ಪಂಜಾಬ್ ಬ್ಯಾಂಕ್‍ಗೆ ವಂಚನೆ: ಬಿಜೆಪಿ ಮುಖಂಡ ಶಿವರಾಮೇಗೌಡಗೆ ನಿರೀಕ್ಷಣಾ ಜಾಮೀನು

Update: 2024-01-02 16:20 GMT

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳ ನೆರವಿನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ 11 ಕೋಟಿ ರೂ. ಸಾಲ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತು ಕುಟುಂಬದವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರಾಯಲ್ ಕಾನ್‍ಕಾರ್ಡ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿರುವ ಶಿವರಾಮೇಗೌಡ ಮತ್ತು ಅವರ ಕುಟುಂಬಸ್ಥರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಪೀಠವು ಪುರಸ್ಕರಿಸಿದೆ.

ಮೆಸರ್ಸ್ ರಾಯಲ್ ಕಾನ್‍ಕಾರ್ಡಕೇಷನ್ ಟ್ರಸ್ಟ್, ಎಲ್.ಆರ್.ಶಿವರಾಮೇಗೌಡ, ಸುಧಾ ಶಿವರಾಮೇಗೌಡ, ಎಲ್.ಎಸ್.ಚೇತನ್ ಗೌಡ, ಎಲ್.ಎಸ್.ಭವ್ಯ ಗೌಡ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆರೋಪ ಪಟ್ಟಿ ಸಲ್ಲಿಸುವವರೆಗೆ ಅಥವಾ ಮೂರು ತಿಂಗಳ ಕಾಲ ಸಂಬಂಧಿತ ಠಾಣೆಗೆ ತೆರಳಿ ಅರ್ಜಿದಾರರು ಸಹಿ ಮಾಡಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೊದಲ ಆರೋಪಿ ನಂಜಪ್ಪ ಶಿವಪ್ರಸಾದ್ ಮತ್ತು ಉಮಾ ಪ್ರಸಾದ್ ಅವರಿಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.

ಪ್ರಕರಣವೇನು?: 2016ರ ಆಗಸ್ಟ್ ನಲ್ಲಿ ನಂಜಪ್ಪ ಮತ್ತು ಉಮಾ ಅವರು ಉದ್ಯಮ ನಡೆಸುವುದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ 5 ಕೋಟಿ ಸಾಲ ಪಡೆದಿದ್ದರು. ಆನಂತರ 2016ರ ಡಿಸೆಂಬರ್ ನಲ್ಲಿ ಮತ್ತೆ ಹೊಸದಾಗಿ ಓವರ್ ಡ್ರಾಫ್ಟ್ ಸೌಲಭ್ಯದ ಮೂಲಕ 2.5 ಕೋಟಿ ಸಾಲ ಪಡೆದಿದ್ದರು. 2018ರ ಜೂನ್‍ನಲ್ಲಿ ಮತ್ತೆ 3.5 ಕೋಟಿ ಸಾಲ ಪಡೆದಿದ್ದು, ಒಟ್ಟು 11 ಕೋಟಿ ಸಾಲ ಪಡೆದಿದ್ದರು. ಇದನ್ನು ಪಾವತಿಸದ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸಿಬಿಐಗೆ ದೂರು ನೀಡಿದ್ದರು.

ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಅವುಗಳನ್ನು ಬಳಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾಲ ಪಡೆದಿದ್ದರು. ಆನಂತರ ಸಾಲ ಮರುಪಾವತಿ ಮಾಡದೇ ವಂಚಿಸಿದ್ದಾರೆ ಎಂದು ಬೆಂಗಳೂರಿನ ಎಂ ಜಿ ರಸ್ತೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್ ಡಿ ಮೋದಿ ದೂರು ಸಲ್ಲಿಸಿದ್ದರು. ಓಟಿಎಸ್ ಸೌಲಭ್ಯದ ಮೂಲಕ 6.5 ಕೋಟಿ ಕಟ್ಟಲು ತಾವು ಸಿದ್ಧರಿದ್ದೇವೆ ಎಂದು ಅರ್ಜಿದಾರರು ತಿಳಿಸಿದ್ದರು. ಇದಕ್ಕೆ ಬ್ಯಾಂಕ್ ಒಪ್ಪಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News