ಬೆಂಗಳೂರಿನಲ್ಲಿ ‘ಗುಜರಾತ್ ಐಟಿ/ಐಟಿಇಎಸ್ ನೀತಿ ರೋಡ್ ಶೋ’

ಬೆಂಗಳೂರು : ಗುಜರಾತಿನ ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ‘ಗುಜರಾತ್ ಐಟಿ/ಐಟಿಇಎಸ್ ನೀತಿ’ಗಾಗಿ ಬೆಂಗಳೂರು ನಗರದಲ್ಲಿ ಗುರುವಾರ ಆಯೋಜಿಸಿದ್ದ ರೋಡ್ ಶೋ ಯಶಸ್ವಿಯಾಗಿ ಜರುಗಿತು.
ರೋಡ್ ಶೋ ಬಳಿಕ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಜರಾತ್ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋನಾ ಖಂಧರ್, ಗುಜರಾತ್ ಐಟಿ/ಐಟಿಇಎಸ್ ನೀತಿ 2022-27 ಅತ್ಯಾಧುನಿಕ ತಯಾರಿಕೆ, ಸಂಶೋಧನೆ ಮತ್ತು ಡಿಜಿಟಲ್ ಪರಿವರ್ತನೆ ಜೊತೆಗೆ ಭವಿಷ್ಯಕ್ಕೆ ಸಿದ್ಧವಿರುವ ಕೈಗಾರಿಕಾ ವಾತಾವರಣ ನಿರ್ಮಾಣ ಮಾಡುವ ನಮ್ಮ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ ಎಂದರು.
ಗುಜರಾತ್ ರಾಜ್ಯವು ಕೇವಲ ಸ್ಥಳೀಯ ಬೆಳವಣಿಗೆ ಮಾತ್ರ ಆದ್ಯತೆ ನೀಡದೆ 2047ರ ವೇಳೆಗೆ ಭಾರತವು ಅಭಿವೃದ್ಧಿ ದೇಶವಾಗಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಮೋನಾ ಖಂಧರ್ ಹೇಳಿದರು.
ಧೋಲೆರಾದಲ್ಲಿ ಸೆಮಿಕಂಡಕ್ಟರ್ ಕೇಂದ್ರ ಸ್ಥಾಪನೆ, ಜಾಗತಿಕ ಪಾಲುದಾರಿಕೆ, ಕೌಶಲ ವೃದ್ಧಿ ಹಾಗೂ ಸಂಶೋಧನೆಗೆ ಒತ್ತು ನೀಡುವ ಮೂಲಕ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ನಾವು ಉದ್ಯಮಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ ಎಂದು ಮೋನಾ ಖಂಧರ್ ತಿಳಿಸಿದರು.
ಅಹ್ಮದಾಬಾದ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ‘ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ’-ಯಂತಹ ಯೋಜನೆಗಳು ನಮ್ಮ ಪ್ರಗತಿಯ ಮಹತ್ವಾಕಾಂಕ್ಷೆ ಜೊತೆ ಹೊಂದಿಕೊಳ್ಳುವ ಜಾಗತಿಕ ಮಟ್ಟದ ಮೂಲಸೌಲಭ್ಯಗಳನ್ನು ಒದಗಿಸಿ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಗುಜರಾತ್ ಆದ್ಯತೆಯ ರಾಜ್ಯವನ್ನಾಗಿಸಲು ನೆರವಾಗಲಿವೆ ಎಂದು ಮೋನಾ ಖಂಧರ್ ಹೇಳಿದರು.
ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕ ಅನ್ಮೋಲ್ ಪಟೇಲ್ ಮಾತನಾಡಿ, ಚೆನ್ನೈನಲ್ಲಿ ನಡೆದ ರೋಡ್ ಶೋ ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಮಗೆ ದೊರೆತಿರುವ ಅಗಾಧ ಪ್ರತಿಕ್ರಿಯೆಯಿಂದ ನಾವು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇವೆ. ಐಟಿ/ಐಟಿಇಎಸ್ ವಲಯವನ್ನು ಮುನ್ನಡೆಸುವ ಗುಜರಾತ್‌ನ ಅಪಾರ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸುತ್ತದೆ ಎಂದರು.
ಗುಜರಾತ್ ಸರಕಾರ ಮತ್ತು ಐಟಿ/ಐಟಿಇಎಸ್ ನೀತಿಯ ಬೆಂಬಲದ ನೆರವಿನಿಂದ, ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ-ಗೆ ಸಂಬಂಧಿಸಿದ ನಮ್ಮ ದೂರದೃಷ್ಟಿಯು ಮತ್ತೊಂದು ಟೌನ್‌ಶಿಪ್ ಅಭಿವೃದ್ಧಿಪಡಿಸುವುದಕ್ಕೆ ಸೀಮಿತವಾಗಿರದೆ, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ನಿರ್ಮಾಣಕ್ಕೂ ನೆರವಾಗಲಿದೆ. ಇದು ನಾವೀನ್ಯತೆ, ಐಶಾರಾಮಿ ಮತ್ತು ಸಮುದಾಯವು ಒಂದೆಡೆ ಸೇರುವ ಸ್ಥಳವಾಗಿರಲಿದೆ ಎಂದು ಅನ್ಮೋಲ್ ಪಟೇಲ್ ಹೇಳಿದರು.
ಗುಜರಾತ್ ಮತ್ತು ಕರ್ನಾಟಕದ ಐಟಿ ಕ್ಷೇತ್ರದ ಪ್ರಮುಖರನ್ನು ಒಂದೆಡೆ ಸೇರಿಸುವ ಮೂಲಕ, ಗುಜರಾತ್ ರಾಜ್ಯವನ್ನು ಐಟಿ ಹೂಡಿಕೆಗಳಿಗೆ ಮೊದಲ ಆಯ್ಕೆಯನ್ನಾಗಿ ಮಾಡುವ ಕಾರ್ಯತಂತ್ರದ ಉಪಕ್ರಮಗಳ ಮೇಲೆ ಬೆಳಕು ಚೆಲ್ಲುವಲ್ಲಿ ಈ ರೋಡ್ ಶೋ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರಿನ ಉತ್ಸಾಹಿ ತಂತ್ರಜ್ಞಾನ ಸಮುದಾಯದ ತೀವ್ರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯು ಐಟಿ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದರ ಬಗೆಗಿನ ನಮ್ಮ ದೃಢ ವಿಶ್ವಾಸವನ್ನು ಪುನರುಚ್ಚರಿಸುತ್ತದೆ ಎಂದು ಅನ್ಮೋಲ್ ಪಟೇಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಇನ್ಫಾರ್ಮ್ಯಾಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ತುಷಾರ್ ವೈ. ಭಟ್ ಹಾಗೂ ಉದ್ಯಮಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಗುಜರಾತ್ ಐಟಿ/ಐಟಿಇಎಸ್ ನೀತಿ 2022-27ರ ಅಡಿಯಲ್ಲಿ ನೀಡಲಾಗುತ್ತಿರುವ ವಿವಿಧ ಉತ್ತೇಜನಾ ಕ್ರಮಗಳ ಕುರಿತು ಸಮಾಲೋಚನಾ ಸಭೆಗಳು ಜರುಗಿದವು.