ನೀತಿ ಸಂಹಿತೆ ಉಲ್ಲಂಘನೆ ಆರೋಪ | ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಬಿಜೆಪಿ ದೂರು

Update: 2024-04-18 12:43 GMT

ಬೆಂಗಳೂರು: ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮತ್ತು ಅವರ ಸಹಚರರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮತದಾರರ ಆಧಾರ್ ಕಾರ್ಡ್ ಪಡೆದು 1 ಲಕ್ಷ ರೂ, ಬಾಂಡ್ ನೀಡುವುದಾಗಿ ಆಮಿಷ ಒಡ್ಡುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಏಜೆಂಟ್ ಆಗಿರುವ ಗಜೇಂದ್ರ ಎಸ್ ಅವರು ದೂರು ನೀಡಿದ್ದು, ಕಾಂಗ್ರೆಸ್ ನ ಈ ಕೃತ್ಯ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

" ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು, ಮತದಾರರ ಮೇಲೆ ಪ್ರಭಾವ ಬೀರಲು ಅವರ ಆಧಾರ್ ಕಾರ್ಡ್ ಗಳನ್ನು ಪಡೆದುಕೊಂಡು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಚುನಾವಣೆ ಆದ ನಂತರ 1 ಲಕ್ಷ ರೂ, ಬಾಂಡ್ ಒದಗಿಸುವುದಾಗಿ ಆಮಿಷ ಒಡ್ಡುತ್ತಿರುವ ಕ್ರಮ ಮಾದರಿ ನೀತಿ ಸಂಹಿತೆ IPC 1860 ಮತ್ತು ಜನ ಪ್ರತಿನಿಧಿ ಕಾಯ್ದೆ 1951 ಅನ್ವಯ ಗಂಭೀರ ಅಪರಾಧವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಮತದಾನಕ್ಕೂ ಮುಂಚೆ ಈ ರೀತಿಯ ಸಹಿ ಮಾಡಿದ ಗ್ಯಾರಂಟಿ ಕೊಡುಗೆಗಳು, ಮತಕ್ಕಾಗಿ ಲಂಚ ವೆಂದು ಪರಿಗಣಿಸಿ, ಸಂಬಂಧಿಸಿದ ಕಾಂಗ್ರೆಸ್ ಅಭ್ಯರ್ಥಿ, ಏಜೆಂಟರು ಮತ್ತು ಸಹಚರರ ವಿರುದ್ಧ FIR ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News