ರಸ್ತೆ ವಿಸ್ತರಣೆಗೆ ಅರಮನೆ ಮೈದಾನದ ಖಾಲಿ ಜಾಗ ಬಿಟ್ಟುಕೊಡುವ ಮೂಲಕ ಮಹಾರಾಜರು ಔದಾರ್ಯ ಮೆರೆಯಲಿ : ಎಎಪಿ ಆಗ್ರಹ
ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಮಹಾರಾಜ ಯದುವೀರ್ ಒಡೆಯರ್ ಮೈದಾನದ ಖಾಲಿ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ನಗರದ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮಹಾರಾಜರು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ ರಸ್ತೆ ಅಗಲೀಕರಣಕ್ಕೆ ನೆರವಾಗುವ ಮೂಲಕ ಜನಾನುರಾಗಿಗಳಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮೈಸೂರು ರಾಜ್ಯವನ್ನು ಆಳುತ್ತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ತಮ್ಮಲ್ಲಿರುವ ಎಲ್ಲ ಒಡವೆಗಳನ್ನು ಅಡವಿಟ್ಟು ಹಳೆ ಮೈಸೂರು ಭಾಗದ ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟರು. ಆದರೆ ಈಗ ಇರುವ ಮಹಾರಾಜರು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಪರಿಹಾರವಾಗಿ ಸಾರ್ವಜನಿಕರಿಂದಲೇ ಹಣ ಪಡೆಯುತ್ತಿದ್ದಾರೆ. ಮೇ 17ರ ಒಳಗೆ ಟಿಡಿಆರ್ ನೀಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸುವಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರವನ್ನು ತಂದೊಡ್ಡಿದ್ದಾರೆ. ಸರ್ಕಾರ ಅರಮನೆ ಮೈದಾನಕ್ಕೆ ಕೌಂಪೌಂಡ್ ಹಾಕಿದ್ದು, ಇನ್ನೂ ಪರಿಹಾರವನ್ನು ನೀಡಲಿಲ್ಲ ಎಂಬ ಅಂಶವನ್ನು ಸೇರಿಸಿದ್ದಾರೆ. ಇದು ಚುನಾವಣೆಯಲ್ಲಿ ನಿಂತಿರುವ ಮಹಾರಾಜರಿಗೆ ಶೋಭೆಯಲ್ಲ. ಈ ಕುರಿತು ಜನರು ಮತದಾನದ ದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆಯನ್ನು ನೀಡಿದರು.
ಮಹಾರಾಜರ ಆಸ್ತಿಗೆ ನಾಲ್ಕು ಪಟ್ಟು ಹೆಚ್ಚು ಮೌಲ್ಯವನ್ನು ಕೊಡುವುದಾದರೆ ರಸ್ತೆ ಅಗಲೀಕರಣವಾಗದೆ ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಮಹಾರಾಜರು ಸಂವೇದನೆಯಿಂದ ವರ್ತಿಸಬೇಕು. ಪ್ರಜೆಗಳ ಹಿತದೃಷ್ಟಿಯಿಂದ ಸರ್ಕಾರದಿಂದ ಒಂದು ರೂಪಾಯಿಯನ್ನು ಪಡೆಯದೆ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡುವ ಮೂಲಕ ಸ್ಫೂರ್ತಿಯಾಗಬೇಕು ಎಂದರು.
ಮೈದಾನದ ಖಾಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲು ಮೈಸೂರು ರಾಜ ವಂಶಸ್ಥರಿಗೆ ಸುಮಾರು 1,400 ಕೋಟಿ ರೂ. ಮೌಲ್ಯದಷ್ಟು ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ನೀಡಲು ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರದ ನಡೆಯು ಮಹಾರಾಜರಿಗೆ ಒಂದು ನ್ಯಾಯ, ಪ್ರಜೆಗಳಿಗೆ ಒಂದು ನ್ಯಾಯ ಎಂಬ ಧೋರಣೆಯನ್ನು ಅನುಸರಿಸಿದಂತಾಗಲಿದೆ. ಈ ಕೂಡಲೇ ರಾಜ್ಯ ಸರ್ಕಾರ ಇಷ್ಟೊಂದು ಬೃಹತ್ ಮೊತ್ತವನ್ನು ನೀಡುವ ನಿರ್ಧಾರವನ್ನು ಕೈ ಬಿಟ್ಟು ಮಾನ್ಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ತೆರಿಗೆದಾರರ ಹಣವನ್ನು ರಾಜಮನೆತನಕ್ಕೆ ಪೋಲಾಗುವುದನ್ನು ತಪ್ಪಿಸಬೇಕು, ಎಂದು ಜಗದೀಶ್ ವಿ. ಸದಂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪಕ್ಷದ ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ದರ್ಶನ್ ಜೈನ್ ಮಾತನಾಡುತ್ತಾ ಕೇವಲ 400 ಮೀ. ರಸ್ತೆ ಅಗಲೀಕರಣಕ್ಕೆ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ನಾಲ್ಕು ಪಟ್ಟು ಮೌಲ್ಯವನ್ನು ಹೆಚ್ಚಿಸಿ, ಸುಮಾರು 1,400 ಕೋಟಿ ರೂ. ವನ್ನು ರಾಜ್ಯ ಸರ್ಕಾರ ಮಹಾರಾಜರಿಗೆ ನೀಡಲು ಒಪ್ಪಿಕೊಂಡಿದೆ. ಬಿಡಿಎ ಬಡವಾಣೆಗಳ ನಿರ್ಮಾಣಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಸಾವಿರಾರು ಎಕರೆ ಭೂಮಿಗೆ ಇದೇ ರೀತಿ ಬರಪೂರ ಪರಿಹಾರ ನೀಡಲಾಗಿದೆಯೇ? ಸಾಕಷ್ಟು ಭೂಮಾಲೀಕರು ಬೀದಿಗೆ ಬಿದ್ದಿದ್ದಾರೆ. ಅವರ ನೆರವಿಗೆ ಈ ಪರಿ ತುರ್ತಾಗಿ ಧಾವಿಸಿದೆಯೇ? ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಸಂಬಂಧಿಸಿ ಅಗತ್ಯವಿರುವ ಸುಮಾರು 2.3 ಸಾವಿರ ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಪ್ರತಿಯಾಗಿ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಮುಂದಾಗುತ್ತಿಲ್ಲವೇಕೆ? ಅರ್ಕಾವತಿ, ಕೆಂಪೇಗೌಡ, ಶಿವರಾಮಕಾರಂತ ಮತ್ತಿತರ ಬಡಾವಣೆಗಳ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿ ಕಳೆದುಕೊಂಡವರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿರುವುದು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.