ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ ನಡೆದಿದೆ : ವಿಜಯೇಂದ್ರ

Update: 2025-03-12 13:33 IST
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ ನಡೆದಿದೆ : ವಿಜಯೇಂದ್ರ
  • whatsapp icon

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದೆ. ಗ್ಯಾರಂಟಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಿದ್ದು, ಸಂಪೂರ್ಣವಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಅಸಾಂವಿಧಾನಿಕ ನಡೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಜನರ ತೆರಿಗೆ ಹಣದ ದುರುಪಯೋಗ ಆಗಿದೆ ಎಂದು ರಾಜ್ಯಪಾಲರಿಗೆ ಮನದಟ್ಟು ಮಾಡಲಾಗಿದೆ. ಸರಕಾರಕ್ಕೆ ತಿಳಿಹೇಳುವ ಕೆಲಸ ಮಾಡುವಂತೆ ಹಾಗೂ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದಾಗಿ ತಿಳಿಸಿದರು.

ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಲೆ ಮತ್ತು ಕಾಲೇಜುಗಳ ಉಸ್ತುವಾರಿ ಸಮಿತಿಗಳಿಗೆ ಶಿಕಾರಿಪುರ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಕೊಟ್ಟ ಹೆಸರನ್ನು ಪರಿಗಣಿಸಲು ಸೂಚಿಸಿದ್ದಾರೆ. ಇಂಥಹ ಕೆಲಸ ಬೇರೆ ಕಡೆಯೂ ನಡೆಯುತ್ತಿದೆ. ಈ ಸಂಬಂಧ ಸದನದಲ್ಲಿ ಹಕ್ಕುಚ್ಯುತಿಯನ್ನು ಮಂಡಿಸಲಿದ್ದೇವೆ. ಸಚಿವರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News