ಒಳಮೀಸಲಾತಿ ಜಾರಿಗಾಗಿ ನೈಜ ದತ್ತಾಂಶಕ್ಕಾಗಿ ಪರದಾಡಬೇಕಾಗಿಲ್ಲ

ಮೀಸಲಾತಿ ಜನರಿಗೆ ಒಂದಷ್ಟು ಆಂಶಿಕ ಸಾಮಾಜಿಕ ಉಸಿರಾಟ ಸಿಕ್ಕಿದ್ದರೂ ಸಹಜ ಮತ್ತು ನೈಸರ್ಗಿಕವಾದ ‘ಸಾಮಾಜಿಕ ನ್ಯಾಯ’ ಇಂದಿಗೂ ಮರಿಚೀಕೆಯಾಗಿದೆ. ಇವರ ಸರ್ವಾಂಗೀಣ ಬದುಕಿಗೆ ನಿಚ್ಚಳವಾದ ಸ್ವರೂಪಗಳಲ್ಲಿ ಅಗತ್ಯವಿರುವ ಸಾಮಾಜಿಕ ಸ್ಥಾನ ಮತ್ತು ಸಾಮಾಜಿಕ ಅವಕಾಶಗಳು ವ್ಯಕ್ತಿಯ ಹುಟ್ಟಿನ ಹಿನ್ನೆಲೆಯನ್ನು ಮೀರಿ ಸಮಾನವಾಗಿ ಸಿಗದಿರುವ ಕಾರಣ ಸದಾ ಅಗೋಚರ ಬಂಧಿತ ಓಟದಲ್ಲೇ ಜೀವನೋಪಾಯ ಮುಗಿಸಬೇಕಿದೆ.

Update: 2024-12-22 06:29 GMT

‘ಮೀಸಲಾತಿ’ ಎಂದರೆ ಧರ್ಮ ಭಿಕ್ಷೆ ಎಂದು ಮೂದಲಿಸುವ ಸಾಮಾಜಿಕ ಘಟ್ಟ ದಾಟಿ; ಇದನ್ನು ಪಡೆಯಲು ಜನರು ವರ್ಗಾತೀತ ಬೇಡಿಕೆ, ಆಗ್ರಹ ಮತ್ತು ಒತ್ತಡ ಹೇರುವ ಚಳವಳಿಗಳಾಗಿ ಇಂದಿನ ಸಾಮಾಜಿಕ ಉಸಿರಾಟವಾಗಿದೆ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ರಾಷ್ಟ್ರೀಯ ಸಂಪತ್ತಿನ ಸಮಾನ ಹಂಚಿಕೆಯು ನೈಸರ್ಗಿಕ ನ್ಯಾಯದಂತೆ ಆಗದಿದ್ದಾಗ ಅದರ ಕೊರತೆಯನ್ನು ಹಿಂದುಳಿದಿರುವಿಕೆಯ ಆಧಾರದಡಿ ಪ್ರಾತಿನಿಧಿಕವಾಗಿ ಹಂಚುವ ಸಾಂವಿಧಾನಿಕ ಪ್ರಕ್ರಿಯೆ ಎನ್ನಬಹುದು. 1935 ಕೇಂದ್ರೀಯ ಕಾಯ್ದೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಪ್ರವರ್ಗಗಳಿಗೆ ಮೀಸಲಾತಿ ನೀಡಲು ಅನುಮೋದಿಸಿದ ಮೇಲೆ ಅವುಗಳ ಆಯ್ಕೆ ಕಗ್ಗಂಟಾಯಿತು. 1931 ಜನಗಣತಿ ಸಾಮಾಜಿಕ ತಾರತಮ್ಯದ 9 ತತ್ವಗಳಡಿ ಹೊರಗಿನ ಜಾತಿಗಳನ್ನು (Exterior Castes) ಗುರುತಿಸಿತ್ತು. 1936ರಲ್ಲಿ ನಿಮ್ನ ಜಾತಿ/ವರ್ಗಗಳಲ್ಲಿಯೇ ಅಪ್ಪಟ (absolute) ಮತ್ತು ಸಾಪೇಕ್ಷ (Relative) ಅಸ್ಪಶ್ಯರು/ನಿಮ್ನ ಜಾತಿಗಳೆಂದು ವಿಭಜಿಸಿ ಹೆಚ್ಚೆಚ್ಚು ಸಾಮಾಜಿಕ ಅವಕೃಪೆಗಳಿಗೆ ಈಡಾಗಿದ್ದವರನ್ನು ಮಾತ್ರ ಪರಿಶಿಷ್ಟ ಜಾತಿಗಳಾಗಿ (540) ಗುರುತಿಸಲಾಯಿತು. ಈ ಜನಗಣತಿ ಮೈಸೂರು ರಾಜ್ಯದ ಹೊಲೆಯ-ಮಾದಿಗ (10 ಲಕ್ಷ) ಜಾತಿಗಳನ್ನು ಮಾತ್ರವೇ ಹೊರಗಿನ ಜಾತಿಗಳೆಂದು ಘೋಷಿಸಿದೆ. ಆದರೆ, ಬಂಜಾರ (50 ಸಾವಿರ), ಭೋವಿ (1.65 ಲಕ್ಷ), ಕೊರಚ/ಕೊರಮ (23 ಸಾವಿರ) ಹೊರಗಿನ ಜಾತಿಗಳಲ್ಲವೆಂದು ಕೈಬಿಟ್ಟಿರುವುದು ಜನಗಣತಿಯ ನೈಜ ಸಾಮಾಜಿಕ ನಡೆಯಾಗಿದೆ. ಆದರೆ ಈ ಮಾನದಂಡಗಳನ್ನು ಅನುಸರಿಸುವಲ್ಲಿ ಅಂದಿನ ಮೈಸೂರು ಸರಕಾರ ಎಡವಿರುವುದಂತೂ ಲೋಕ ಸತ್ಯವಾಗಿದೆ.

