ಮಹಾರಾಷ್ಟ್ರ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಕ್ಕೆ ಮನವಿ

Update: 2024-06-21 16:55 GMT

ಬೆಂಗಳೂರು : ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿರುವ ಭಾಷಾ ಅಲ್ಪಸಂಖ್ಯಾತ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮರಾಠಿ ಶಿಕ್ಷಕರನ್ನು ನೇಮಿಸಿದ್ದು, ಶೀಘ್ರವೇ ಕನ್ನಡ ಶಿಕ್ಷಕರನ್ನು ನೇಮಿಸಲು ರಾಷ್ಟ್ರಪತಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗೆ ಪತ್ರ ಬರೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ.

ಈ ಕುರಿತು ಶುಕ್ರವಾರ ಮುಖ್ಯಮಂತ್ರಿ ಅವರ ಅನುಪಸ್ಥಿತಿಯಲ್ಲಿ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಿಳಿಮಲೆ, ‘ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂಸ್ಕೃತಿ, ಪರಂಪರೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ 40 ಸಾವಿರಕ್ಕಿಂತ ಹೆಚ್ಚಿನ ಮಕ್ಕಳು ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಾರೆ. ಸುಮಾರು 300ಕ್ಕಿಂತಲು ಹೆಚ್ಚಿಗೆ ಕನ್ನಡ ಶಾಲೆಗಳಿವೆ’ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರ ಸರಕಾರ ಕನ್ನಡ ಶಾಲೆಗಳಿಗೆ ಕನ್ನಡದ ಅಧ್ಯಾಪಕರನ್ನು ನೇಮಿಸಬೇಕಿತ್ತು. ಆದರೆ ಮರಾಠಿ ಶಿಕ್ಷಕರನ್ನು ನೇಮಿಸುವ ಮೂಲಕ ಮಹಾರಾಷ್ಟ್ರ ಸರಕಾರ ಕನ್ನಡ ವಿರೋಧಿ ನಿಲುವನ್ನು ತಾಳಿದೆ. ಭಾಷಾ ಕಲಿಕೆಯ ದೃಷ್ಟಿಯಿಂದ ಇದೊಂದು ಅವೈಜ್ಞಾನಿಕ ವಿಧಾನ. ಏಕೆಂದರೆ ಇಂಡೋ ಆರ್ಯನ್ ಭಾಷಾ ಗುಂಪಿಗೆ ಸೇರಿದ ಮರಾಠಿಯ ಕಲಿಕೆ ಮತ್ತು ಕಲಿಸುವ ವಿಧಾನಗಳು ಬೇರೆ, ದ್ರಾವಿಡ ಭಾಷಾ ಗುಂಪಿಗೆ ಸೇರಿದ ಕನ್ನಡವನ್ನು ಕಲಿಸುವ ಮತ್ತು ಕಲಿಯುವ ವಿಧಾನಗಳು ಬೇರೆ, ಹೀಗಾಗಿ ಮಹಾರಾಷ್ಟ್ರ ಸರಕಾರ ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸಿರುವುದು ಭಾಷಾ ಕಲಿಕೆಯ ದೃಷ್ಟಿಯಿಂದ ಅಪ್ರಸ್ತುತ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಜರಿದ್ದರು.

ಮಹಾರಾಷ್ಟ್ರ ಸರಕಾರದೊಂದಿಗೆ ಸಿಎಂ ಚರ್ಚಿಸಬೇಕು: ‘ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕದಿಂದಾಗಿ ಭವಿಷ್ಯದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ನಿಧಾನವಾಗಿ ನಶಿಸಲಿವೆ. ಅನ್ಯ ಮಾಧ್ಯಮದ ಶಿಕ್ಷಕರು ಕನ್ನಡ ಶಾಲೆಗಳಲ್ಲಿ ಬೋಧನೆ ಮಾಡಿದರೆ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಅವರ ಅಧ್ಯಯನ ಕುಂಠಿತವಾಗುತ್ತದೆ. ಭವಿಷ್ಯದಲ್ಲಿ ಕನ್ನಡ ಡಿ.ಎಡ್ ಕಲಿತ ಅಭ್ಯರ್ಥಿಗಳಿಗೆ ನೌಕರಿ ಇಲ್ಲದಂತಾಗುತ್ತದೆ. ಜತೆಗೆ ಕನ್ನಡ ಏಳಿಗೆಗೆ ಸಂಪೂರ್ಣ ಹೊಡೆತ ಬೀಳುತ್ತದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಕರನ್ನು ನೇಮಿಸುವಂತೆ ಮಹಾರಾಷ್ಟ್ರ ಸರಕಾರದೊಂದಿಗೆ ಚರ್ಚಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News