ಬೆಂಗಳೂರು ಜಿಲ್ಲಾ ಸಂಯುಕ್ತ ಖಾಝಿಯಾಗಿ ಎ.ಪಿ.ಉಸ್ತಾದ್ ಹೊಣೆಗಾರಿಕೆ ಸ್ವೀಕಾರ
ಬೆಂಗಳೂರು : ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳ ಸಹಿತ ಹಲವಾರು ಮೊಹಲ್ಲಾಗಳ ಖಾಝಿಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ (ಎ.ಪಿ.ಉಸ್ತಾದ್) ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಜವಾಬ್ದಾರಿ ವಹಿಸಿಕೊಂಡರು.
ನಗರದ ಟ್ಯಾನರಿ ರಸ್ತೆಯಲ್ಲಿರುವ ಕೆ.ಜಿ.ಹಳ್ಳಿ ಸಿಎಂಎ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಸಮಸ್ತ ಕೇಂದ್ರ ಮುಶಾವರ ಸದಸ್ಯ, ಉಳ್ಳಾಲ ಸಹಿತ 150ಕ್ಕೂ ಮಿಕ್ಕ ಮೊಹಲ್ಲಾಗಳ ಖಾಝಿಯಾಗಿದ್ದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಎ.ಪಿ.ಉಸ್ತಾದ್, ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಜವಾಬ್ದಾರಿ ವಹಿಸಿಕೊಂಡರು.
ಇದೇ ಸಂದರ್ಭದಲ್ಲಿ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದ ಬಗ್ಗೆ ಖೇದ ವ್ಯಕ್ತಪಡಿಸಿದ ಎ.ಪಿ.ಉಸ್ತಾದ್, ವಯನಾಡಿನ ದುರಂತದ ನಷ್ಟವು ಊಹಿಸಲು ಅಸಾಧ್ಯವಾಗಿದೆ. ಅಲ್ಲಿನ ನಿರಾಶ್ರಿತರು ಸಂಕಷ್ಟದಲ್ಲಿದ್ದು, ಅವರಿಗೆ ನಮ್ಮ ಕೈಲಾಗುವ ಸಹಾಯ ಹಸ್ತ ಚಾಚಲು ಪ್ರತಿಯೊಬ್ಬರೂ ಮುಂದೆ ಬರುವಂತೆ ಕರೆ ನೀಡಿದರು.
ವಯನಾಡಿನಲ್ಲಿ ಪ್ರವಾಹದಿಂದಾಗಿ 300ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವಾರು ಜನರಿಗೆ ಗಾಯಗಳಾಗಿವೆ. ಅಲ್ಲಿರುವ ಸಂತ್ರಸ್ತರಿಗೆ ಮೂಲಸೌಕರ್ಯ ಒದಗಿಸಲು ಬೇಕಾದ ಸಹಾಯವನ್ನು ಎಲ್ಲ ರಾಜ್ಯದ ಜನರು ಮಾಡಲು ಸಹಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ಎ.ಪಿ.ಉಸ್ತಾದ್ ಹೇಳಿದರು.
ಜನರ ಸಂಬಂಧ ಆ ರೀತಿಯಾಗಿರಬೇಕು. ಜಾತಿ, ಬೇಧ ನೋಡದೇ ಪ್ರವಾಹದಲ್ಲಿ ಮರಣ ಹೊಂದಿರುವ ಕುಟುಂಬಗಳಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಅವರಿಗೆ ಬೇಕಾದ ಎಲ್ಲ ಸಹಾಯ, ಸಲಕರಣೆಗಳಿಗಾಗಿ ಎಲ್ಲ ರಾಜ್ಯದವರು ಮುಂದಾಗಬೇಕು. ಸರಕಾರದ ಪರಿಹಾರ ನಿಧಿಗೂ ಸಹಾಯ ಹಸ್ತ ಚಾಚಬೇಕು ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರಮುಖರೊಂದಿಗೆ ಮಾತುಕತೆ ನಡೆಸಲಾಗಿದೆ. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಒಂದು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡುವ ಬಗ್ಗೆ ಚರ್ಚೆಯಾಗಿದೆ. ಅದು ಸಾಧ್ಯವಿದೆ ಎಂಬ ನಿರೀಕ್ಷೆಯಿದೆ. ಅದಕ್ಕೂ ಎಲ್ಲರೂ ಬೆಂಬಲವನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಎ.ಪಿ.ಉಸ್ತಾದ್ ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು, ಮೈಸೂರು, ಕೆ.ಜಿ.ಎಫ್, ಹೊಸೂರು, ರಾಮನಗರ, ತುಮಕೂರು ಮೊದಲಾದ 50ಕ್ಕೂ ಮಿಕ್ಕ ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಉದ್ಘಾಟಿಸಿದರು.
ಬಿಜಾಪುರ ಮೌಲಾನ ಸಯ್ಯದ್ ತನ್ವೀರ್ ಹಾಶ್ಮಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫಿಯಾನ್ ಮದನಿ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಶಬೀರ್ ಹಝ್ರತ್, ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಹಮ್ಮದ್ ಅಲಿ ಖಾಝಿ ಮೊದಲಾದವರು ಭಾಷಣ ಮಾಡಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸಚಿವ ಆರ್.ರೋಷನ್ ಬೇಗ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ರಾಜ್ಯ ಫಿಸಿಯೋಥೆರಪಿ ಫೆಡರೇಷನ್ ಕಾರ್ಯಕಾರಿ ಅಧ್ಯಕ್ಷ ಯು.ಟಿ.ಇಫ್ತಿಖಾರ್, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಕೆ.ಸಿ.ಎಫ್ ಅಂತರ್‍ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎಚ್.ಅಬ್ದುಲ್ ಹಮೀದ್ ಅಬುದಾಬಿ, ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸಲ್ಮಾನ್ ಅಹ್ಮದ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನಸ್ ಸಿದ್ದೀಖಿ ಸ್ವಾಗತಿಸಿದರು ಹಾಗೂ ಅಬ್ದುಲ್ ರಹ್ಮಾನ್ ಹಾಜಿ ವಂದನಾರ್ಪಣೆಗೈದರು.