ಬಿಜೆಪಿ: ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಯಾಕಿಷ್ಟು ಹೆಣಗಾಟ?

Update: 2025-04-22 11:22 IST
Editor : Naufal | By : ವಿನಯ್ ಕೆ.
ಬಿಜೆಪಿ: ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಯಾಕಿಷ್ಟು ಹೆಣಗಾಟ?
  • whatsapp icon

ಬಿಜೆಪಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅದರ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದದ್ದು ಆರೆಸ್ಸೆಸ್.

ಆದರೆ ಮೋದಿ ನಾಯಕತ್ವದಲ್ಲಿ ಅದೆಲ್ಲವೂ ಬದಲಾಯಿತು. ಬಿಜೆಪಿ ತಾನು ಸ್ವತಂತ್ರವಾಗಿ ಎಲ್ಲವನ್ನು ನಿಭಾಯಿಸುತ್ತದೆ ಎಂಬಂತೆ ತೋರಿಸಿಕೊಳ್ಳುವುದು ಶುರುವಾಯಿತು.

ಕಳೆದ ಲೋಕಸಭೆ ಚುನಾವಣೆ ಹೊತ್ತಲ್ಲಿನ ನಡ್ಡಾ ಹೇಳಿಕೆ ಅಂಥ ಯತ್ನದ ಒಂದು ಭಾಗವಾಗಿತ್ತು. ಬಿಜೆಪಿ ತುಂಬಾ ಬೆಳೆದಿದೆ, ಅದಕ್ಕೆ ಈಗ ಆರೆಸ್ಸೆಸ್ ಬೆಂಬಲ ಅಗತ್ಯವಿಲ್ಲ ಎಂದಿದ್ದರು ನಡ್ಡಾ. ಆಮೆಲೆ ಪಕ್ಷ ಹೇಗೆ ಹೊಡೆಸಿಕೊಂಡಿತು ಎಂಬುದನ್ನು ವಿಶ್ಲೇಷಿಸಿದವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಗೆ ಆರೆಸ್ಸೆಸ್ನ ಬೆಂಬಲದ ಕೊರತೆಯೇ ಕಾರಣ ಎಂದಿದ್ದರು. ಪಕ್ಷದೊಳಗಿನವರು ಕೂಡಾ ಅದೇ ಮಾತು ಹೇಳಿದ್ದರು.ಚುನಾವಣೆ ಫಲಿತಾಂಶದ ನಂತರ ಮೋಹನ್ ಭಾಗವತ್ ಅವರಂತೂ ನೆಪ ಹುಡುಕಿ ಹುಡುಕಿ, ಮೋದಿಗೆ ಪರೋಕ್ಷ ಪಾಠಗಳನ್ನು ಹೇಳಲು ಶುರು ಮಾಡಿದ್ದರು.

ಮೋದಿ ಇತ್ತೀಚೆಗೆ ನಾಗಪುರದಲ್ಲಿರುವ ಆರೆಸ್ಸೆಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು ಮತ್ತು ಭಾಗವತ್ರನ್ನು ಭೇಟಿ ಮಾಡಿದ್ದು ಒಂದು ಮಹತ್ವದ ಬೆಳವಣಿಗೆಯಾಗಿ ಚರ್ಚೆಗೆ ಬಂತು. ಆದರೆ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಸೂಚಿಸುವವರನ್ನು ಒಪ್ಪಲು ಭಾಗವತ್ ತಯಾರಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ, ವಿಶ್ವದ ಅತಿದೊಡ್ಡ ಪಕ್ಷ ತನ್ನ ಹೊಸ ಅಧ್ಯಕ್ಷನನ್ನು ಆರಿಸಲು ಇನ್ನೂ ಹೆಣಗಾಡುತ್ತಲೇ ಇದೆ.

ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಂತೆ, ಕೇಸರಿ ಪಕ್ಷದಲ್ಲಿನ ಒಳಜಗಳ ನಾಯಕತ್ವದ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅಧ್ಯಕ್ಷರನ್ನು ನೇಮಿಸುವಲ್ಲಿ ತುಂಬಾ ವಿಳಂಬವಾಗಿ, ನಡ್ಡಾ ಅವಧಿ ವಿಸ್ತರಣೆಯಾಗುತ್ತಲೇ ಹೋಗಿದೆ. ಕಳೆದ ಡಿಸೆಂಬರ್ ವೇಳೆಗೆ ನಡೆಯಬೇಕಿದ್ದ ಹೊಸ ಅಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಯಾವಾಗ ಎನ್ನುವುದು ಕೂಡ ಸ್ಪಷ್ಟವಿಲ್ಲ.

