ಕುಸಿದ ಕಾನೂನು ಸುವ್ಯವಸ್ಥೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್.ಅಶೋಕ ಆಗ್ರಹ

Update: 2024-04-21 09:26 GMT

ಆನೇಕಲ್, ಎ.21: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಚುನಾವಣಾ ಪ್ರಚಾರದಲ್ಲಿ ಅವರು ಪಾಲ್ಗೊಂಡಿರುವ ಅವರು ಬಿದಿರುಕುಪ್ಪೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟು ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ದುಷ್ಟ ಕಾಂಗ್ರೆಸ್ ಉಂಟುಮಾಡಿದೆ. ಮುಸ್ಲಿಮ್ ಮತಾಂದವಾದಿಗಳಿಗೆ ಈ ಸರ್ಕಾರದಲ್ಲಿ ಬಹಳ ಗೌರವವಿದೆ. ನೀವು ನಮ್ಮ ಮತಬ್ಯಾಂಕ್ ಆಗಿದ್ದು, ನಿಮ್ಮ ಪೂರ್ತಿ ರಕ್ಷಣೆ ಮಾಡುತ್ತೇವೆ ಎಂದು ಸರ್ಕಾರವೇ ಹೇಳಿದೆ. ಜೈ ಶ್ರೀರಾಮ್ ಎಂದರೆ, ಮೋದಿ ಕುರಿತು ಹಾಡು ಹಾಕಿದರೆ ಹೊಡೆಯುತ್ತಾರೆ. ಪಾಕ್ ಝಿಂದಾಬಾದ್ ಎಂದವರಿಗೆ ಬಿರಿಯಾನಿ ಜೊತೆಗೆ ಪಾಸ್ ಕೂಡ ಕೊಡುತ್ತಾರೆ ಎಂದು ಆರೋಪಿಸಿದರು.

ಡಿ.ಕೆ.ಸುರೇಶ್ ಅವರ ರ್ಯಾಲಿಯಲ್ಲಿ ಕೆಲವರು ಪಾಕಿಸ್ತಾನ ಜೈ ಎಂದಿದ್ದಾರೆ. ಆದರೆ ಡಿ.ಕೆ.ಸುರೇಶ್ ಏನೂ ಮಾತಾಡದೆ ಸುಮ್ಮನೆ ನಿಂತಿದ್ದರು. ಈಗಾಗಲೇ ಅವರು ದೇಶ ಒಡೆಯುವ ಮಾತನಾಡಿದ್ದಾರೆ. ಭಾರತ ಮಾತೆಯನ್ನು ಪ್ರೀತಿಸುವ ಬೆಂಗಳೂರು ಗ್ರಾಮಾಂತರದ ಜನರು ಇವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ರಾಮೇಶ್ವರಂ ಕೆಫೆಯಲ್ಲಿ ನಡೆದ ಘಟನೆ ಭಯೋತ್ಪಾದನಾ ಚಟುವಟಿಕೆಯಾಗಿದ್ದು, ಇದನ್ನು ಮಾಡುವವರೆಲ್ಲ ಡಿ.ಕೆ.ಶಿವಕುಮಾರ್ ಅವರ ಸಹೋದರರೇ ಆಗಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಮಾಡಿದವನನ್ನು ಬ್ರದರ್ ಎಂದ ಡಿ.ಕೆ.ಶಿವಕುಮಾರ್ ಒಕ್ಕಲಿಗ ಹೇಗಾಗುತ್ತಾರೆ? ಒಕ್ಕಲಿಗ ಮುಖಂಡ ಎಂದು ಹೇಳಿಕೊಂಡು ಮತ ಯಾಚಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ಗೆ ಚೊಂಬು ಗ್ಯಾರಂಟಿ. ರಾಹುಲ್ ಗಾಂಧಿಗೆ ನಾವು ಚೊಂಬು ಕಳುಹಿಸಿಕೊಡಲಿದ್ದು, ಅವರು ವಿದೇಶಕ್ಕೆ ಹೋಗಿ ಏನಾದರೂ ಮಾಡಲಿ. ಸೋತ ಬಳಿಕ ಅವರು ಖಂಡಿತ ವಿದೇಶಕ್ಕೆ ಹೋಗುತ್ತಾರೆ ಎಂದರು.

ಕಾಂಗ್ರೆಸ್ ಕೊಟ್ಟ ಚೊಂಬುಗಳು

ಕಾಂಗ್ರೆಸ್ ಸರ್ಕಾರ ರೈತರಿಗೆ ಬೋರ್ವೆಲ್ ಅನುದಾನ ಕಿತ್ತುಕೊಂಡು ಮೊದಲ ಚೊಂಬು ನೀಡಿದೆ. ಕಿಸಾನ್ ಸಮ್ಮಾನ್ ಕಿತ್ತುಕೊಂಡಿದ್ದು ಎರಡನೇ ಚೊಂಬು, ಹಾಲಿನ ಪ್ರೋತ್ಸಾಹಧನ ನುಂಗಿದ್ದು ಮೂರನೇ ಚೊಂಬು, ಬರಗಾಲದ್ದು ನಾಲ್ಕನೇ ಚೊಂಬು, ಕಾವೇರಿ ನೀರನ್ನು ಸ್ನೇಹಕ್ಕೆ ತಮಿಳುನಾಡಿಗೆ ಬಿಟ್ಟಿದ್ದು ಐದನೇ ಚೊಂಬು, ವಿದ್ಯುತ್ ಶುಲ್ಕ ಹೆಚ್ಚಿಸಿದ್ದು ಆರನೇ ಚೊಂಬು. ಹಾಲು, ಮೊಸರು ದರ ಹೆಚ್ಚಳ, ಆಲ್ಕೋಹಾಲ್ ಬೆಲೆ ಹೆಚ್ಚಳ ಸೇರಿದಂತೆ ಹಲವಾರು ಚೊಂಬುಗಳನ್ನು ನೀಡಿದೆ ಎಂದರು.

 ಕಾಂಗ್ರೆಸ್ ಬಂತು, ಭಯೋತ್ಪಾದನೆ ಬಂತು, ನಕ್ಸಲ್ ಬಂತು, ಬಾಂಬ್ ಬಂತು ಎಂಬ ಸ್ಥಿತಿ ಉಂಟಾಗಿದೆ. ಹಿಂದೂಗಳನ್ನು ರಕ್ಷಿಸುವ ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ. ಮೋದಿ ಸರ್ಕಾರ ಬಂದ ಬಳಿಕ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗ ಬಾಂಬ್ ಸ್ಫೋಟವಾದರೂ ಆಗ ಅವರನ್ನು ಬೆಂಬಲಿಸದೆ ಹೆಡೆಮುರಿ ಕಟ್ಟಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News