ಶಿಕ್ಷಣ, ಆರೋಗ್ಯ ಗ್ಯಾರಂಟಿ ಪಟ್ಟಿಗೆ ಸೇರಿಸಿ : ಪ್ರೊ.ಬರಗೂರು ರಾಮಚಂದ್ರಪ್ಪ

Update: 2024-12-16 18:47 GMT

ಬೆಂಗಳೂರು : ಜನಪರ ಮತ್ತು ಪ್ರಜಾಸತ್ತಾತ್ಮಕ ಸರಕಾರವು ಶಿಕ್ಷಣ ಮತ್ತು ಆರೋಗ್ಯವನ್ನು ಗ್ಯಾರಂಟಿ ಪಟ್ಟಿಗಳಿಗೆ ಸೇರಿಸಬೇಕು ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಗಾಂಧಿ ಭವನದ ಕಸ್ತೂರಬಾ ಸಭಾಂಗಣದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಹಿಳೆಯರ ಆಗ್ರಹ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಶಿಕ್ಷಣ ಮತ್ತು ಆರೋಗ್ಯವನ್ನು ಸಮಾಜ ಸೇವೆಯ ರೀತಿಯಲ್ಲಿ ನೋಡಲಾಗುತ್ತಿತ್ತು. ಆದರೆ ಆ ಕ್ಷೇತ್ರಗಳನ್ನು ಇತ್ತೀಚಿಗೆ ಬಂಡವಾಳಶಾಹಿ ಆರ್ಥಿಕ ನೀತಿಯ ದೃಷ್ಟಿಯಿಂದ ಕಾಣುತ್ತಿದ್ದು, ಇವೆರಡು ಕ್ಷೇತ್ರಗಳು ಉದ್ಯಮವಾಗಿ ಪರಿಣಮಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು, ಮಹಿಳಾ ವೈದ್ಯರನ್ನು ನೇಮಿಸಬೇಕು ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಗುಣಮಟ್ಟದ ಔಷದಿ ಮತ್ತು ಚಿಕಿತ್ಸೆಯನ್ನು ಒದಗಿಸಬೇಕು. ಇದರಿಂದ ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಾವನ್ನು ಕಡಿಮೆ ಮಾಡಬಹುದು. ಪುರುಷರ ಮನದಲ್ಲಿ ಸ್ತ್ರೀ ಪರವಾಗಿ ಸಂವೇದನಶೀಲತೆ, ಸ್ತ್ರೀ ಪರ ನಿಲುವು, ಸ್ತ್ರೀ ಭದ್ರತೆ ಇದ್ದಾಗ ಮಾತ್ರ ಬದುಕಿನಲ್ಲಿ ಉನ್ನತಿ ಸಾಧ್ಯ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಮನೋಚಿಕಿತ್ಸಕ ನಡಹಳ್ಳಿ ವಸಂತ್‍ರವರು ಮಾತನಾಡಿ, ಮನುಷ್ಯರಿಗಾಗಿ ಇರುವ ಮೆದುಳು ಕ್ರಿಯಾಶೀಲವಾಗಿ ಯೋಚನೆಯನ್ನು ಮಾಡಲು ಪ್ರಯತ್ನಿಸುತ್ತದೆ. ಧರ್ಮಗಳು ಬಂಡವಾಳಶಾಹಿಗಳ ಕೈಗೊಂಬೆಗಳಾಗಿವೆ. ಮಹಿಳೆಯ ಘನತೆಯೆಂದರೆ ಒಂದು ಸಮಾಧಾನದ, ಸಮಾನತೆಯ ಗೌರವದ ಬದುಕು. ಸಮಾಜ, ಮರ್ಯಾದೆ, ಮಕ್ಕಳು ಎಂಬ ಕಾರಣಗಳಿಂದಾಗಿ ಅದೆಷ್ಟೋ ಮಹಿಳೆಯರು ದಿನನಿತ್ಯ ಎದುರಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆಗಳಿಂದ ಹೊರಬರಲು ಹಿಂಜರಿಯುತ್ತಾರೆ ಎಂದು ವಿವರಿಸಿದರು.

ಎಐಎಂಎಸ್‍ಎಸ್‍ನ ರಾಷ್ಟ್ರ ಉಪಾಧ್ಯಕ್ಷ್ಯೆ ಡಾ.ಸುಧಾ ಕಾಮತ್ ಮಾತನಾಡಿ, ಖಾಸಗಿಕರಣ, ಜಾಗತಿಕರಣ, ಉದಾರಿಕರಣದಿಂದಾಗಿ ಆರೋಗ್ಯ ಕ್ಷೇತ್ರವು ಸಾರ್ವಜನಿಕ ಸೇವೆಯಾಗುವ ಬದಲು ಲಾಭದ ಉದ್ದಿಮೆಯಾಗಿದೆ. ಸರಕಾರ ಇದರ ಜವಾಬ್ದಾರಿಯನ್ನು ಕೈಬಿಟ್ಟಿದೆ. ಅದರ ಪ್ರತಿಬಿಂಬವೆ ನೂರಾರು ಬಾಣಂತಿಯರ ಸಾವುಗಳು ಇಂದು ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ವರದಿಯಾಗುತ್ತಿರುವುದು. ಇದಕ್ಕೆ ಪರಿಹಾರ ಆರೋಗ್ಯ ಕ್ಷೇತ್ರದ ಸಾಮಾಜೀಕರಣ, ಸೋವಿಯತ್ ಯುನಿಯನ್‍ನಲ್ಲಿ ಸರಕಾರವೇ ಗುಣಮಟ್ಟದ ಶಿಕ್ಷಣ-ಆರೋಗ್ಯವನ್ನು ಉಚಿತವಾಗಿ ನೀಡುತಿತ್ತು. ಅದೇ ಮಾದರಿಯನ್ನು ನಮ್ಮ ಸರಕಾಗಳು ಅಳವಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು

ಕಾರ್ಯಕ್ರಮದಲ್ಲಿ ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷೆ ಮಂಜುಳಾ ಎಂ.ಎನ್, ಗುಲ್ಬರ್ಗ ಅಧ್ಯಕ್ಷೆ ಗುಂಡಮ್ಮ, ರಾಜ್ಯ ಕಾರ್ಯದರ್ಶಿ ಶೋಭಾ ಎಸ್, ಉಪಾಧ್ಯಕ್ಷೆ ಡಾ.ಸುಧಾ ಕಾಮತ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News