ಮಾನವೀಯ ಮೌಲ್ಯ ತುಂಬಿಕೊಂಡರೆ ಮಾತ್ರ ನಿಜವಾದ ಮನುಷ್ಯ : ಸುಬ್ಬು ಹೊಲೆಯಾರ್

Update: 2024-11-03 14:14 GMT

ಬೆಂಗಳೂರು : ಜಾತಿ, ಮತ, ಭಾಷೆ, ಸಂಸ್ಕೃತಿಗಿಂತಲೂ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು, ಅದನ್ನು ಹೃದಯದಲ್ಲಿ ತುಂಬಿಕೊಂಡರೆ ಆತ ನಿಜವಾದ ಮನುಷ್ಯನಾಗುವನು ಎಂದು ಸಾಹಿತಿ ಸುಬ್ಬು ಹೊಲೆಯಾರ್ ಹೇಳಿದ್ದಾರೆ.

ರವಿವಾರ ಇಲ್ಲಿನ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದ ಅಧ್ಯಕ್ಷ ಸಾಹಿತಿ ಹಾಗೂ ಶೇಷಾದ್ರಿಪುರಂ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್. ರಾಮಲಿಂಗೇಶ್ವರ(ಸಿಸಿರಾ)ರ ಕನ್ನಡ ಸೇವೆಗೆ ಸರಕಾರ ಸಂಘಸಂಸ್ಥೆಗಳು ಜಾತ್ಯಾತೀತ ವ್ಯಕ್ತಿತ್ವದಿಂದ ಗುರುತಿಸಿ ಗೌರವಿಸಬೇಕಿದೆ. ಅವರ ಆದರ್ಶಗಳು ಇಂದಿನ ಯುವಕರಿಗೆ ಆದರ್ಶ. ಅವರಲ್ಲಿ ಒಬ್ಬ ಗಾಂಧಿ, ಬಸವಣ್ಣ, ವಿವೇಕಾನಂದ ಇದ್ದಾರೆ. ಅಂಬೇಡ್ಕರ್ ಚಿಂತನೆಯನ್ನೂ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರು.

ಸಾಹಿತಿ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ಮಾತನಾಡಿ, ಪರಭಾಷ, ಪರದೇಶದ ಭಾಷಿಕರು ಕರ್ನಾಟಕಕ್ಕೆ ಜೀವನೋಪಾಯಕ್ಕಾಗಿ ಬಂದು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ನಮ್ಮನ್ನೇ ಪರದೇಶಿಗಳಾಗಿಸುತ್ತಿದ್ದಾರೆ. ಇವುಗಳಿಗೆಲ್ಲಾ ಕಡಿವಾಣ ಹಾಕಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ಹಾಗೂ ಸಿ.ಹೇಮಾವತಿ ದಂಪತಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ.ಆರೂಢ ಭಾರತೀ ಸ್ವಾಮೀಜಿ, ವಿಜಯಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾದಿರಾಜ್, ಧಾರವಾಡದ ಚೇತನ ಫೌಂಡೇಶನ್‍ನ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಜಿ.ಶಿವಣ್ಣ, ಕವಯಿತ್ರಿ ಆಶಾಶಿವು ಮತ್ತಿತರರು ಉಪಸ್ಥಿತರಿದ್ದರು.

Full View


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News