‘ಶಿಕ್ಷಣ ವರದಿ 2024’ ಪ್ರಕಟಿಸಿದ ಬಹುತ್ವ ಕರ್ನಾಟಕ
ಬೆಂಗಳೂರು : ಕೇಂದ್ರ ಸರಕಾರವು ವಾರ್ಷಿಕ ಬಜೆಟ್‍ನಲ್ಲಿ ಜಿಡಿಪಿಯ ಶೇ.7ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಶಿಕ್ಷಣ ಸಚಿವಾಲಯಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡುತ್ತಿಲ್ಲ ಎಂದು ಬಹುತ್ವ ಕರ್ನಾಟಕವು ವರದಿ ಪ್ರಕಟಿಸಿದೆ.
ಬುಧವಾರದಂದು ಬಹುತ್ವ ಕರ್ನಾಟಕವು ‘ಗ್ಯಾರೆಂಟಿ ಚೆಕ್’ ವರದಿಗಳ ಸರಣಿಯಾದ ‘ಶಿಕ್ಷಣ ವರದಿ 2024’ ಅನ್ನು ಬಿಡುಗಡೆ ಮಾಡಿದ್ದು, ಕೇಂದ್ರದ ಶಿಕ್ಷಣದಲ್ಲಿ ಭಾರಿ ಕಡಿಮೆ ಹೂಡಿಕೆಯಾಗಿದೆ. ಕೇಂದ್ರ ಸರಕಾರವು ಶಿಕ್ಷಣ ಸಚಿವಾಲಯಕ್ಕೆ ಕಡಿಮೆ ಅನುದಾನವನ್ನು ಬಿಡುಗಡೆ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯು ಶಿಕ್ಷಣದಲ್ಲಿ ಒಟ್ಟಾರೆ ಹೂಡಿಕೆಯು ಜಿಡಿಪಿಯ ಶೇ.7ರಷ್ಟು ಆಗಿರಬೇಕು. ಹೊರತಾಗಿ, ಶೇ.4ರ ಆಸುಪಾಸಿನಲ್ಲ ಎಂದು ಅವರು ಸಲಹೆ ನೀಡಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣಕ್ಕೆ ಅನುದಾನವನ್ನು ಕಡಿತಗೊಳಿಸಿದ್ದಾರೆ. ಶಿಕ್ಷಣ ಸಚಿವಾಲಯವು ಜಿಡಿಪಿಯ ಶೇ.0.4ರಷ್ಟು ಅನುದಾನ ಮಾತ್ರ ಪಡೆಯುತ್ತಿದ್ದು, ಇದು ನ್ಯೂಯಾರ್ಕ್‍ನ ಶಿಕ್ಷಣ ವೆಚ್ಚದ ಮೂರನೇ ಒಂದು ಭಾಗ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವಬ್ಯಾಂಕ್‍ನ ಮಾನವ ಬಂಡವಾಳ ಸೂಚ್ಯಂಕದಲ್ಲಿ ಭಾರತಕ್ಕೆ ಕಳಪೆ ಸ್ಥಾನ ನೀಡಿದೆ. ಶೇ.35ರಷ್ಟು ಭಾರತೀಯರು ಜ್ಞಾನ ಮತ್ತು ದೈಹಿಕ ದುರ್ಬಲತೆಯ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಅಂತೆಯೇ ಉನ್ನತ ಶಿಕ್ಷಣದಲ್ಲಿ ಅರ್ಧದಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಪದವಿ ಮುಗಿದ ಮೇಲೆ ನಿರುದ್ಯೋಗಿಗಳಾಗಿರುವ ಎಂಜಿನಿಯರಿಂಗ್ ಪದವೀಧರರ ಶೇಕಡಾವಾರು ಪ್ರಮಾಣವು ಹೆಚ್ಚುತ್ತಿದೆ. ಇದರ ಹೊರತಾಗಿಯೂ, ಕೇಂದ್ರವು 2024ರ ಬಜೆಟ್‍ನಲ್ಲಿ ಉನ್ನತ ಶಿಕ್ಷಣದ ಮೇಲಿನ ಹೂಡಿಕೆಯನ್ನು ಶೇ.18ರಷ್ಟು ಕಡಿಮೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಎಸ್‍ಸಿ, ಎಸ್‍ಟಿ ಅಥವಾ ಒಬಿಸಿಗೆ ಸೇರಿದ ವಿದ್ಯಾರ್ಥಿಗಳಿಗೆ ಕೇಂದ್ರ ಮೊದಲು ಭರವಸೆ ನೀಡಿದಷ್ಟು ಮೆಟ್ರಿಕ್ಯುಲೇಷನ್ ನಂತರದ ವಿದ್ಯಾರ್ಥಿವೇತನವನ್ನು ಪಾವತಿ ಮಾಡಿಲ್ಲ. 2021ರಲ್ಲಿ ಕೇವಲ ಅರ್ಧದಷ್ಟು ಮೊತ್ತವನ್ನು ಪಾವತಿಸಲಾಗಿದೆ. 2023ರಲ್ಲಿ ಕೇವಲ ಕಾಲು ಭಾಗವನ್ನು ಮಾತ್ರ ಪಾವತಿಸಲಾಗಿದೆ. ಅಲ್ಲದೆ ಉನ್ನತ ಶಿಕ್ಷಣದ ಹಲವು ಸಂಸ್ಥೆಗಳಲ್ಲಿ ಜಾತಿಯ ಕಾರಣಗಳಿಗಾಗಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಅನೇಕ ಐಐಟಿಗಳಲ್ಲಿನ ಮೆಸ್‍ಗಳಲ್ಲಿ ಸಸ್ಯಾಹಾರದಿಂದಲೂ ಜಾತಿ ಪ್ರತ್ಯೇಕತೆ ಕಾಣುತ್ತಿದೆ ಎಂದು ಬಹುತ್ವ ಕರ್ನಾಟಕವು ತಿಳಿಸಿದೆ.
ತುಳಿತಕ್ಕೊಳಗಾದ ಸಮುದಾಯಗಳ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ, ವಸ್ತುಗಳನ್ನು ಸ್ಪರ್ಶಿಸುವುದಕ್ಕಾಗಿ, ತಪ್ಪು ಉತ್ತರಗಳನ್ನು ನೀಡಿದ್ದಕ್ಕಾಗಿ ಮತ್ತು ಚೆನ್ನಾಗಿ ಓದುವುದಕ್ಕಾಗಿಯೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ವಾರ್ಷಿಕವಾಗಿ ದಾಖಲಾದ ಜಾತಿ ದೌರ್ಜನ್ಯಗಳ ಸಂಖ್ಯೆ 2014ರಿಂದ 2022ರವರೆಗೆ ಶೇ.50ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಲು ಕರೆ ನೀಡಿದರೂ ಪ್ರಧಾನಿ ಮೌನ ವಹಿಸಿದ್ದಾರೆ ಎಂದಿದೆ.
ಪ್ರಾದೇಶಿಕ ಭಾಷೆಗಳ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರವು ಸಂಸ್ಕೃತದ ಪ್ರಚಾರಕ್ಕಾಗಿ ವರ್ಷಕ್ಕೆ 200 ಕೋಟಿ ರೂ. ಖರ್ಚು ಮಾಡಿದರೆ, ಎಲ್ಲ ಪ್ರಾದೇಶಿಕ ಭಾಷೆಗಳಿಗೆ ವರ್ಷಕ್ಕೆ 10 ಕೋಟಿ ರೂ. ಮಾತ್ರ ಖರ್ಚು ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲು ತ್ರಿ-ಭಾಷಾ ಸೂತ್ರವು ಅವಕಾಶ ನೀಡುತ್ತಿದೆಯಾದರೂ, ದಕ್ಷಿಣ ಭಾರತದ ಭಾಷೆಗಳನ್ನು ಉತ್ತೇಜಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ.
ಕೇಂದ್ರವು ಹಿಂದಿಯಲ್ಲಿ ಕಾನೂನುಗಳನ್ನು ಮತ್ತು ಕ್ಯಾಬಿನೆಟ್ ಕಾರ್ಯಸೂಚಿಗಳನ್ನು ಸಿದ್ಧಪಡಿಸುವಲ್ಲಿ ಹಿಂದಿಯನ್ನು ಬಳಸುವುದರಿಂದ ದಕ್ಷಿಣದ ಕಾನೂನು ವಿದ್ಯಾರ್ಥಿಗಳು ಮತ್ತು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಅನಾನುಕೂಲವಾಗಿದೆ. ಇದಲ್ಲದೆ, ಪ್ರತಿಷ್ಠಿತ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಯೋಜನೆಗಳಿಗೆ ಗಗನ್ಯಾನ್ ಮತ್ತು ಚಂದ್ರಯಾನದಂತಹ ಕೇವಲ ಹಿಂದಿ ಹೆಸರುಗಳನ್ನು ಬಳಸುತ್ತಿದೆ. ಈ ಯೋಜನೆಗಳಿಗೆ ದಕ್ಷಿಣದ ರಾಜ್ಯಗಳು ಹೆಚ್ಚಿನ ತೆರಿಗೆ ರೂಪದಲ್ಲಿ ಹಣ ನೀಡಿವೆ. ಆದರೆ ದಕ್ಷಿಣದ ಭಾಷೆಗಳನ್ನೇ ಯೋಜನೆಗಳಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದೆ.
ಇದಲ್ಲದೆ ಕೇಂದ್ರವು ಡಾರ್ವಿನ್‍ನ ವಿಕಾಸದ ಸಿದ್ಧಾಂತ, ಆವರ್ತಕ ಕೋಷ್ಟಕ ಮತ್ತು ಪೈಥಾಗರಿಯನ್ ಪ್ರಮೇಯದಂತಹ ವಿಷಯಗಳನ್ನು 10ನೆ ತರಗತಿಯಿಂದ ಕೈಬಿಟ್ಟಿದೆ. ಬಿಜೆಪಿಯ ಉನ್ನತ ಶಿಕ್ಷಣದ ರಾಜ್ಯ ಸಚಿವರೊಬ್ಬರು ನೀಡಿದ್ದ “ಮಂಗವು ಮನುಷ್ಯನಾಗುವುದನ್ನು ಯಾರೂ ನೋಡಿಲ್ಲ” ಎಂಬ ಹೇಳಿಕೆ ಪ್ರಸಿದ್ಧವಾಗಿದೆ. ಮಧ್ಯಪ್ರದೇಶದ ಬಿಜೆಪಿ ಸರಕಾರವು ಜ್ಯೋತಿಷ್ಯ ಕೋರ್ಸ್‍ಗಳಲ್ಲಿ ಹೂಡಿಕೆ ಮಾಡುತ್ತಿದೆ. ಮಧ್ಯಪ್ರದೇಶದ 4 ಸರಕಾರಿ ಶಾಲೆಗಳಲ್ಲಿ 1 ಅನ್ನು ಮುಚ್ಚಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ದೇಶದಾದ್ಯಂತ 6 ರಲ್ಲಿ 1 ಬೋಧಕ ಹುದ್ದೆಗಳು ಖಾಲಿಯಿವೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ಬೋಧನಾ ಹುದ್ದೆಗಳು ಶೇ.42ರಷ್ಟು ಖಾಲಿಇವೆ. ವಿದ್ವಾಂಸರನ್ನು ಸೆರೆಮನೆಗೆ ಹಾಕಲಾಗಿದೆ, ಗುಂಡು ಹಾರಿಸಿ ಕೊಲ್ಲಲಾಗಿದೆ. ಅಮಾನತ್ತು ಮಾಡಿ, ಜೈಲಿನಲ್ಲಿಯೂ ಇಡಲಾಗಿದೆ. ಆದರೆ ಇದಕ್ಕೆ ದೇಶದ ಪ್ರಧಾನಿಯಿಂದ ಯಾವುದೇ ಖಂಡನೆ ವ್ಯಕ್ತವಾಗಿಲ್ಲ ಎಂದು ಬಹುತ್ವ ಕರ್ನಾಟಕವು ಟೀಕಸಿದೆ.