ಬಿಜೆಪಿ ಹೀಗೆ ಆಂತರಿಕ ತಳಮಳಗಳಲ್ಲಿ ಮುಳುಗಿರುವಾಗ, ವಿಪಕ್ಷಗಳು ಚುರುಕುಗೊಂಡಿರುವ ಹಾಗೆ ಕಾಣಿಸುತ್ತಿದೆ.

ಕಾಂಗ್ರೆಸ್ ಅನ್ನೇ ನೋಡುವುದಾದರೆ, ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಾಯಕತ್ವದಲ್ಲಿ ಹೊಸ ಬಲ ಕಾಣಿಸಿದೆ.

ಪಕ್ಷವನ್ನು ಸಂಘಟಿಸುವ ಮಹತ್ವದ ಹೊಣೆಯನ್ನು ಒಂದೆಡೆ ಖರ್ಗೆ ನಿಭಾಯಿಸುತ್ತಿರುವಾಗ, ಇನ್ನೊಂದೆಡೆ ರಾಹುಲ್ ಗಾಂಧಿ ಕೂಡ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇದಕ್ಕಿಂತಲೂ ದೊಡ್ಡ ವಿಚಾರವೆಂದರೆ, ತಳಮಟ್ಟದಿಂದಲೇ ಪಕ್ಷವನ್ನು ಬಲಪಡಿಸುವ ಮಾತು ಕಾಂಗ್ರೆಸ್ನಲ್ಲಿ ಕೇಳಿಬಂದಿದೆ ಎಂಬುದು.ತಡವಾಗಿಯಾದರೂ ಕಾಂಗ್ರೆಸ್ ಇಂಥದೊಂದು ಮಹತ್ವದ ಕೆಲಸಕ್ಕೆ ಮುಂದಾಗಿದೆ ಎಂಬುದು ಗಮನಾರ್ಹ.

ವರ್ಷಗಳಿಂದಲೂ ಇದ್ದಲ್ಲೇ ಜಡ್ಡುಗಟ್ಟಿದಂತಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಗಳನ್ನು (ಡಿಸಿಸಿಗಳು) ಪೂರ್ತಿಯಾಗಿ ಮರು ಸಂಘಟಿಸುವ ಕಾಂಗ್ರೆಸ್ ನಿರ್ಧಾರ ಬಹಳ ಮಹತ್ವದ್ದಾಗಿದೆ.

ಜಿಲ್ಲಾ ಸಮಿತಿಗಳು ಸರಿಯಾಗಿ ಕೆಲಸ ಮಾಡುವಂತಾಗಲು ಮೇಲ್ವಿಚಾರಣೆಗಾಗಿ ಗುಜರಾತ್ನ ಪ್ರತಿಯೊಂದು ಜಿಲ್ಲೆಯಲ್ಲಿ ಕಾಂಗ್ರೆಸ್ ವೀಕ್ಷಕರನ್ನು ನೇಮಿಸಿದೆ. ಪಕ್ಷದ ಬಹಳ ದೊಡ್ಡ ಶಕ್ತಿ ಸಾಧ್ಯವಾಗುವುದು ಡಿಸಿಸಿ ಹಂತದಲ್ಲಿ ಎಂಬುದು ಎಐಸಿಸಿಗೆ ಮನದಟ್ಟಾಗಿದೆ.

ಸಂಘಟಿಸುವಿಕೆಯಲ್ಲಿ ಕಾಂಗ್ರೆಸ್ ಅಂದುಕೊಂಡಂತೆಯೇ ಯೋಜನೆ ಜಾರಿಗೆ ಬಂದರೆ, ಈಗ ನಿಷ್ಕ್ರಿಯ ಸ್ಥಿತಿಯಲ್ಲಿರುವ ಅದರ ಬೂತ್, ಬ್ಲಾಕ್ ಮತ್ತು ಮಂಡಲ ಘಟಕಗಳು ಮತ್ತೆ ಚೇತರಿಸಿಕೊಳ್ಳಲಿವೆ.

ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಈ ನಿರ್ಧಾರದಿಂದಾಗಿ, ಪ್ರತೀ ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದೊಳಗೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಬರುವುದು ಸಾಧ್ಯವಿದೆ.ಇದು ತಳಮಟ್ಟದ ಕಾರ್ಯಕರ್ತರಲ್ಲಿ ಶಕ್ತಿ ತುಂಬಬಹುದು.ಅಲ್ಲದೆ, ಪಕ್ಷಕ್ಕೆ ಹೆಚ್ಚು ಹಾನಿಯಾಗುವುದಕ್ಕೆ ಕಾರಣವಾಗಿದ್ದ ಅತಿಯಾದ ಕೇಂದ್ರೀಕರಣಕ್ಕೆ ಬ್ರೇಕ್ ಬೀಳಬಹುದು.

ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಹೇಳಿರುವ ಪ್ರಕಾರ, ಡಿಸಿಸಿಗೆ ಹೊಸ ಅಧಿಕಾರ ಮತ್ತು ಹೊಣೆ ವಹಿಸಲಾಗುತ್ತದೆ. ಪ್ರತೀ ಜಿಲ್ಲೆಯಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೂ ಎಐಸಿಸಿ ಆಲೋಚಿಸಿದೆ.

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಪ್ರಚಾರಕ್ಕಾಗಿ ಚುನಾವಣಾ ವಿಷಯವನ್ನು ಪ್ರಾದೇಶಿಕ ದೃಷ್ಟಿಯಿಂದ ನಿರ್ಧರಿಸುವುದು ಮತ್ತು ನಾಯಕರ ನಡುವಿನ ಭಿನ್ನಮತಗಳಿದ್ದರೆ ನಿವಾರಿಸುವುದು ಈ ಸಮಿತಿಗಳ ಹೊಣೆಯಾಗಿರುತ್ತದೆ.

ಈಗಾಗಲೇ ಗುಜರಾತ್ನಲ್ಲಿ ಸಂಘಟನಾತ್ಮಕ ಬದಲಾವಣೆಗಳನ್ನು ತರಲಾಗುತ್ತಿದೆ. ಗುಜರಾತ್ ಮಾದರಿ ಯಶಸ್ವಿಯಾದರೆ, ಇತರ ರಾಜ್ಯಗಳಲ್ಲಿಯೂ ಅದು ಜಾರಿಗೆ ಬರಬಹುದು.

2029ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಸಂಘಟನಾತ್ಮಕ ಬದಲಾವಣೆ ತರಲು ಖರ್ಗೆ ಮತ್ತು ರಾಹುಲ್ ಇಬ್ಬರೂ ಮಹತ್ವದ ಪಾತ್ರ ವಹಿಸಿದ್ದಾರೆ.

ಕಾಂಗ್ರೆಸ್ ವಿಚಾರ ಇದಾದರೆ, ಎಡಪಂಥೀಯರು ಕೂಡ ದೊಡ್ಡ ಪರಿವರ್ತನೆಯ ಸುಳಿವು ತೋರಿಸಿದ್ದಾರೆ. ಎಡಪಂಥೀಯರು ತಮ್ಮ ಅತಿಯಾದ ಕೇಂದ್ರೀಕರಣದ ಬಗ್ಗೆ ಹಲವು ವರ್ಷಗಳಿಂದ ಟೀಕೆಗಳಿಗೆ ತುತ್ತಾಗಿರುವವರು. ಈಗ ಮಹತ್ವದ ಬೆಳವಣಿಗೆಯಲ್ಲಿ ಅಲ್ಲಿ ನಾಯಕತ್ವ ಹೊಸ ನಾಯಕರ ಹೆಗಲೇರುತ್ತಿದೆ. ಸಿಪಿಎಂನಲ್ಲಿ ಇತ್ತೀಚೆಗೆ ಹಿರಿಯ ನಾಯಕ ಎಂ.ಎ. ಬೇಬಿ ಅವರ ಕೈಗೆ ಪಕ್ಷದ ಸಾರಥ್ಯ ಹೋಗಿದೆ.

ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರಂತಹ ಅನೇಕ ಹಿರಿಯ ನಾಯಕರು ತಮ್ಮ ಪಾಲಿಟ್ಬ್ಯೂರೋ ಸ್ಥಾನಗಳಿಂದ ಹಿಂದೆ ಸರಿದು ಹೊಸ ನಾಯಕರಿಗೆ ದಾರಿ ಮಾಡಿಕೊಟ್ಟಿದ್ಧಾರೆ.

ಹೀಗೆ ವಿಪಕ್ಷಗಳು ದೊಡ್ಡ ಬದಲಾವಣೆಗೆ ಒಡ್ಡಿಕೊಳ್ಳುತ್ತಿರುವಾಗ, ಬಿಜೆಪಿ ಬಳಲುತ್ತಿರುವಂತೆ ಕಾಣುತ್ತದೆ.

ಬಿಜೆಪಿ ಬಲಿಷ್ಠವಾಗಿದೆ ಎಂದು ಮೋದಿ-ಶಾ ಜೋಡಿ ತೋರಿಸಿಕೊಳ್ಳುತ್ತಿದ್ದರೂ, ವಾಸ್ತವ ಹಾಗಿಲ್ಲ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಅದರ ಆಂತರಿಕ ಪ್ರಜಾಪ್ರಭುತ್ವ ಮೋದಿ-ಶಾ ದರ್ಬಾರಿನಲ್ಲಿ ದುರ್ಬಲವಾಗಿರುವುದು ಕಂಡುಬರುತ್ತಿದೆ. ಅದು ದೀರ್ಘಾವಧಿಯಲ್ಲಿ ಪಕ್ಷದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಬಿಜೆಪಿಯೊಳಗಿನ ಈ ಬಿಕ್ಕಟ್ಟು ವಿರೋಧ ಪಕ್ಷಗಳ ಪಾಲಿಗೆ ಹೊಸ ಅವಕಾಶವಾಗಿ ಒದಗಿದರೆ ಅಚ್ಚರಿಯೇನಿಲ್ಲ.

ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ಸಿಗದೆ ಹೋಗಬಹುದು. ಅದಿನ್ನೂ ದೂರದ ಮಾತು ಎಂಬುದು ನಿಜ. ಆದರೆ ವಿಪಕ್ಷಗಳಲ್ಲಿ ಕಾಣುತ್ತಿರುವ ಬದಲಾವಣೆ ಪರ್ವ ಮತ್ತು ಬಿಜೆಪಿಯೊಳಗೆ ಹೆಡೆಯೆತ್ತಿರುವ ಬಿಕ್ಕಟ್ಟು ಹೊಸದೊಂದು ರಾಜಕೀಯದ ಆರಂಭವಾಗಿರಬಹುದೇ ಎಂಬ ಕುತೂಹಲವಂತೂ ಮೂಡಿದೆ.

ಮೋದಿ-ಶಾ ಜೋಡಿಯಿಂದಾಗಿ ಬಿಜೆಪಿ ಒಳಗಿನ ಪಾರದರ್ಶಕ ನೇಮಕಾತಿ ನೀತಿ ಹಾಗೂ ಆಂತರಿಕ ಪ್ರಜಾಪ್ರಭುತ್ವ ಮುಗಿದು ಹೋಯಿತು ಎಂಬಂತಹ ವಾತಾವರಣ ಆ ಪಕ್ಷದ ಒಳಗೆ ಸೃಷ್ಟಿಯಾಗಿದೆ. ಅಂತಹ ಇಮೇಜ್ ಬಿಜೆಪಿ ಪಾಲಿಗೆ ಬಹಳ ದೊಡ್ಡ ಹಿನ್ನಡೆಯಾಗಲಿದೆ.

ಯಾವ ಕಾರಣಕ್ಕಾಗಿ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿ ಬಿಜೆಪಿ ಕಡೆ ತಿರುಗಿದ್ದರೋ ಅದೇ ಕಾರಣ ಇವತ್ತು ಬಿಜೆಪಿಯೊಳಗಿದೆ.

ಅದೇ ಹೊತ್ತಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಪಕ್ಷದ ಸಂಘಟನೆ ಬಲಿಷ್ಠ ಪಡಿಸಲು ಹೊರಟಿರುವುದು ಅದಕ್ಕೆ ಜನರಿಂದ ಬೆಂಬಲ ಸಿಗುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದು ಕಾಂಗ್ರೆಸ್ಗೆ ರಾಜಕೀಯವಾಗಿ ಬಹಳ ಪ್ರಯೋಜನಕಾರಿಯಾಗುವ ನಡೆಯಾಗಿದೆ.

ಆದರೆ ಬಿಜೆಪಿ ಮಾತ್ರ ಮೋದಿ-ಶಾ ಕೇಂದ್ರಿತ ನಿರ್ಧಾರಗಳಿಗೆ ಬೆಲೆ ತೆರುವ ದಿನಗಳೂ ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ವಿನಯ್ ಕೆ.

contributor

Similar News