ಅತ್ತಿಬೆಲೆ, ಸರ್ಜಾಪುರದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ: ಸಚಿವ ರಾಮಲಿಂಗಾರೆಡ್ಡಿ

Update: 2023-12-23 16:57 GMT

ಬೆಂಗಳೂರು: ಅತ್ತಿಬೆಲೆ ಹಾಗೂ ಸರ್ಜಾಪುರದಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶನಿವಾರ ಮಾದಾವರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾರ್ಗ ಸಂಖ್ಯೆ ನೈಸ್-10ಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ನಾನಾ ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪೆÇ್ರೀ ಗೇಟ್‍ಗೆ ಬೆಳಗ್ಗೆ ಮತ್ತು ಸಂಜೆ ಒಟ್ಟು 65 ಸುತ್ತುವಳಿ (ಟ್ರಿಪ್)ಗಳನ್ನು ನೈಸ್ ರಸ್ತೆ ಮಾರ್ಗವಾಗಿ ಬಿಎಂಟಿಸಿ ಬಸ್ ಕಾರ್ಯಾಚರಣೆಯಲ್ಲಿರುತ್ತದೆ ಎಂದರು.

ತುಮಕೂರು ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆ ಜಂಕ್ಷನ್‍ನಿಂದ ನಾನಾ ಸಾರಿಗೆಗಳ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಡಿ.23 ರಿಂದ ಜಾರಿಗೆ ಬರುವಂತೆ ಮಾದಾವರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾರ್ಗ ಸಂಖ್ಯೆ: ನೈಸ್-10ರಲ್ಲಿ 21 ಅನುಸೂಚಿ(μÉಡ್ಯೂಲ್)ಗಳನ್ನು ಪ್ರತಿ 10 ನಿಮಿಷಕ್ಕೊಂದರಂತೆ ಒಟ್ಟು 147 ಟ್ರಿಪ್ ಕಾರ್ಯಾಚರಣೆಗೊಳಿಸಲಾಗುವುದು. ಸಾರಿಗೆಗಳಲ್ಲಿ ಮಾಗಡಿ ರಸ್ತೆ ನೈಸ್ ಜಂಕ್ಷನ್, ಮೈಸೂರು ರಸ್ತೆ ನೈಸ್ ಜಂಕ್ಷನ್, ಕನಕಪುರ ರಸ್ತೆ ನೈಸ್ ಜಂಕ್ಷನ್ ಹಾಗೂ ಬನ್ನೇರುಘಟ್ಟ ರಸ್ತೆ ನೈಸ್ ಜಂಕ್ಷನ್‍ಗಳಲ್ಲಿ ನಿಲುಗಡೆ ಇದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ದರ:

ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ದರ 35 ರೂ. ಹಾಗೂ ಟೋಲ್ ಬಳಕೆದಾರರ ಶುಲ್ಕ 25ರೂ. ಒಟ್ಟು 60ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳಿಗೆ ನೈಸ್ ಸಾರಿಗೆ ಸೌಲಭ್ಯವು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಬಿಎಂಟಿಸಿ ಸಂಸ್ಥೆ ತಿಳಿಸಿದೆ.

ವಾಯು ವಜ್ರ ಸಾರಿಗೆ: 

ನಗರದ ನಾನಾ ಪ್ರಮುಖ ಸ್ಥಳಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಸ್ತುತ 17 ಮಾರ್ಗಗಳಲ್ಲಿ, 132 ಅನುಸೂಚಿಗಳಿಂದ ಒಟ್ಟು 912 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದು, ಇದರ ಜತೆಗೆ ತುಮಕೂರು ರಸ್ತೆ ಕಡೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾದಾವರ ನೈಸ್ ರಸ್ತೆ ಜಂಕ್ಷನ್ (ಬಿಐಇಸಿ)ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ: ಕೆಐಎ-18 ರಲ್ಲಿ 5 ಅನುಸೂಚಿಗಳಿಂದ 27 ಸುತ್ತುವಳಿ ಕಾರ್ಯಾಚರಣೆಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಮೆಟ್ರೋ ಫೀಡರ್ ಸಾರಿಗೆ:

ಬೆಂಗಳೂರು ನಗರದಲ್ಲಿ 73.81 ಕಿ.ಮೀ. ಉದ್ದದ ಮೆಟ್ರೋ ಮಾರ್ಗವಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ನಾನಾ ಮೆಟ್ರೋ ನಿಲ್ದಾಣಗಳಿಂದ ಪ್ರಸ್ತುತ 38 ಮಾರ್ಗಗಳಲ್ಲಿ 141 ಅನುಸೂಚಿಗಳಿಂದ ಒಟ್ಟು 2,264 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಜಾಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ದಾಸರಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಮಾರ್ಗ ಸಂಖ್ಯೆ: ಎಂಎಫ್-25ಎ, ಎಂಎಫ್-29, ಎಂಎಫ್-30, ಎಂಎಫ್-31 ಒಟ್ಟು 4 ಮಾರ್ಗಗಳಲ್ಲಿ 7 ಅನುಸೂಚಿಗಳಿಂದ 104 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಸಾಮಾನ್ಯ ಸಾರಿಗೆ:

ಚಿಕ್ಕಬಾಣಾವರದಿಂದ ದಾಸರಹಳ್ಳಿ 8ನೇ ಮೈಲಿ, ಅಂದ್ರಹಳ್ಳಿ, ಹೇರೋಹಳ್ಳಿ ಕ್ರಾಸ್, ಸುಂಕದಕಟ್ಟೆ ಮಾರ್ಗವಾಗಿ ಸುಮನಹಳ್ಳಿ ಜಂಕ್ಷನ್‍ಗೆ ಮಾರ್ಗ ಸಂಖ್ಯೆ: ಬಿಸಿ-8 ರಲ್ಲಿ 6 ಅನುಸೂಚಿಗಳಿಂದ 56 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸುವ 9ಮೀ ಉದ್ದದ ಮಿನಿ ಬಸ್ಸುಗಳನ್ನು ವಿಶೇಷ ರೀತಿಯಲ್ಲಿ ಬ್ರ್ಯಾಂಡಿಂಗ್ ಮಾಡಲಾಗುವುದು. ಎನ್-ಸಿಎಪಿ ಯೋಜನೆಯಡಿಯಲ್ಲಿನ 9.0 ಮೀ. ಉದ್ದದ 120 ಹವಾ ನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್‍ಗಳನ್ನು ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆಗೊಳಿಸಲಾಗುವುದು. ಎಪ್ರಿಲ್-2024ರ ಅಂತ್ಯದೊಳಗೆ ನಗರದಲ್ಲಿ ಸಂಸ್ಥೆಯಿಂದ ಪ್ರಸ್ತುತ ಆಚರಣೆಗೊಳಿಸುತ್ತಿರುವ 121 ಮೆಟ್ರೋ ಸಾರಿಗೆಗಳ ಜತೆಗೆ 179 ಸಾರಿಗೆಗಳನ್ನು ಹೆಚ್ಚಿಸಿ, ಒಟ್ಟು 300ಮೆಟ್ರೋ ಫೀಡರ್ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗುವುದು ಎಂದು ಬಿಎಂಟಿಸಿ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News