ದರ್ಶನ್, ಸಹಚರರಿಂದ 70 ಲಕ್ಷ ರೂ. ಜಪ್ತಿ : ಐಟಿ, ಇನ್‍ಸ್ಟಾಗ್ರಾಂಗೆ ಪತ್ರ ಬರೆದ ಪೊಲೀಸರು
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ಆರೋಪಿಗಳಿಂದ 70 ಲಕ್ಷ ರೂ. ಹಣವನ್ನು ಜಪ್ತಿ ಮಾಡಿರುವ ಪೊಲೀಸರು ಆದಾಯ ತೆರಿಗೆ(ಐಟಿ) ಇಲಾಖೆಗೆ ಪತ್ರ ಬರೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿರುವುದಾಗಿ ವರದಿಯಾಗಿದೆ.
ಪ್ರಕರಣದಲ್ಲಿ ಪಾರಾಗಲು ಸಹ ಆರೋಪಿಗಳಿಗೆ ನೀಡಲಾಗಿದ್ದ 70 ಲಕ್ಷ ರೂ.ಗಳನ್ನು ನಗರದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ನಗದು ಪತ್ತೆಯಾಗಿದ್ದರಿಂದ ಐಟಿಗೆ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.
ಜೂ.8ರಂದು ರೇಣುಕಾಸ್ವಾಮಿ ಕೊಲೆ ಬಳಿಕ ರಾಘವೇಂದ್ರ ಮತ್ತು ತಂಡದೊಂದಿಗೆ ನಟ ದರ್ಶನ್ 30 ಲಕ್ಷ ರೂಪಾಯಿಯ ಡೀಲ್ ಮಾಡಿಕೊಂಡಿದ್ದರು. ನಂತರ ಹೆಚ್ಚುವರಿಯಾಗಿ ಪರಿಚಯಸ್ಥ ಮೋಹನ್ ರಾಜ್ ಎಂಬುವರಿಂದ 40 ಲಕ್ಷ ರೂ. ಪಡೆದಿದ್ದರು. ಹೀಗೆ, ಪ್ರಕರಣವನ್ನು ಮರೆಮಾಚಲು ಯತ್ನಿಸಿದ್ದರು ಎಂಬುದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದರು.
ಆರೋಪಿಗಳಿಂದ 70 ಲಕ್ಷ ರೂ. ಹಣವನ್ನು ಜಪ್ತಿ ಮಾಡಿಕೊಂಡ ಬಳಿಕ ಇದೀಗ ಐಟಿ ಇಲಾಖೆಗೆ ಪತ್ರ ಬರೆದು ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಪ್ರಕಾರ, ಓರ್ವ ವ್ಯಕ್ತಿ 10 ಲಕ್ಷ ರೂ.ಗಿಂತ ಹೆಚ್ಚು ನಗದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. 10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟುಕೊಂಡರೆ ಅದಕ್ಕೆ ಸೂಕ್ತ ಪುರಾವೆ ಒದಗಿಸಬೇಕು. ದಾಖಲಾತಿ ನೀಡದಿದ್ದರೆ ಅಥವಾ ಹಣದ ಮೂಲದ ಬಗ್ಗೆ ಸ್ಪಷ್ಟವಾಗಿ ತಿಳಿಸದಿದ್ದರೆ ತೆರಿಗೆ ನಿಯಮ ಉಲ್ಲಂಘನೆಯಾಗುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ನಿಗದಿತ ದಂಡ ಪಾವತಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಗೆ ದರ್ಶನ್ ನೀಡಿದ್ದ 30 ಲಕ್ಷ ರೂ. ಹಾಗೂ ಮೋಹನ್ ರಾಜ್ ಎಂಬಾತನಿಂದ ದರ್ಶನ್ ಪಡೆದಿದ್ದ 40 ಲಕ್ಷ ರೂ. ಹಣದ ನೈಜ ಮೂಲ ತೋರಿಸದಿದ್ದರೆ ತೆರಿಗೆ ಜೊತೆಗೆ ದಂಡ ಕಟ್ಟಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಡೇಟಾ ರಿಟ್ರೀವ್‍ಗಾಗಿ ಇನ್‍ಸ್ಟಾಗ್ರಾಂಗೆ ಪತ್ರ..!
ಮೃತ ರೇಣುಕಾಸ್ವಾಮಿಯ ಮೊಬೈಲ್ ನಾಶವಾಗಿದ್ದು, ಆತ ಬಳಸುತ್ತಿದ್ದ ಸಿಮ್ ಸರ್ವೀಸ್ ಪ್ರೊವೈಡರ್ ಗಳಿಂದ ಇನ್ನಷ್ಟೇ ಮಾಹಿತಿ ಪಡೆಯಬೇಕಿದೆ. ಮತ್ತೊಂದೆಡೆ, ಆತನ ಇನ್‍ಸ್ಟಾಗ್ರಾಂ ಐಡಿಯಿಂದ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿರುವ ಚಾಟ್ ಡೇಟಾವನ್ನು ರಿಟ್ರೀವ್ ಮಾಡಬೇಕಿದೆ. ಹಾಗಾಗಿ, ಇನ್‍ಸ್ಟಾಗ್ರಾಂಗೆ ಪತ್ರ ಬರೆದ ಪೊಲೀಸರು, ರೇಣುಕಾಸ್ವಾಮಿ ಬಳಸುತ್ತಿದ್ದ ಇನ್‍ಸ್ಟಾಗ್ರಾಂನ ಸಂದೇಶದ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.