1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆ ಸೂತ್ರಗಳನ್ವಯ ಮಾತೃರಾಜ್ಯಗಳಿಗೆ ಅವುಗಳಿಂದ ದೂರವಾಗಿದ್ದ ಭೂಪ್ರದೇಶಗಳನ್ನು ಮರು ಜೋಡಣೆ ಮಾಡಲಾಯಿತು. ದಖನ್ಪ್ರಸ್ಥಭೂಮಿಯನ್ನು ಸಾಮಾಜಿಕವಾಗಿ ಸ್ಕೈಥೋ ದ್ರಾವಿಡ ಮತ್ತು ದ್ರಾವಿಡ ಘಟ್ಟಗಳೆಂದು(1901) ವಿಂಗಡಿಸಲಾಗಿತ್ತು. ಇಂದಿನ ಮಹಾರಾಷ್ಟ್ರದಿಂದ ಪುದುಚೇರಿ ತನಕ ಈ ಭೂ ಪ್ರದೇಶಗಳು ಸಮೀಕರಣವಾಗಿದ್ದವು. ಆದುದರಿಂದ ಮೈಸೂರು ರಾಜ್ಯಕ್ಕೆ ಪ.ಜಾತಿ (15) ಮತ್ತು ಪ.ಪಂಗಡಗಳಿಗೆ (09) ಬಾಂಬೆ ಕರ್ನಾಟಕದಿಂದ (24-19),ಉತ್ತರ ಕನ್ನಡ(01-0), ಹೈದರಾಬಾದ್ ಕರ್ನಾಟಕ(32-05), ಮದ್ರಾಸು ಕರ್ನಾಟಕ (54-22), ಕೊಳ್ಳೇಗಾಲ ತಾಲೂಕು(02-02), ದಕ್ಷಿಣ ಕನ್ನಡ(04-01), ಕೊಡಗು(12-06) ಸಮರೂಪದ ಜಾತಿಗಳು ಆಯ್ಕೆಯಾದವು. ಈ ಜಾತಿ ಮತ್ತು ಪಂಗಡಗಳ ಸಾಮಾಜಿಕ ಚಲನೆ (Social Movememt) ಮೇರೆಗೆ ಈ ರಾಜ್ಯಕ್ಕೆ ಬಂದವು. ಅಂತಿಮ ಕ್ರೋಡೀಕರಣದಲ್ಲಿ ಪ.ಜಾತಿ 101, ಪ.ಪಂಗಡ 50 ಆದವು. ಒಳ ಮೀಸಲಾತಿಗಾಗಿ ಗುಂಪುಗಳ ವಿಭಜನೆ ಮಾಡುವಾಗ ಅವುಗಳ ಎಂದಿನ ಮೂಲ ಜಾತಿಗಳ ಸಮನಾಂತರ ಸಾಮಾಜಿಕತೆಗಳಿಗೆ ತಕ್ಕಂತೆ ಜೋಡಣೆ ಆದಾಗ ಗೊಂದಲ ಬರುವುದಿಲ್ಲ. ಹಿಂದೂ ಸಮಾಜ ಅನುಚಾನವಾಗಿ ಪಾಲಿಸುತ್ತಿದ್ದ ಸಾಮಾಜಿಕ ಭೇದನೀತಿಯ ರೀತಿ ರಿವಾಜುಗಳಡಿ 1931 ಜನಗಣತಿ ವಿಧಿಸಿದ್ದ 9 ಸಾಮಾಜಿಕ ಸೂತ್ರಗಳನ್ನೇ ಮಾನದಂಡವನ್ನಾಗಿಸಿ ಹೊರಗಿನ ಜಾತಿಗಳಾಗಿದ್ದವರೇ (Exterior Castes) 1956ರಲ್ಲಿ ಪರಿಶಿಷ್ಟ ಜಾತಿಗಳಾಗಿದ್ದಾರೆ. ಅಂದು ಮೀಸಲಾತಿಯನ್ನು ಲಂಭಾಂತರ ಏಣಿಯ ತುದಿಯಲ್ಲಿ ಇರಿಸಲಾಗಿತ್ತು. ಈಗ ಅದನ್ನು ಸಮಾನಾಂತರವಾಗಿ ನಿಲ್ಲಿಸಿ ಅವುಗಳ ಅಂತರ ಮುಂದುವರಿದ-ಹಿಂದುಳಿದಿರುವಿಕೆ ಮೇರೆಗೆ ಆಂತರಿಕ ಹಂಚಿಕೆ ಮಾಡಬೇಕೆನ್ನುವ ಬೇಡಿಕೆಯನ್ನು ಸಂವಿಧಾನ ಪೀಠ ಪುರಸ್ಕರಿಸಿದೆ. ಇವುಗಳ ಪರಿಶೀಲನೆಗಾಗಿ ನಿಯೋಜಿಸಿರುವ ಏಕ ಸದಸ್ಯ ಆಯೋಗದ ಪರಾಮರ್ಶೆಗೆ ಸರಕಾರ ನೀಡಿರುವ ಪರಮಾರ್ಶನ ಅಂಶಗಳು ಸಾದರಪಡಿಸಿವೆ.

ಭಾರತೀಯ ಸಾಮಾಜಿಕ ಚಾರ್ತುವರ್ಣದ ಜಾತಿ ಶ್ರೇಣಿಯಲ್ಲಿ ‘ವ್ಯಕ್ತಿಯ ಜಾತಿ’ ಹಿನ್ನೆಲೆಗಳು ಆತನ ವಂಶವಾಹಿನಿಯಿಂದ ಬಂದ ಸಾಂಪ್ರದಾಯಿಕ ವೃತ್ತಿ ಮೂಲಕ ಗುರುತಿಸುವ ನಡವಳಿಕೆಗಳಾಗಿವೆ. ಇಂತಹ ಜಾತಿಗಳ ಒಳಗಿಂದ ಸೀಳಿಕೊಂಡು ಉಪಜಾತಿಯಾದರೆ ಇದು ತನ್ನೆಲ್ಲಾ ವಂಶವಾಹಿನಿ ಮೂಲ ಸಾಮಾಜಿಕ ಗುಣವನ್ನು ಪ್ರಚುರಮಾಡುತ್ತದೆ. ಸೀಳೊಡೆದ ಉಪ ಜಾತಿಯಿಂದ ಮತ್ತೊಂದು ಸಣ್ಣ ಉಪ ಜಾತಿಯಾದರೆ ಅದು ಇತರರ ಕೆಲವು ಸಾಮಾಜಿಕ ಗುಣಗಳನ್ನು ಸಹ ಮೈಗೂಡಿಸಿಕೊಳ್ಳಲು ತವಕಿಸುತ್ತದೆ. ಇಂತಹ ಜಾತಿಗಳನ್ನು ಅನ್ಯರು ನಮ್ಮವರೆಂದು ಪರಿಗಣಿಸುವುದಿಲ್ಲ. ಕರ್ನಾಟಕ ಪರಿಶಿಷ್ಟ ಜಾತಿಗಳಲ್ಲಿ ಈ ಮೂರು ಸಾಮಾಜಿಕ ಗುಣ ಲಕ್ಷಣವಿರುವ ಜಾತಿ ಮತ್ತು ಉಪಜಾತಿಗಳಿವೆ. ಒಳ ಮೀಸಲಾತಿ ಗುಂಪುಗಳ ಮರು ವಿಂಗಡಣೆ ಮಾಡುವಾಗ ಈ ಮೂರು ಸಮ್ಮಿಶ್ರ ಸಾಮಾಜಿಕತೆಗಳನ್ನು ಪರಿಶೀಲಿಸಬೇಕಿದೆ. ಸಂವಿಧಾನ ಪೀಠ ಉಲ್ಲೇಖಿಸಿರುವ ಸಮರೂಪದ (Homogenous) ಜಾತಿಗಳೆಂದರೆ ಅಸ್ಪೃಶ್ಯತೆಗಳ ಅನುಭವ ಹಿನ್ನೆಲೆಯಾಗುತ್ತದೆ; ವಿಜಾತೀಯ ಸ್ವಭಾವಗಳೆಂದರೆ (Hetrogenous) ಅವುಗಳ ಅಂತರ ಸಾಮಾಜಿಕ ನಡವಳಿಕೆ, ಸಾಂಪ್ರದಾಯಿಕ ಕಸುಬು, ಆರಾಧನೆ ಮತ್ತು ಸಾಂಸ್ಕೃತಿಕ ವಿಚ್ಛೇದನ ಇತ್ಯಾದಿಗಳು