ಭವಿಷ್ಯದ ಪೀಳಿಗೆಗಾಗಿ ಭೂಮಿ ಉಳಿಸೋಣ

ಇಂದು ವಿಶ್ವ ಭೂಮಿ ದಿನ. ಪ್ರತೀ ವರ್ಷ ಎಪ್ರಿಲ್ 22ರಂದು ವಿಶ್ವದಾದ್ಯಂತ ಭೂಮಿ ದಿನವನ್ನು ಆಚರಿ ಸಲಾಗುತ್ತದೆ. ಈ ದಿನವು ನಿಸರ್ಗದ ಮಹತ್ವವನ್ನು ಗುರುತಿಸಿ, ಪರಿಸರದ ಸಂರಕ್ಷಣೆಯ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಲು ನಿಗದಿಪಡಿಸಲಾದ ವಿಶೇಷ ದಿನವಾಗಿದೆ. ಇದು ಭೂಮಿಯ ಮೇಲಿನ ಜೀವಿಗಳ ಸಹಅಸ್ತಿತ್ವದ ಅರಿವು, ನಿಸರ್ಗದ ಮೇಲಿನ ನಮ್ಮ ಜವಾಬ್ದಾರಿ ಮತ್ತು ಭವಿಷ್ಯದ ಪೀಳಿಗೆಗೆ ಹಸಿರಾದ ಭೂಮಿಯನ್ನು ಉಳಿಸಿ ಕೊಡುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.
ಭೂಮಿ ದಿನದ ಇತಿಹಾಸ
1970ರಲ್ಲಿ ಅಮೆರಿಕದ ಸೆನೆಟರ್‌ಗೆ ಲೆಟರ್ ನೆಲ್ಸನ್ ಅವರು ಪ್ರಥಮ ಬಾರಿಗೆ ಭೂಮಿ ದಿನ ಆಚರಿಸುವ ಕಲ್ಪನೆಯನ್ನು ಮುಂದಿಟ್ಟರು. ಆ ಸಮಯದಲ್ಲಿ ಪರಿಸರ ಮಾಲಿನ್ಯ ಮತ್ತು ಪರಿಸರ ಹಾನಿಗೆ ಪ್ರತಿಯಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿತ್ತು. ಮೊದಲ ಬಾರಿ 2 ಕೋಟಿ ಜನ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಭೂಮಿಯ ರೂಪುರೇಷೆ ಮತ್ತು ತತ್ವಾಂಶಗಳು
ಭೂಮಿಯು ಸುಮಾರು 4.5 ಬಿಲಿಯನ್ ವರ್ಷಗಳಷ್ಟು ಹಳೆಯದು. ಇದರ ಶೇ. 71 ಭಾಗವನ್ನು ನೀರು ಆವರಿಸಿಕೊಂಡಿದೆ ಮತ್ತು ಉಳಿದ ಶೇ. 29 ಭೂಭಾಗ. ಭೂಮಿಯು ತನ್ನ ಅಕ್ಷದ ಬಗ್ಗೆ ತಿರುಗುತ್ತಾ ಸೂರ್ಯನನ್ನು ಸುತ್ತುವ ಒಂದು ವಿಶಿಷ್ಟ ಚಲನೆಯಲ್ಲಿದೆ. ಇದರ ಮೂಲಕ ದಿನ-ರಾತ್ರಿ, ಋತುಚಕ್ರಗಳಂತಹ ವೈವಿಧ್ಯಮಯ ಪರಿಸ್ಥಿತಿಗಳು ಉಂಟಾಗುತ್ತವೆ.
ಭೂಮಿಯು ಐದು ಪ್ರಮುಖ ಭಾಗಗಳಿಂದ ಕೂಡಿದೆ: ಕ್ರಸ್ಟ್ (ಭೂಮಿಯ ಮೇಲ್ಮೈ), ಮ್ಯಾಂಟಲ್, ಔಟರ್ ಕೋರ್, ಇನ್ನರ್ ಕೋರ್ ಮತ್ತು ವಾತಾವರಣ. ಈ ಎಲ್ಲ ಭಾಗಗಳು ಒಂದೇ ಸಮಯದಲ್ಲಿ ಭೂಮಿಯ ಜೀವಂತಿಕೆಯು ಸಾಗಲು ಕಾರಣವಾಗಿವೆ.
ಭೂಮಿಯ ಇಂದಿನ ಪರಿಸ್ಥಿತಿ ಮತ್ತು ನಮ್ಮ ಪಾತ್ರ
ಇಂದು ಭೂಮಿ ಹಲವಾರು ಬವಣೆಗಳನ್ನು ಎದುರಿಸುತ್ತಿದೆ ಗಾಳಿ ಮಾಲಿನ್ಯ, ನೀರಿನ ಕೊರತೆ, ಹವಾಮಾನ ಬದಲಾವಣೆ, ಬೆಟ್ಟಗಳ ಕುಸಿತ, ಅರಣ್ಯ ನಾಶ, ಜೈವಿಕ ವೈವಿಧ್ಯ ನಾಶ. ಈ ಸ್ಥಿತಿಯಲ್ಲಿ ಭೂಮಿ ದಿನ ಕೇವಲ ಒಂದು ಆಚರಣೆಯಾಗಿ ಉಳಿಯಬಾರದು ಇದು ನಮ್ಮ ಜೀವನಶೈಲಿಯ ಭಾಗವಾಗಬೇಕು.
ದಿನಕ್ಕೊಂದು ಮರ ನೆಡುವ ಸಂಕಲ್ಪ, ಪ್ಲಾಸ್ಟಿಕ್ ಬಳಕೆ ತಪ್ಪಿಸುವುದು, ಮರು ಬಳಕೆ ಮಾಡುವ ವಸ್ತುಗಳನ್ನು ಉಪಯೋಗಿಸುವುದು, ವಿದ್ಯುತ್ ಮತ್ತು ನೀರನ್ನು ಮಿತವಾಗಿ ಬಳಸುವುದು ಮತ್ತು ಸ್ಥಳೀಯವಾಗಿ ಉತ್ಪಾದಿತ ಆಹಾರ ಸೇವನೆ ಮುಂತಾದ ಕ್ರಮಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಉತ್ತಮ ಪರಿಸರವನ್ನು ನಿರ್ಮಿಸಬಹುದು. ನಾವು ಮಾಡುವ ಈ ಪುಟ್ಟ ಬದಲಾವಣೆ, ಭೂಮಿಗೆ ದೊಡ್ಡ ಉಡುಗೊರೆಯಾಗುತ್ತದೆ. ಇದು ಕೇವಲ ಭೂಮಿಗೆ ನೆರವಾಗುವುದಲ್ಲ ನಮ್ಮ ಸ್ವಂತ ಆರೋಗ್ಯ ಮತ್ತು ಸಂತುಷ್ಟಿಗೂ ಕಾರಣವಾಗುತ್ತದೆ.
ಭೂಮಿಯ ರಕ್ಷಣೆಯಲ್ಲಿ ಪಾಲ್ಗೊಳ್ಳೋಣ, ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ಬಿಟ್ಟುಕೊಡೋಣ.