ಅಪ್ರಾಪ್ತೆಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪ: ರಾಷ್ಟ್ರೀಯ ಹಾಕಿಪಟು ವಿರುದ್ಧ ಎಫ್‍ಐಆರ್ ದಾಖಲು

Update: 2024-02-06 13:43 GMT

Photo: indiatoday.in

ಬೆಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ವಂಚಿಸಿದ ಆರೋಪದಡಿ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಸದಸ್ಯ, ಅರ್ಜುನ ಪ್ರಶಸ್ತಿ ವಿಜೇತ ಆಟಗಾರರೊಬ್ಬರ ವಿರುದ್ಧ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ಹೈದರಾಬಾದ್ ಮೂಲದ ವಾಲಿಬಾಲ್ ಆಟಗಾರ್ತಿ ನೀಡಿದ ದೂರಿನನ್ವಯ ಜ್ಞಾನಭಾರತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸಕ್ತ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ಯುವತಿ 2016-17ನೇ ಸಾಲಿನಲ್ಲಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಿಲೆನ್ಸ್‍ನಿಂದ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿ ಸ್ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ದೂರುದಾರಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹಾಕಿ ಆಟಗಾರನ ಪರಿಚಯವಾಗಿತ್ತು. 17 ವರ್ಷದವಳಾಗಿದ್ದ ದೂರುದಾರಳನ್ನು ಪ್ರೀತಿಸುವುದಾಗಿ ನಂಬಿಸಿದ್ದ ಹಾಕಿ ಆಟಗಾರ, ‘ನಿನ್ನ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ. ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ' ಎಂದು ನಂಬಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಾಕಿ ಆಟಗಾರ 2019ರಲ್ಲಿ ನೈಟ್ ಡಿನ್ನರ್ ನೆಪದಲ್ಲಿ ಜಯನಗರಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದನು ಎನ್ನುವ ಆರೋಪವನ್ನು ದೂರಿನಲ್ಲಿ ಸಂತ್ರಸ್ತೆ ಮಾಡಿದ್ದಾರೆ.

ಇದಾದ ಬಳಿಕವೂ ನಿರಂತರ ಐದು ವರ್ಷಗಳ ಕಾಲ ಮದುವೆಯಾಗುವುದಾಗಿ ನಂಬಿಸಿ ಆಗಾಗ ದೈಹಿಕ ಸಂಪರ್ಕ ಹೊಂದಿದ್ದರು. ಆದರೆ ಈಗ ಒಂದು ವರ್ಷಗಳ ಹಿಂದೆ ದೂರುದಾರಳ ತಂದೆ ಮೃತಪಟ್ಟಾಗ ಮನೆ ಬಳಿ ಬಂದು ಸಾಂತ್ವನ ಹೇಳಿ ಹೋಗಿದ್ದ ಹಾಕಿ ಆಟಗಾರ ನಂತರ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಯು ಮೂಲತಃ ಹಿಮಾಚಲ ಪ್ರದೇಶದ ಹಾಕಿ ಆಟಗಾರ, ಪ್ರಸಕ್ತದಲ್ಲಿ ಭಾರತ ಹಾಕಿ ತಂಡದ ಡಿಫೆಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ಆಟಗಾರ, 2022ರ ಬರ್ಮಿಂಗ್ ಹ್ಯಾಂ - ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ, 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯ. ಕಂಚಿನ ಸಾಧನೆ ಬಳಿಕ ಈ ಆಟಗಾರನಿಗೆ 1 ಕೋಟಿ ಬಹುಮಾನವನ್ನ ಹಿಮಾಚಲ ಪ್ರದೇಶ ಸರಕಾರ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ಈ ಆಟಗಾರ ಭಾಜನರಾಗಿದ್ದರು ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News