ಸೇರಿರುತ್ತವೆ. ಇವೆರಡರ ನಡುವೆ ಜಾತಿ-ಉಪ ಜಾತಿಗಳ ಹಿಂದುಳಿದಿರುವಿಕೆಯನ್ನು ಅಭಿಮತಿಸುವಾಗ ಅವುಗಳು ಹೊಂದಿರುವ ಆರ್ಥಿಕ, ಶೈಕ್ಷಣಿಕ, ಸಾರ್ವಜನಿಕ ಉದ್ಯೋಗ ಮತ್ತು ರಾಜಕೀಯ ಸ್ಥಾನಮಾನಗಳನ್ನು ಬಹು ಆಯಾಮಗಳಲ್ಲಿ ತುಲನಾತ್ಮಕವಾಗಿ ದತ್ತಾಂಶಗಳನ್ನು ಪ್ರಾಯೋಗಿಕವಾಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಬಹುಶಃ ಹಿಂದಿನ ಹಿಂದುಳಿದ ವರ್ಗಗಳ ವರ್ಗೀಕರಣಕ್ಕಾಗಿ ಅನುಸರಿಸಿದ ಮಾದರಿಗಳು ‘ಒಳ ಮೀಸಲಾತಿ’ ವಿಂಗಡಣೆಗೆ ದಾರಿ ದೀಪವಾಗುತ್ತದೆ. ಪರಿಶಿಷ್ಟ ಜಾತಿಗಳಿಗೆ ‘ಅಲೆಮಾರಿ’ ಪದ ಅಪಥ್ಯ; 1950 ಸಂವಿಧಾನ ಅನುಸೂಚಿಗಳಿಗೆ ಜಾತಿ ಮತ್ತು ಬುಡಕಟ್ಟುಗಳನ್ನು ಸೇರಿಸುವಾಗ 1936ರ ಮೂಲಾಂಶದಡಿ ಸೇರಿಸಲಾಗಿದೆ. ಅಲೆಮಾರಿ ಪದ ಕೇವಲ ಆಡಳಿತಾತ್ಮಕ ಪರಿಭಾಷೆಯ ಪ್ರಯೋಗವಷ್ಟೇ.

ಈ ಹಿಂದೆ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಾದರಪಡಿಸಿರುವ ದತ್ತಾಂಶಗಳು ವೈಜ್ಞಾನಿಕವಲ್ಲ ಎಂಬ ಜಿಜ್ಞಾಸೆ ಈ ವರದಿ ಸಲ್ಲಿಕೆಯಾದ ದಿನದಿಂದ ಜಾತಿ-ಜಾತಿಗಳ ನಡುವೆ ಯಾದವೀ ಕಲಹ ಆರಂಭವಾಗಿತ್ತು. ಅದರ ವರದಿಯನ್ನು ಸರಕಾರ ಇಂದಿಗೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ; ಆದರೂ ಜನರ ಕೈಯಲ್ಲಿ ಕೇವಲ ಸೋರಿಕೆಯ ಮಾಹಿತಿಗಳಿಂತಿವೆ. ಅದರ 3 ಪುಟಗಳು ಕೈಬರಹದಲ್ಲಿವೆ ಅನ್ನುವ ಗುಲ್ಲಿದೆ. ನ್ಯಾಯಾಂಗ ಮತ್ತು ಸಾಮಾನ್ಯ ಬರಹ ಭಾಷೆಗಳ ಗಾಂಭೀರ್ಯತೆಯಲ್ಲೂ ಅಜಗಜಾಂತರವಿರುತ್ತವೆ. ಇದು ಸಹ ಕಾಗಕ್ಕ ಗುಬ್ಬಕ್ಕ ಕಥೆಯಂತಿದೆ. ಇದೆಲ್ಲವೂ ಒಳ ಮೀಸಲಾತಿ ಬೇಡವೆನ್ನುವರ ಪಲಾಯನ ಆರೋಪವಷ್ಟೇ.

