ವಿಡಿಯೋ ಜರ್ನಲಿಸ್ಟ್ ಗಳಿಗೆ ಆರೋಗ್ಯ ವಿಮೆ ಒದಗಿಸಲು ಕ್ರಮ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು : ‘ಪತ್ರಿಕೋದ್ಯಮ ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡಬೇಕಾದ ವೃತ್ತಿಯಾಗಿರುವುದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದು ಮುಖ್ಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಪ್ರಸ್‍ಕ್ಲಬ್‍ನಲ್ಲಿ ಕರ್ನಾಟಕ ವಿಡಿಯೋ ಜರ್ನಲಿಸ್ಟ್ ಅಸೋಶಿಯೇಷನ್ ಮತ್ತು ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಸಹಯೋಗದೊಂದಿಗೆ, ಅಪೊಲೋ ಆಸ್ಪತ್ರೆ, ನಿಯೋನಿಕಾ ಐ ಕೇರ್ ಚಾರಿಟೇಬರ್ ಟ್ರಸ್ಟ್ ಮತ್ತು ನಾಯಕ್ ಹಿಯರಿಂಗ್ ಕೇರ್ ಕ್ಲಿನಿಕ್‍ನ ನುರಿತ ವೈದ್ಯರಿಂದ ನಡೆದ ಪತ್ರಕರ್ತರು ಮತ್ತವರ ಕುಟುಂಬದ ಸದಸ್ಯರ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆಧುನಿಕತೆ ಮತ್ತು ತಂತ್ರಜ್ಞಾನ ಮಾಧ್ಯಮಗಳಲ್ಲಿ ಅಳವಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಜರ್ನಲಿಸ್ಟ್ ಅವರ ಕೆಲಸ ಇದೀಗ ಮತ್ತಷ್ಟು ಕಠಿಣವಾಗಿದೆ. ಅವರು ವಿಡಿಯೋ ಚಿತ್ರೀಕರಣದ ಜತೆ ಜತೆಯಲ್ಲಿಯೇ ಪತ್ರಕರ್ತರೂ ಆಗಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರಲ್ಲಿ ಕಾರ್ಯದೊತ್ತಡ ಹೆಚ್ಚುತ್ತಿರುವುದರಿಂದ ನಿರಂತರವಾಗಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದು ಅವರು ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಡಿಯೋ ಜರ್ನಲಿಸ್ಟ್ ಅಸೋಶಿಯೇಷನ್ ನಡೆಸುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಆಯೋಜಿಸಿರುವುದು ಶ್ಲಾಘನೀಯ ಎಂದದಿನೇಶ್ ಗುಂಡೂರಾವ್, ಇದನ್ನು ನಿರಂತರವಾಗಿ ಮೂರು ಅಥವಾ ಆರು ತಿಂಗಳಿಗೊಮ್ಮೆ ನಡೆಸುತ್ತಿರಬೇಕು ಎಂದು ಪತ್ರಕರ್ತರಿಗೆ ಮನವಿ ಮಾಡಿದರು.
ಆರೋಗ್ಯ ವಿಮೆ: ವಿಡಿಯೋ ಜರ್ನಲಿಸ್ಟ್ ಗಳಿಗೆ ಮುಖ್ಯವಾಗಿ ಬೇಕಾಗಿರುವುದು ʼಹೆಲ್ತ್ ಇನ್ಸೂರೆಸ್ಸ್ʼ. ಇದನ್ನು ಸರಕಾರದ ವತಿಯಿಂದ ನೀಡಲು ಸಿಎಂ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗೆಯೇ ಸರಕಾರದ ವತಿಯಿಂದ ಕ್ರಿಟಿಕಲ್ ಇಲ್ನೆಸ್ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಉಚಿತವಾಗಿ ತಪಾಸಣಾ ಶಿಬಿರವನ್ನು ಪ್ರೆಸ್‍ಕ್ಲಬ್‍ನಲ್ಲಿ ನಡೆಸಲು ಸೂಚಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪಾಲ್ಗೊಂಡಿದ್ದರು.