಪುಸ್ತಕಗಳು ಇದ್ದುವು. ಮನೆಯಲ್ಲಿ ಇದ್ದುಕೊಂಡೇ ಅವರು ದೇಶ ವಿದೇಶಗಳಿಂದ ಅಪೂರ್ವ ಸಂಶೋಧನಾ ಗ್ರಂಥಗಳನ್ನು ಅಂಚೆಯಲ್ಲಿ ತರಿಸುತ್ತಿದ್ದರು. ಅವರಿಗೆ ಕೊಂಕಣಿ, ಕನ್ನಡ, ತುಳು, ಇಂಗ್ಲಿಷ್, ಬಂಗಾಳಿ, ಗುಜರಾತಿ, ಹಿಂದಿ, ಪ್ರಾಕೃತ, ಪಾಲಿ ಭಾಷೆಗಳ ಜ್ಞಾನ ಚೆನ್ನಾಗಿ ಇತ್ತು. ಅವರು ಲ್ಯಾಟಿನ್, ಗ್ರೀಕ್, ಪ್ರೆಂಚ್, ಸ್ಪ್ಯಾನಿಷ್ ಮುಂತಾದ ಅನೇಕ ವಿದೇಶಿ ಭಾಷೆಗಳನ್ನು ಕಲಿತಿದ್ದರು. ಪೈಯವರ ಸಮಗ್ರ ಗ್ರಂಥಭಂಡಾರವು ಪ್ರೊ. ಕು.ಶಿ. ಹರಿದಾಸ ಭಟ್ಟರ ವಿಶೇಷ ಪ್ರಯತ್ನದಿಂದ ಉಡುಪಿಯ ಎಂಜಿಎಂ ಕಾಲೇಜು ಮೂಲಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸುರಕ್ಷಿತವಾಗಿದೆ.
ಗೋವಿಂದ ಪೈ ಅವರ ಸಂಶೋಧನಾ ಲೇಖನಗಳ ಸಮಗ್ರ ಸಂಪುಟವು ಉಡುಪಿಯ ರಾ.ಗೋ.ಪೈ ಸಂಶೋಧನಾ ಕೇಂದ್ರದಿಂದ 1995ರಲ್ಲಿ ಪ್ರಕಟವಾಗಿದೆ. ಅದರ ಪರಿಷ್ಕೃತ ಎರಡನೆಯ ಆವೃತ್ತಿಯ ಮೊದಲನೆಯ ಭಾಗವು 2024ರಲ್ಲಿ ಬಿಡುಗಡೆಯಾಗಿದ್ದು, ಎರಡನೆಯ ಭಾಗವು ಪೈ ಅವರ ಜನ್ಮದಿನದಂದು ಇದೇ ಮಾರ್ಚ್ 23ರಂದು ಬಿಡುಗಡೆ ಆಗುತ್ತಿದೆ.
ಪೈಯವರ ಸಂಶೋಧನೆಯಲ್ಲಿ ಇತಿಹಾಸ, ಸಾಹಿತ್ಯ, ಭಾಷೆ, ಧರ್ಮ, ತತ್ವ ಜ್ಞಾನ: ಇಂತಹ ವಿಶಾಲ ಹರಹು ಇದೆ.ಇತಿಹಾಸದ ಅಧ್ಯಯನದಲ್ಲಿ ಅವರು ತುಳುನಾಡಿನಿಂದ ತೊಡಗಿ ಕರ್ಣಾಟಕ ಮತ್ತು ಭಾರತದ ಅಧ್ಯಯನಕ್ಕೆ ತಮ್ಮ ಕ್ಷೇತ್ರವನ್ನು ವಿಸ್ತರಿಸುತ್ತಾರೆ.
‘ಇತಿಹಾಸದ ಇರುಳಲ್ಲಿ ತುಳುನಾಡು’, ’ತುಳುನಾಡು: ಪೂರ್ವ ಸ್ಮತಿ’, ‘ಅಳಿಯಕಟ್ಟಿನ ಪ್ರಾಚೀನತೆ’, ‘ಪ್ತೊಲೊಮಿಯ ಹಿಪ್ಪೊಕೂರ’: ತುಳುನಾಡಿಗೆ ಸಂಬಂಧಿಸಿದ ಕೆಲವು ಮುಖ್ಯ ಬರಹಗಳು. ‘ಕನ್ನಡ ಸಾಹಿತ್ಯದ ಪ್ರಾಚೀನತೆ’, ‘ಕನ್ನಡಸಾಹಿತ್ಯದ ಹಳಮೆ’, ‘ಗ್ರೀಕ್ ಪ್ರಹಸನದಲ್ಲಿ ಕನ್ನಡ ಮಾತುಗಳು’: ಕನ್ನಡ ಸಾಹಿತ್ಯದ ಪ್ರಾಚೀನತೆಯ ದೃಷ್ಟಿಯಿಂದ ಮುಖ್ಯ ಬರಹಗಳು. ಪೈಗಳು ಪ್ರಾಚೀನ ಕವಿಗಳಾದ ಪಂಪ, ರನ್ನ, ನಾಗವರ್ಮ, ನಾಗಚಂದ್ರ, ದುರ್ಗಸಿಂಹ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಮುಂತಾದ ಕವಿಗಳ ಕಾಲ ದೇಶ ಮತಧರ್ಮಗಳ ಅಧ್ಯಯನದ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪೈಯವರ ಸಂಶೋಧನೆಯಲ್ಲಿ ಪ್ರಾದೇಶಿಕ ಅಧ್ಯಯನದ ಬಹುತ್ವದ ಮಾದರಿಗಳು ದೊರೆಯುತ್ತವೆ. ಅವರು ಸ್ಥಳನಾಮಗಳು, ಧಾರ್ಮಿಕ ಕೇಂದ್ರಗಳು, ಧಾರ್ಮಿಕ ವ್ಯಕ್ತಿಗಳು, ಜಾನಪದ ಕಲೆಗಳು, ಪದ್ಧತಿಗಳು: ಇವೆಲ್ಲವನ್ನೂ ತಮ್ಮ ಅಧ್ಯಯನದ ಶಿಸ್ತಿಗೆ ಒಳಪಡಿಸುತ್ತಾರೆ. ಅವರು ವ್ಯಕ್ತಿ ಸಮುದಾಯ, ಕಾಲ ಮತ್ತು ಪರಿಸರಗಳನ್ನು ಸಮಗ್ರ, ಸಾವಯವ, ಸೂಕ್ಷ್ಮ ಅವಲೋಕನದ ಮೂಲಕ ಪರಿಶೀಲಿಸುತ್ತಾರೆ. ಇದು ನಾವು ಇವತ್ತು ಹೇಳುವ ಬಹುತ್ವದ ನಿಜವಾದ ಪರಿಕಲ್ಪನೆ.
ರಾಷ್ಟ್ರಕವಿ ಗೋವಿಂದ ಪೈಯವರು ನಮಗೆ ಕಾವ್ಯಕ್ಷೇತ್ರದಲ್ಲಿ ಗಾಂಧಿವಾದಿಯಾಗಿ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಸಮಾಜವಾದಿಯಾಗಿ ಕಾಣಿಸುತ್ತಾರೆ. ಮತ್ತೆ ಮತ್ತೆ ಗೋವಿಂದ ಪೈ ನಮಗೆ ಬೇಕಾಗುತ್ತಾರೆ.