ಕೇಂದ್ರ ಸರಕಾರದಿಂದ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಅನುದಾನ

Update: 2024-02-18 13:39 GMT

ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನದ ಅಡಿಯಲ್ಲಿ ಬಹು ಶಾಸ್ತ್ರಿಯ ಸಂಶೋಧನಾ ವಿಶ್ವವಿದ್ಯಾಲಯ ಯೋಜನೆಯ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.

ದೇಶದ 1,472 ವಿಶ್ವವಿದ್ಯಾಲಯಗಳಲ್ಲಿ ಕೇವಲ 26 ವಿಶ್ವವಿದ್ಯಾಲಯಗಳು ಮಾತ್ರ ಪಿ.ಎಂ- ಷಾ ಬಹು ಶಾಸ್ತ್ರಿಯ ಸಂಶೋಧನಾ ವಿಶ್ವವಿದ್ಯಾಲಯ ಯೋಜನೆಯ ಮಾನದಂಡದ ಅಡಿಯಲ್ಲಿ ಸ್ಥಾನ ಪಡೆದಿದ್ದವು, ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದಾಗಿದೆ.

ಪಿ.ಎಂ- ಉಷಾ ಯೋಜನೆಯ ಎಲ್ಲ ಮಾನದಂಡಗಳಲ್ಲಿ ಶ್ರೇಷ್ಟ ಸಾಧನೆ ಮಾಡಿ ವಿವಿ ಅನುದಾನ ಪಡೆದುಕೊಂಡಿದೆ. ಇದು ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆಯ ಪ್ರತೀಕವಾಗಿದೆ. ಶಿಕ್ಷಣ, ಅಧ್ಯಯನ ಹಾಗೂ ಸಂಶೋಧನೆಗೆ ನಿರಂತರ ಆದ್ಯತೆ ನೀಡಿದ್ದ ವಿಶ್ವವಿದ್ಯಾಲಯಕ್ಕೆ ಈ ಯೋಜನೆಯ ಮೂಲಕ ಮತ್ತಷ್ಟು ಬಲ ಬಂದಿದೆ. 100 ಕೋಟಿ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಮರ್ಪಕವಾಗಿ ಬಳಸುತ್ತೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಎಂ ಜಯಕರ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಅನುದಾನದಲ್ಲಿ 50 ಕೋಟಿ ರೂ. ಅನ್ನು ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳ ಶೈಕ್ಷಣಿಕ ಕಟ್ಟಡಗಳು, ಆಂಫಿಥಿಯೇಟರ್ ಮತ್ತು ಹಾಸ್ಟೆಲ್‍ಗಳನ್ನು ನಿರ್ಮಿಸಲು ಮೀಸಲಿಡಲಿದ್ದೇವೆ. 30 ಕೋಟಿ ರೂ.ಅನ್ನು ಕ್ಯಾಂಪಸ್ ನೆಟ್ವರ್ಕಿಂಗ್ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಸಂಪನ್ಮೂಲಗಳ ಡಿಜಿಟಲೀಕರಣ, ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ಯಾಂಪಸ್ ಮಾಡಲು ಬಳಸಲಿದ್ದೇವೆ, ಜೊತೆಗೆ ಡಿಕಾರ್ಬೊನೈಸೇಶನ್ ಚಟುವಟಿಕೆಗಳನ್ನೂ ಕೈಗೊಳ್ಳಲಿದ್ದೇವೆ. ಇನ್ನುಳಿದ 20 ಕೋಟಿ ರೂ.ಅನ್ನು ಸುಧಾರಿತ ವೈಜ್ಞಾನಿಕ ಉಪಕರಣಗಳ ಖರೀದಿ ಮತ್ತು ವಿವಿಧ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾನಿಲಯವು ಮುಂಬರುವ ವರ್ಷಗಳಲ್ಲಿ ಸರಕಾರದ ಆರ್ಥಿಕ ಬೆಂಬಲವನ್ನು ಬಳಸಿಕೊಂಡು ಉತ್ಕೃಷ್ಟತೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಇದರಿಂದಾಗಿ ಉನ್ನತ ಶಿಕ್ಷಣಕ್ಕೆ ದಾಖಲಾತಿ ಹೆಚ್ಚಳ, ಸಾಮಾಜಿಕ ನ್ಯಾಯ, ಅತ್ಯಾಧುನಿಕ ಸಂಶೋಧನೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಡಾ. ಎಸ್. ಎಂ ಜಯಕರ ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ದೇಶಕ್ಕೆ ಮಾತ್ರ ಸೀಮಿತವಾಗದೆ ವಿಶ್ವದರ್ಜೆಯ ಮಾನ್ಯತೆಯನ್ನು ಪಡೆದಿದೆ. ಈ ಅನುದಾನದ ಮೂಲಕ ವಿವಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪೂರಕವಾಗಲಿದೆ. ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಸಂಶೋಧನೆಗೆ ಪೂರಕ ವಾತವರಣ ನಿರ್ಮಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿವಿಯ ಕುಲಸಚಿವ ಶೇಕ್ ಲತೀಫ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News