ಏತನ್ಮಧ್ಯೆ, ಭಾಜಪ ಸರಕಾರ ಒಳ ಮೀಸಲಾತಿ ಅಸ್ತ್ರ ಪ್ರಯೋಗಿಸಿ ಅಧಿಕಾರ ಮರಳಿ ಪಡೆಯಲು ಕಸರತ್ತು ನಡೆಸಿತು. ಅದಕ್ಕಾಗಿ ಕಾನೂನು ಮಂತ್ರಿ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ನೇಮಿಸಿತು. ಅದರ ಬಹುತೇಕ ಕಾರ್ಯಭಾರವೆಲ್ಲವೂ ಸಂಘಪರಿವಾದ ಮೊಗಶಾಲೆಯಲ್ಲಿ ಜರುಗಿದ್ದವು. ಆಗ ಮಾದಿಗ ಮತ್ತು ಸ್ಪಶ್ಯ ಪರಿಶಿಷ್ಟರನ್ನು ಭಾಜಪ ಒಲಿಸಲು ‘ಅಕ್ಕಿ ಖರ್ಚಾಗದೆ ಅಕ್ಕಳ ನೆಂಟಸ್ತಿಕೆ ಉಳಿಸುವ’ ನಿಯಮ ಪಾಲಿಸಿತು. ಉಪ ಸಮಿತಿ ನಡೆಸಿದ್ದು ಎರಡು ಸಭೆ; ಇನ್ನುಳಿದ ಸಭೆಗಳೆಲ್ಲವೂ ಸಂಘಪರಿವಾದ ಅಂಗೈಮೇಲೆ ಜರುಗಿದವು. ಹೊಲೆಯ-ಮಾದಿಗರನ್ನು ಸಂಭಾಳಿಸುವುದಕ್ಕಿಂತ ಅದಕ್ಕೆ ಹೆಚ್ಚಿನ ಅಕ್ಕರೆ ಇತರ ಸಮುದಾಯಗಳ ಮೇಲಿತ್ತು. ಈ ಚಹರೆ ಒಳ ಮೀಸಲಾತಿ ವಿಂಗಡಣೆಯಲ್ಲಿ ಮೂಡಿತು. ಹೇಗೆಂದರೆ, 88 ಉಪ ಜಾತಿಗಳನ್ನು ನಿರ್ದಯವಾಗಿ ಹೊಲೆಯ-ಮಾದಿಗರಿಂದ ದೂರವಿಟ್ಟ ಕಾರಣ ಇವರಿಬ್ಬರ ಜನಸಂಖ್ಯೆ ತೀವ್ರವಾಗಿ ಕುಗ್ಗಿತು. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳ ಸಂಖ್ಯಾಬಲ ಹಂಚಿಕೆಯು ಮಾರ್ಜಾಲ ನ್ಯಾಯದ ತಕ್ಕಡಿಗೆ ಸಿಲುಕಿ ನಜ್ಜುಗುಜ್ಜಾದವು. ಒಳ ಮೀಸಲಾತಿಯ ಹೋರಾಟಗಾರರು ಕನಸಿನಲ್ಲಿಯೂ ಸದಾಶಿವ ಆಯೋಗದ ಬಗ್ಗೆ ಮಾತನಾಡದಂತೆ ಬಾಯಿಗೆ ಬೀಗ ಹಾಕಿತು. ಭಾಜಪ ಸರಕಾರ ಯಾವುದೇ ಸಕಾರಾತ್ಮಕ ಪರಮಾರ್ಶನೆ ನಡೆಸದೆ ಅದನ್ನು ಮುಚ್ಚಿ ಮೂಲೆಗುಂಪು ಮಾಡುವಲ್ಲಿ ಕೀರ್ತಿಶೇಷವಾಯಿತು. ಉಳಿದ ಸಂಗತಿಗಳೆಲ್ಲವೂ ಗಾಳಿಪಟವಾದವು. ಒಳ ಮೀಸಲಾತಿ ಕೇಳಿದವರಿಗಾಗಿ ಮಾಡಿದ ಉಪಕಾರವಾದರೂ ಏನು? ಭಾಜಪ ಸರಕಾರದ ಶೇ. 17ರ ಒಳ ಮೀಸಲಾತಿ ಹಂಚಿಕೆ ಸೂತ್ರಗಳ ಬಗ್ಗೆ ಹೊಲೆಯರು ಅಷ್ಟೊಂದಾಗಿ ತಲೆ ಕೆಡಿಸಿಕೊಳ್ಳಲಿಲ್ಲ.

