ಬೆಂಗಳೂರು| ಚಿನ್ನಾಭರಣ, ನಗದು ದೋಚಿದ್ದ ಪ್ರಕರಣ: ಉಪ ಅರಣ್ಯಾಧಿಕಾರಿ ಸೇರಿ 11 ಮಂದಿ ಬಂಧನ

Update: 2023-12-22 16:54 GMT

ಬೆಂಗಳೂರು: ವ್ಯವಸ್ಥಿತ ಸಂಚು ರೂಪಿಸಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿಶೀಟರ್ ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಇಲ್ಲಿನ ಪೀಣ್ಯ ಠಾಣೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಎಚ್ಎಂಟಿ ಲೇಔಟ್ ನಲ್ಲಿ ವಾಸವಾಗಿರುವ ರೂಪೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿ ಕೃತ್ಯದಲ್ಲಿ ಶಾಮೀಲಾಗಿದ್ದ ಸುರೇಶ್, ದಾವಣಗೆರೆ ಜಿಲ್ಲೆ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ, ವಸಂತ್ ಕುಮಾರ್, ಅನಿಲ್ ಕುಮಾರ್, ಚಾಲಕ ನಾಗರಾಜ್, ಕೆ.ಜಿ.ಹಳ್ಳಿಯ ರೌಡಿಶೀಟರ್ ಗಳಾದ ನವಾಝ್, ಶೇಕ್ ಶಹಬಾಜ್ ಸಹಚರರಾದ ರಾಹಿಲ್‌ ಪಾಷಾ ಉಸ್ಮಾನ್ ಖಾನ್ ಸೇರಿ 11 ಮಂದಿಯನ್ನು ಬಂಧಿಸಿರುವುದಾಗಿ ಗೊತ್ತಾಗಿದೆ.

ಬಂಧಿತರಿಂದ 45.52 ಲಕ್ಷ ರೂ. ಬೆಲೆಬಾಳುವ 273 ಗ್ರಾಂ ಚಿನ್ನ, 370 ಗ್ರಾಂ ಬೆಳ್ಳಿ, 23 ಲಕ್ಷದ ನಗದು, 13 ಮೊಬೈಲ್ ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಚ್ಎಂಟಿ ಲೇಔಟ್ ನಲ್ಲಿ ವಾಸವಾಗಿರುವ ರೂಪೇಶ್ ತಂದೆ ಮನೋಹರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇವರ ಬಳಿ ಲಾರಿ ಚಾಲಕನಾಗಿ ಆರೋಪಿ ನಾಗರಾಜ್ ಕೆಲಸ ಮಾಡುತ್ತಿದ್ದ. ಈತ 2022ರ ಡಿಸೆಂಬರ್ ನಲ್ಲಿ ಕೆಲಸ ತೊರೆದಿದ್ದ. ಮಾಲಕನ ಹಣದ ವ್ಯವಹಾರ ಬಗ್ಗೆ ಹತ್ತಿರದಿಂದ ನಾಗರಾಜ್ ಗಮನಿಸಿದ್ದ. ಇದೇ ವಿಷಯವನ್ನು ಸ್ನೇಹಿತ ಅನಿಲ್ ಕುಮಾರ್ ಬಳಿ ತಮ್ಮ ಮಾಲಕನ ಬಳಿ ಸಾಕಷ್ಟು ಹಣವಿದ್ದು, ನೋಟು ಎಣಿಸುವ ಯಂತ್ರಗಳಿವೆ ಎಂದಿದ್ದ.

ಉಪ ಅರಣ್ಯಾಧಿಕಾರಿಯಾಗಿದ್ದ ಸುರೇಂದ್ರನ ಸಮವಸ್ತ್ರ ಖಾಕಿಯಾಗಿದ್ದರಿಂದ ಪೊಲೀಸ್ ಸೋಗಿನಲ್ಲಿ ಹೋಗುವಂತೆ ಸಹಚರರು ಸೂಚಿಸಿದ್ದರು. ಇದರಂತೆ ಡಿ.4ರಂದು ಸಂಜೆ ಮನೆ ಬಳಿ ಆರೋಪಿಗಳ ತಂಡವೇ ದಾಂಗುಡಿ ಇಟ್ಟಿತ್ತು. ಮನೆಯಲ್ಲಿ ರೂಪೇಶ್ ಹಾಗೂ ಆತನ ತಾಯಿ ಇಬ್ಬರೆ ಇದ್ದರು. ಪೊಲೀಸ್ ಸೋಗಿನಲ್ಲಿ ಸುರೇಂದ್ರ ಬಾಗಿಲು ತಟ್ಟಿದ್ದಾರೆ. ಮನೆಯೊಳಗಿನ ಕಿಟಕಿಯಿಂದ ಇಣುಕಿ ನೋಡಿದ ರೂಪೇಶ್, ಪೊಲೀಸರೆಂದು ಭಾವಿಸಿ ಬಾಗಿಲು ತೆರೆದಿದ್ದರು. ಪೊಲೀಸ್ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಸುರೇಂದ್ರ ಪ್ರವೇಶಿಸಿದ್ದ. ಕ್ಷಣಮಾತ್ರದಲ್ಲಿ ಇನ್ನಿತರ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಲಾಂಗು- ಮಚ್ಚಿನಿಂದ ರೂಪೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆಕೆಯ ತಾಯಿಗೂ ಬೆದರಿಸಿದ್ದಾರೆ. ಇಬ್ಬರನ್ನೂ ರೂಮ್‌ ಗೆ ಕರೆದುಕೊಂಡು ಟೇಪ್ ನಿಂದ ಸುತ್ತಿ ಕೂಡಿಹಾಕಿ ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಪೊಲೀಸರು ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ. ಅಲ್ಲದೆ ಕುಣಿಗಲ್ ಟೋಲ್ ದಾಟಿರುವುದು ತಿಳಿದುಬಂದಿತ್ತು. ಟವರ್ ಡಂಪ್ ಮೂಲಕ ಸುರೇಂದ್ರನ ನಂಬರ್ ಮಾತ್ರ ಸಕ್ರಿಯವಾಗಿತ್ತು. ಅಲ್ಲದೆ ಸಿಡಿಆರ್ (ಒಳಬರುವ ಕರೆ) ತೆಗೆದಾಗ ಶ್ರೀಧರ್, ವಸಂತ್ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಘಟನೆ ಬಳಿಕ ಚಿತ್ರದುರ್ಗ, ಕೊಡೈಕೆನಾಲ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News