ಮತದಾನದ ಬಗ್ಗೆ ತಮ್ಮ ಅಪಾರ್ಟ್‍ಮೆಂಟ್‍ಗಳಲ್ಲಿ ಅರಿವು ಮೂಡಿಸಿ: ತುಷಾರ್ ಗಿರಿನಾಥ್
ಬೆಂಗಳೂರು: ನಗರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮುಚ್ಛಯಗಳಲ್ಲಿ(ಅಪಾರ್ಟ್‍ಮೆಂಟ್) ವಾಸಿಸುವವರ ಪಾತ್ರ ಹೆಚ್ಚಾಗಿದ್ದು, ಮತದಾನದ ಬಗ್ಗೆ ತಮ್ಮ ಅಪಾರ್ಟ್‍ಮೆಂಟ್‍ಗಳಲ್ಲಿ ಅರಿವು ಮೂಡಿಸಿ ತಪ್ಪದೆ ಮತದಾನ ಮಾಡುವಂತೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಪಾರ್ಟ್‍ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಪಾರ್ಟ್‍ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳು 4 ಲೋಕಸಭಾ ಕ್ಷೇತ್ರಗಳಿಗೆ ಬರಲಿದ್ದು, ಮತದಾನದ ಪ್ರಮಾಣವನ್ನು ಕಳೆದ ಬಾರಿಗಿಂತ ಹೆಚ್ಚಳ ಮಾಡಬೇಕಿದ್ದು, ಅದಕ್ಕೆ ತಮ್ಮ ಸಹಕಾರ ಅತ್ಯಗತ್ಯವಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯ ಸಂಪೂರ್ಣ ಮಾಹಿತಿಯನ್ನು ಚುನಾವಣಾ ವಿಭಾಗದಿಂದ ನೀಡಲಾಗುವುದು. ತಾವುಗಳು ತಮ್ಮ ಸಮುಚ್ಛಯಗಳಲ್ಲಿ ಬಿತ್ತರಿಸಿಕೊಂಡು ಮತದಾನದ ಕುರಿತು ಎಲ್ಲರಿಗೂ ಅರಿವು ಮೂಡಿಸುವ ಜೊತೆಗೆ ತಪ್ಪದೆ ಮತದಾನ ಮಾಡುವಂತೆ ಎಲ್ಲರಿಗೂ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ-ತಮ್ಮ ವ್ಯಾಪ್ತಿಯಲ್ಲಿ ಸಭೆಗಳನ್ನು ಏರ್ಪಡಿಸಿಕೊಂಡು ಮತದಾನ ಮಾಡುವ ಬಗ್ಗೆ ಹೆಚ್ಚು-ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಬೇಕು. ಮತದಾನ ಮಾಡುವ ಕುರಿತು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಅಪಾರ್ಟ್‍ಮೆಂಟ್‍ಗಳಲ್ಲಿ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ಇದ್ದಲ್ಲಿ ಅಂತಹವರಿಗೆ ಅಂಚೆ ಮತದಾನ ಮಾಡುವ ಅವಕಾಶವಿದ್ದು, ಆ ಕುರಿತು ಮಾಹಿತಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆಗಳನ್ನು ಭರ್ತಿ ಮಾಡಿಸಬೇಕು ಎಂದು ತುಷಾರ್ ಗಿರಿನಾಥ್ ಹೇಳಿದರು.
ಮತಗಟ್ಟೆಗಳ ಬಳಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ: ಮತಗಟ್ಟೆಗಳ ಬಳಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮಾಡಲಾಗುತ್ತಿದೆ. ಅದರಂತೆ ಶೌಚಾಲಯ, ಕುಡಿಯುವ ನೀರು, ಚೇರ್ ಗಳು, ಪ್ಯಾನ್, ವಿದ್ಯುತ್ ವ್ಯವಸ್ಥೆ, ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸರತಿ ಸಾಲು ವ್ಯವಸ್ಥಿತವಾಗಿ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ.
ಈ ವೇಳೆ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಬೆಂಗಳೂರು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.