ವೈಫಲ್ಯದಿಂದ ಮತ್ತೆ ಮೂಲ ಸ್ಥಿತಿಗೆ ಪಂಚಮಸಾಲಿ ಸಮುದಾಯ
ಗಿರೀಶ್ ಪಟ್ಟಣಶೆಟ್ಟಿ
ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ
ಕಳೆದ ವಾರ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಉತ್ತರ ಕರ್ನಾಟಕದ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಲಿಂಗಾಯತ ಪಂಚಮಸಾಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಇತರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ 2-ಎ ಪ್ರವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಆದರೆ ಇದು ಹೊಸ ಪ್ರತಿಭಟನೆ ಅಲ್ಲ, ಇದು ಮೂರು ದಶಕಗಳ ಹಳೆಯ ಬೇಡಿಕೆಯಾದರೂ ಪರಿಹಾರ ಕಾಣುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಈ ಬೇಡಿಕೆಗೆ ಪುಷ್ಟಿ ನೀಡಲಾಯಿತು. ಅವರು ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮದ ಸ್ಥಾನಮಾನಕ್ಕಾಗಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮುದಾಯದ ಮುಖಂಡರ ಮತ್ತು ರಾಜಕಾರಣಿಗಳ ಚಂಚಲ ಸ್ವಭಾವದಿಂದಾಗಿ ಚಳವಳಿ ಹಲವಾರು ಏರುಪೇರುಗಳನ್ನು ಕಂಡಿದೆ.
ಹಿಂದಿನ ಭಾಜಪ ಆಡಳಿತದಲ್ಲಿ ಲಿಂಗಾಯತರ ಪ್ರಮುಖ ಯಾತ್ರಾ ಕೇಂದ್ರವಾದ ಕೂಡಲಸಂಗಮದಿಂದ ಸ್ವಾಮೀಜಿಗಳು ಬೆಂಗಳೂರಿಗೆ ಬೃಹತ್ ಪಾದಯಾತ್ರೆಯ ನೇತೃತ್ವ ವಹಿಸಿದ್ದರು ಮತ್ತು ಸರಕಾರವನ್ನು ಬಹುತೇಕ ತನ್ನ ಮೊಣಕಾಲಿನವರೆಗೂ ಬಗ್ಗಿಸಿದ್ದರು. ವರ್ಗೀಕರಣದ ಸಂಕೀರ್ಣತೆಗಳ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿದ್ದರೂ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯದ ಆಕ್ರೋಶಕ್ಕೆ ಗುರಿಯಾಗಲು ಸಿದ್ಧವಿಲ್ಲ. ಈ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಜಾಣ್ಮೆ ತೋರಿತು.
2- ಎ ಪ್ರವರ್ಗವನ್ನು ತಿದ್ದುವ ಮೂಲಕ ಕಣಜದ ಗೂಡನ್ನು ಕದಡುವ ಬದಲು, ಪಂಚಮಸಾಲಿಗಳನ್ನು ಮತ್ತು ಅದೇ ಸಮಯದಲ್ಲಿ ಮೀಸಲಾತಿ ಗೊಂದಲದ ನಡುವೆ ಹೆಚ್ಚಿನ ಪಾಲು ಕೇಳುತ್ತಿದ್ದ ಒಕ್ಕಲಿಗರನ್ನು ಸಮಾಧಾನ ಪಡಿಸಲು ಎರಡು ಹೊಸ ಪ್ರವರ್ಗಗಳನ್ನು ಸೃಷ್ಟಿಸಲಾಯಿತು ಮತ್ತು 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದುತ್ವ ಮತ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಸರಕಾರವು 2- ಬಿ ಪ್ರವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಈ ಎರಡೂ ಸಮುದಾಯಗಳ ನಡುವೆ ಮರು ಹಂಚಿಕೆ ಮಾಡಲು ಪ್ರಯತ್ನಿಸಿತು. ಅದೇ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿ ಅದಕ್ಕೆ ಪ್ರತಿಕ್ರಿಯೆಯಾಗಿ ಆಗಿನ ಬಿಜೆಪಿ ಸರಕಾರವು ಹೊಸ ಮೀಸಲಾತಿ ಪ್ರವರ್ಗಗಳ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಶಪಥ ಪತ್ರವನ್ನು ಸಲ್ಲಿಸಿತು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಿಂಗಳೊಪ್ಪತ್ತಿನಲ್ಲಿಯೇ ಪಂಚಮಸಾಲಿ ಆಂದೋಲನ ಪುನರಾರಂಭವಾಯಿತು. ಇದು ಬೆಳಗಾವಿಯಲ್ಲಿ ಹಿಂಸಾಚಾರಕ್ಕೆ ತಿರುಗಿ ಲಾಠಿ ಪ್ರಹಾರದಲ್ಲಿ ಕೊನೆಗೊಂಡಿತು. ಸಮಸ್ಯೆಯ ಸೂಕ್ಷ್ಮತೆಯನ್ನು ಪರಿಗಣಿಸಿ ಸರಕಾರವು ತನ್ನ ಪ್ರತ್ಯುತ್ತರ ನೀಡುವಲ್ಲಿ ಜಾಣತನ ಮೆರೆಯಿತು. ಪ್ರತಿಭಟನೆಯ ಭಾಗವಾಗಿರಲು ತನ್ನದೇ ಸರಕಾರದ ಸಚಿವರು ಮತ್ತು ಶಾಸಕರನ್ನು ಪಾಲ್ಗೊಳ್ಳಲು ಅನುಮತಿಸಿತು.