ಉಪ ಜಾತಿಗಳ ಮತ್ತು ಅವುಗಳ ಸಂಖ್ಯಾಬಲ ನಿರ್ಧಾರದ ಬಗ್ಗೆ ಹಗ್ಗಜಗ್ಗಾಟವಿದೆ. ಉದಾಹರಣೆಗೆ ಡಾ. ಬಿ.ಆರ್. ಅಂಬೇಡ್ಕರ್ಜಾತಿ ವಿನಾಶ ಕಲ್ಪನೆ ಮೂಸೆಯಿಂದ ಹೊರಬಂದಿರುವ (1931 ಜನಗಣತಿ ಅಭಿಯಾನ) ಭಾಷಾವಾರು ಜನ್ಯದ ಆದಿ ಕರ್ನಾಟಕ (29.21 ಲಕ್ಷ), ಆದ್ರಿ ದ್ರಾವಿಡ (8 ಲಕ್ಷ) ಮತ್ತು ಆದಿ ಆಂಧ್ರ (29 ಸಾವಿರ) ಈ ಜಾತಿಗಳಲ್ಲಿ ಹೊಲೆಯ-ಮಾದಿಗರ ನೈಜ ಸಂಖ್ಯಾಬಲ ಗೊಂದಲದ ಗೂಡಾಗಿದೆ. ಈ ಮೂರು ಸಮುದಾಯಗಳನ್ನು ಅವುಗಳು ಹರಡಿರುವ ಪ್ರಾದೇಶಿಕ ಬಾಹುಳ್ಯದ ಮೇರೆಗೆ ಒಂದು ಅನುಪಾತ ಶ್ರೇಣಿಯನ್ನು ಸೃಷ್ಟಿಸಿ ಹಂಚಿಕೆ ಮಾಡಲೂ ಅವಕಾಶವಿದೆ ಅಥವಾ ಗ್ರಾಮವಾರು ಮಾಹಿತಿ ಸಂಗ್ರಹಿಸಲು ಜನಗಣತಿ ಬಳಸಿರುವ ಸಮೀಕ್ಷೆ ಅನುಸೂಚಿಗಳ ನೆರವಿನಿಂದಲೂ ಜಿಲ್ಲಾವಾರು ಅನುಪಾತ ಶ್ರೇಣಿಯನ್ನು ಸಂಖ್ಯಾಶಾಸ್ತ್ರದ ಸೂತ್ರಗಳಡಿ ಹಂಚಬಹುದು. ಉಪ ಯೋಜನೆಯನ್ನು(1980) ಜಾರಿಗೊಳಿಸುವಾಗ ಪ.ಜಾತಿಗಳು ಅನುಸರಿಸುವ ಪ್ರಧಾನ 14 ರಾಷ್ಟ್ರೀಯ ಉಪ ಕಸುಬುಗಳನ್ನು ಗುರುತಿಸಲಾಗಿದೆ. ಈ ಸಮುದಾಯಗಳು ಕರ್ನಾಟಕದಲ್ಲಿ 10 ಬಗೆಯ ಉಪ ಕಸುಬುಗಳನ್ನು ನಿರ್ವಹಿಸುತ್ತಿವೆ. ಇವುಗಳೂ ಉಪ ಜಾತಿಗಳ ಸಾಮಾಜಿಕ ವಿಘಟಿತತೆಯನ್ನು ಗುರುತಿಸಲು ಸಹಕಾರಿ ಆಗುತ್ತವೆ.

ಒಂದುವೇಳೆ, ಕಾಂತರಾಜು ಆಯೋಗ ವರದಿ ದತ್ತಾಂಶ ಸಿಕ್ಕಿದರೆ ಸಮಸ್ಯೆಗೆ ಪೂರ್ಣವಿರಾಮ ಹಾಕಬಹುದು. 2011 ಜನಗಣತಿ ಜೊತೆಯಲ್ಲಿ ಹೆಚ್ಚುವರಿಯಾಗಿ ಆಯೋಗಕ್ಕೆ ನೀಡಿರುವ ಚೌಕಟ್ಟಿನೊಳಗೆ ಸದಾಶಿವ ಆಯೋಗ ಕ್ರೋಡೀಕರಿಸಿರುವ ಅಂಕಿ-ಅಂಶಗಳನ್ನು ಒಂದು ಗ್ರಂಥ ಋಣಿಯನ್ನಾಗಿ ಸ್ವೀಕರಿಸಲು ನಿಚ್ಚಳವಾದ ಅವಕಾಶಗಳಿವೆ. ಆದರೆ 2011 ಜನಗಣತಿ ಸದ್ಯಕ್ಕೆ ಲಭ್ಯವಿರುವ ದತ್ತಾಂಶಗಳು ಮತ್ತು ದ್ವಿತೀಯ ಮೂಲದ ವಿವಿಧ ಇಲಾಖೆಗಳ ದತ್ತಾಂಶಗಳೂ ಸಹ ಸಹಕಾರಿ ಆಗಬಲ್ಲವು. ಪರಿಶಿಷ್ಟ ಜಾತಿಯ ಪ್ರಾಥಮಿಕ ಜನಗಣತಿ ಸಂಕ್ಷಿಪ್ತ ವಿವರಗಳಲ್ಲಿ 101 ಜಾತಿಗಳು ಹೊಂದಿರುವ ವಿವಿಧ ದುಡಿಮೆ ಪ್ರವರ್ಗಗಳಡಿ ಅವುಗಳ ಹಿಂದುಳಿದಿರುವಿಕೆಯನ್ನು ವರ್ಗೀಕರಿಸಲು ಆಕರವಾಗುತ್ತದೆ. ಇದೇ ಜನಗಣತಿಯಲ್ಲಿ 26.66 ಲಕ್ಷ ಕುಟುಂಬಗಳಲ್ಲಿದ್ದವು (ಗ್ರಾಮೀಣ-16.52 ಲಕ್ಷ; ನಗರ-7.14 ಲಕ್ಷ) ಇವುಗಳಲ್ಲಿದ್ದ 6.29 ಲಕ್ಷ ಜನರ ಜಾತಿ ನಮೂದಾಗಿಲ್ಲವೆಂಬ ಚಿಂತೆ ಹಲವರನ್ನು ಗಂಭೀರವಾಗಿ ಕಾಡುತ್ತಿದೆ. ಈ ಅಂಕಿ-ಅಂಶಗಳು ಬಹುತೇಕ ನಗರ ಪ್ರದೇಶಗಳ ಬಾಡಿಗೆ/ವಲಸೆ ಜನರಿಂದ ಉದ್ಭವಿಸಿವೆ. ಇಲ್ಲವೇ ಗಣತಿದಾರರು ಸರಿಯಾಗಿ ಗುರುತಿಸಲಾಗದ ಸಮಸ್ಯೆಯಿಂದಲೂ ಮೂಡಿವೆ. ಬಾಡಿಗೆ ಮನೆಯ ಅಥವಾ ಅನ್ಯರ ಕಾಲನಿಯಲ್ಲಿ ತಮ್ಮ ನೈಜ ಜಾತಿ ಮುಚ್ಚಿಟ್ಟವರ ಸಮಸ್ಯೆಯೂ ಹೌದು. ಇದು ಒಳ ಮೀಸಲಾತಿ ನಿರಾಕರಣೆಗೆ ಅಡ್ಡಿಯಾಗದು. ರಾಜ್ಯದಲ್ಲಿ ಧರ್ಮ ನಮೂದಿಸದ 1.80 ಲಕ್ಷ ಜನರಿದ್ದಾರೆ. ಇಂತಹ ವಿಚಾರಗಳು ಜನಗಣತಿ/ಸಮೀಕ್ಷೆಗಳಲ್ಲಿ ಸರ್ವೇಸಾಮಾನ್ಯ ಸಂಗತಿಗಳಾಗಿರುತ್ತವೆ.

2001 ಜನಗಣತಿಯಲ್ಲಿ ‘ಆದಿ ಕರ್ನಾಟಕ’ ಎಂದು ಗುರುತಿಸಿಕೊಳ್ಳುತ್ತಿದ್ದವರ ಪೈಕಿ ತಮ್ಮ ಜನಾಂಗೀಯ ವಿವಾಹ ಸಂಬಂಧದಡಿ ಮಾದಿಗರೆಂದು ಬರೆಸಿದ ಕಾರಣ ಆಗ ಆದಿ ಕರ್ನಾಟಕ ಬೆಳವಣಿಗೆ ದರ 12.5ರಷ್ಟು ಇಳಿಯಿತು; ಮಾದಿಗರ ಬೆಳವಣಿಗೆ ದರ 259.2ರಷ್ಟು ಹೆಚ್ಚಳವಾಯಿತು. ಆದರೆ 2011 ಜನಗಣತಿಯಲ್ಲಿ 3.52 ಲಕ್ಷ ಜನರ ಇಳಿಕೆಯಾಯಿತು. ಈ ಬಗೆಗಿನ ಕಾರಣಗಳು ಇನ್ನೂ ನಿಗೂಢವಾಗಿವೆ. ಈ ಜನಗಣತಿಯಲ್ಲಿ ನಾಗರಿಕ ಸೌಲಭ್ಯಗಳ ಸ್ಥಿತಿಗತಿಗಳ ಅಂಕಿ-ಅಂಶಗಳು ಸಮಗ್ರ ಸ್ವರೂಪದಲ್ಲಿವೆ. ಹಾಗೆಯೇ ಪರಿಶಿಷ್ಟ ಜಾತಿಗಳು ಹೊಂದಿರುವ 11.2 ರಷ್ಟು ಕೃಷಿ ಹಿಡುವಳಿಗಳೂ ಸಹ ವೇಷ್ಟಿ ನಮೂನೆಗಳಲ್ಲಿವೆ. ಹಿಂದಿನ ಆಂಧ್ರಪ್ರದೇಶ ರಾಮಚಂದ್ರ ರಾಜು ಆಯೋಗ ಮತ್ತು ತಮಿಳುನಾಡಿನ ಜನಾರ್ಧನಂ ಆಯೋಗ ವರ್ಗೀಕರಣಗಳು ಕರ್ನಾಟಕಕ್ಕೆ ಮಾರ್ಗದರ್ಶಿ ಆಗುತ್ತವೆ. ಆದುದರಿಂದ, ಅಂಕಿ-ಅಂಶಗಳ ಕ್ರೋಡೀಕರಣ ವಿಚಾರದಲ್ಲಿ ಆಯೋಗದ ಹೊಣೆಗಾರಿಕೆ ಬಹಳ ಹೆಚ್ಚಿದೆ. ಅದು ಇಡುವ ಒಂದೊಂದು ಹೆಜ್ಜೆಯೂ ಸಮತೂಕದಿಂದ ಕೂಡಿರಬೇಕು. ಅಪ್ಪಿತಪ್ಪಿಯೂ ಅದು ಸಣ್ಣಪುಟ್ಟ ಲೋಪಕ್ಕೂ ಅವಕಾಶ ನೀಡಬಾರದು. ಸಂವಿಧಾನ ಪೀಠ ತೀರ್ಪಿನ ಪ್ರಕಾರ ಪ್ರಾಯೋಗಿಕ ದತ್ತಾಂಶಗಳು ನ್ಯಾಯಾಲಯಗಳ ಪರಿಶೀಲನೆಗೆ ಒಳಪಡುವುದರಿಂದ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದಿಂದ ಫಲಾನುಭವಿಗಳಿಗೆ ಸ್ವೀಕೃತವಾಗುವ ಜಾಗೃತ ವಿಶ್ಲೇಷಣೆಗಳುಳ್ಳ ವರದಿ ಮಂಡನೆ ಆಗಬೇಕಿದೆ.

ಮೀಸಲಾತಿ ಜನರಿಗೆ ಒಂದಷ್ಟು ಆಂಶಿಕ ಸಾಮಾಜಿಕ ಉಸಿರಾಟ ಸಿಕ್ಕಿದ್ದರೂ ಸಹಜ ಮತ್ತು ನೈಸರ್ಗಿಕವಾದ ‘ಸಾಮಾಜಿಕ ನ್ಯಾಯ’ ಇಂದಿಗೂ ಮರಿಚೀಕೆಯಾಗಿದೆ. ಇವರ ಸರ್ವಾಂಗೀಣ ಬದುಕಿಗೆ ನಿಚ್ಚಳವಾದ ಸ್ವರೂಪಗಳಲ್ಲಿ ಅಗತ್ಯವಿರುವ ಸಾಮಾಜಿಕ ಸ್ಥಾನ ಮತ್ತು ಸಾಮಾಜಿಕ ಅವಕಾಶಗಳು ವ್ಯಕ್ತಿಯ ಹುಟ್ಟಿನ ಹಿನ್ನೆಲೆಯನ್ನು ಮೀರಿ ಸಮಾನವಾಗಿ ಸಿಗದಿರುವ ಕಾರಣ ಸದಾ ಅಗೋಚರ ಬಂಧಿತ ಓಟದಲ್ಲೇ ಜೀವನೋಪಾಯ ಮುಗಿಸಬೇಕಿದೆ. ಪರಿಶಿಷ್ಟರ ಸಂರಕ್ಷಣೆಗೆ ಎಲ್ಲಾ ಬಗೆಯ ಕಾನೂನು ಕಟ್ಟಳೆಗಳಿದ್ದರೂ ‘ಇಂದು ಏನಾಗುತ್ತದೋ’ ‘ನಾಳೆಯ ತೊಳಲಾಟಗಳ’ ಸಾಮಾಜಿಕ ಆತಂಕಗಳಿಂದ ಅಧೀರರಾಗಿರುತ್ತಾರೆ. ಮತ್ತೊಂದು ಕಡೆ ಇವರೊಳಗೆ ಏರ್ಪಟ್ಟಿರುವ ಆಂತರಿಕ ಸಾಮಾಜಿಕ ತ್ರಿಕೋನಗಳನ್ನು ಮುರಿದುಕೊಂಡು ಹೊರಬಾರದ ಸ್ಥಿತಿಗಳಿಗೆ ಬಾಹ್ಯ ವೈರುಧ್ಯಗಳು ಎಂದಿನಂತೆಯೇ ಬದುಕಲು ಪ್ರೋತ್ಸಾಹ ನೀಡುತ್ತವೆ. ಒಟ್ಟಾರೆ ಮೀಸಲಾತಿ ಜನರು ಅದರ ಚಕ್ರೀಯ ಓಟದಲ್ಲೆ ಸುತ್ತಾಡಿ ನಿರ್ಗಮಿಸುತ್ತಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ದಾಸನೂರು ಕೂಸಣ್ಣ

ಸಮುದಾಯ ಚಿಂತಕರು

Similar News