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಎಚ್ಚರಿಕೆಯಿಂದ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡಿಕೆಗೆ ವಿರುದ್ಧವಾಗಿಲ್ಲ ಎಂದು ಸೂಚಿಸಿದರು. ‘‘ನಾನು ಸ್ಪಷ್ಟಪಡಿಸುತ್ತೇನೆ. ಇದು ‘ಬೇಡಿಕೆ’ಯಲ್ಲ, ಆದರೆ ಇದು ‘ಒತ್ತಾಯ’ ಸಂವಿಧಾನಕ್ಕೆ ವಿರುದ್ಧವಾಗಿದೆ’’ ಎಂದು ಅವರು ಹೇಳಿದರು ಮತ್ತು ಕಾನೂನು ಪ್ರಕಾರ ವಿವರಗಳನ್ನು ನೀಡಿದರು.
ಪಂಚಮಸಾಲಿ ಬೇಡಿಕೆಗೆ ಮೂರು ಪ್ರಮುಖ ಕಾನೂನು ತೊಡಕುಗಳಿವೆ. ಮೊದಲನೆಯದು ರಾಘವೇಂದ್ರ ಡಿ.ಜಿ. ಎಂಬುವರು ಕರ್ನಾಟಕ ರಾಜ್ಯ ಮತ್ತು ಇತರರು ವಿರುದ್ಧ ಸಲ್ಲಿಸಿದ ಪಿಐಎಲ್ ರಿಟ್ ಅರ್ಜಿ ಆಗಿದೆ. ಆಗಿನ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಶಪಥಪತ್ರದಲ್ಲಿ ಯಾವುದೇ ಜಾತಿಯನ್ನು ಸೇರಿಸುವ ಮೂಲಕ ಅಥವಾ ತೆಗೆಯುವ ಮೂಲಕ ಸರಕಾರವು 2-ಎ ಪ್ರವರ್ಗದ ಅಸ್ತಿತ್ವದಲ್ಲಿರುವ ಸಂಯೋಜನೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
2-ಎ ಪ್ರವರ್ಗದಲ್ಲಿ ಯಾವುದೇ ಸೇರಿಸುವಿಕೆ ಅಥವಾ ತೆಗೆಯುವಿಕೆಗೆ ನ್ಯಾಯಾಲಯದ ಅನುಮೋದನೆ ಇಲ್ಲದೆ ಕಾರ್ಯಗತಗೊಳಿಸುವುದಿಲ್ಲ ಎಂದು ಮಾರ್ಚ್ 2023ರಲ್ಲಿ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅನುಸರಣೆ/ವಾಗ್ದಾನ ಶಪಥಪತ್ರವು ಎರಡನೇ ಅಡಚಣೆಯಾಗಿದೆ.
ಮೂರನೆಯದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯಾಗಿದ್ದು, 2-ಎ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಮತ್ತು 2-ಬಿ ರದ್ದುಗೊಳಿಸುವುದರ ವಿರುದ್ಧ ಶಿಫಾರಸು ಮಾಡಿದೆ.
ಇವುಗಳೆಲ್ಲವನ್ನೂ ಬದಿಗಿಟ್ಟು ನೋಡಿದರೆ, ಪ್ರಸಕ್ತ 2-ಎ ಪ್ರವರ್ಗಗಳಲ್ಲಿರುವ 102 ಸಮುದಾಯಗಳು ಅತಿ ದೊಡ್ಡದಾದ ಮತ್ತು ಬಲವಾದ ಸಮುದಾಯವನ್ನು ಗುಂಪಿಗೆ ಸೇರಿಸುವ ತಮ್ಮ ಪಾಲನ್ನು ಕುಗ್ಗಿಸುವ ಕ್ರಮವನ್ನು ವಿರೋಧಿಸುತ್ತವೆ.
ಲಿಂಗಾಯತ ಪಂಚಮಸಾಲಿ ಸಮುದಾಯದ ಮುಂದಿನ ಉದಾತ್ತ ಭಾವನೆಯ ಕ್ರಮವೆಂದರೆ 2-ಎ ಪ್ರವರ್ಗಕ್ಕೆ ಸೇರಿಸಲು ತಮ್ಮ ಬೇಡಿಕೆಯೊಂದಿಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಸಂಪರ್ಕಿಸುವುದು. ಸಂವಿಧಾನದ 340ನೇ ವಿಧಿಯ ಅಡಿಯಲ್ಲಿ ಕಡ್ಡಾಯವಾಗಿರುವ, ಆಯೋಗದ ಮೂಲಕ ಮೀಸಲಾತಿಯ ಮೇಲಿನ ಯಾವುದೇ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಏತನ್ಮಧ್ಯೆ ಸ್ವಾಮೀಜಿಗಳು ಸೇರಿದಂತೆ ಪಂಚಮಸಾಲಿ ಸಮುದಾಯದ ಮುಖಂಡರು ಒತ್ತಡ ಹೇರಲು ಪ್ರತಿಭಟನಾ ಯೋಜನೆಗಳನ್ನು ಹಾಕಿಕೊಂಡರು. ಲಾಠಿ ಪ್ರಹಾರ ಕುರಿತು ಪ್ರತಿಪಕ್ಷ ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿದೆ. ಬಿಜೆಪಿಯು ಈ ವಿಷಯದಲ್ಲಿ ತಪ್ಪು ನಿಲುವಿನಲ್ಲಿ ಸಿಲುಕಿ ಕೊಂಡಿದ್ದರೂ ವಿಶೇಷವಾಗಿ ಶಪಥಪತ್ರಗಳಿಂದಾಗಿ ಸರಕಾರವನ್ನು ಪೇಚಿನಲ್ಲಿ ಸಿಕ್ಕಿ ಹಾಕಿಸುವ ಅವಕಾಶವನ್ನು ಕಳೆದುಕೊಳ್ಳಲು ಅದು ಬಯಸುವುದಿಲ್ಲ.
-ಕೃಪೆ: ದಿ ಹಿಂದೂ