ಅನುಕಂಪದ ಆಧಾರದ ಮೇಲೆ ಅಕ್ರಮ ನೇಮಕಾತಿ : ಆರೋಗ್ಯ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಅಮಾನತು
ಬೆಂಗಳೂರು : ಅಕ್ರಮವಾಗಿ ಅನುಕಂಪದ ಆಧಾರದ ಮೇಲೆ ಸರಕಾರಿ ನೇಮಕಾತಿ ಪಡೆದಿರುತ್ತಾರೆಂಬ ಆರೋಪದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಆರ್. ವಾಣಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದು, ಸಹಾಯಕ ಆಡಳಿತಾಧಿಕಾರಿಯಾಗಿದ್ದ ಆರ್. ವಾಣಿ ಅಕ್ರಮವಾಗಿ ಅನುಕಂಪದ ಆಧಾರದ ಮೇಲೆ ಸರಕಾರಿ ನೇಮಕಾತಿ ಪಡೆದಿರುತ್ತಾರೆಂಬ ಎಂದು ಸಿ. ಆರ್. ಮಂಜುನಾಥ ಹಾಸನ, ಶಿವಣ್ಣ ಕೆ.ಎಚ್, ಮತ್ತು ಮಂಜುನಾಥ ನಿಲಸೋಗೆ ಎಂಬುವವರು ದೂರು ಸಲ್ಲಿಸಿದ್ದರು.
ತನಿಖಾ ವರದಿಯಲ್ಲಿ ಅನುಕಂಪದ ಆಧಾರದ ಮೇಲೆ ಪಡೆದಿರುವ ನೇಮಕಾತಿಯು ಕರ್ನಾಟಕ ನಾಗರೀಕ ಸೇವಾ(ಅನುಕಂಪದ ಆಧಾರಿತ ನೇಮಕಾತಿ)ನಿಯಮಗಳು 1996ರ ನಿಯಮ 4(1)(ಎ) ಮತ್ತು 4(1)(ಬಿ)ರ ಪ್ರಕಾರ ದಿವಂಗತ ನೌಕರರ ಕುಟುಂಬದ ಆದಾಯ ನಿಗದಿಪಡಿಸಿದ ಆದಾಯಕ್ಕಿಂತ ಹೆಚ್ಚಿಗೆ ಇರಬಾರದು ಎಂದು ಉಲ್ಲೇಖವಿದ್ದರೂ, ನಿಯಮವನ್ನು ಪಾಲಿಸದೇ ಇಲಾಖೆಗೆ ಸುಳ್ಳು ಆದಾಯ ದೃಢೀಕರಣ ಮಾಹಿತಿ ನೀಡಿ, ಸತ್ಯವನ್ನು ಮರೆಮಾಚಿ ಸರಕಾರಕ್ಕೆ ವಂಚಿಸಿ ಮೋಸವೆಸಗಿ ನೇಮಕಗೊಂಡಿರುವುದು ಸಾಬೀತಾಗಿರುತ್ತದೆ ಎಂದು ನಿಯಮಾನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
ಹೀಗಾಗಿ ಆರ್. ವಾಣಿ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಲೀನ್ ಅನ್ನು ಜಿಲ್ಲಾ ಆಸ್ಪತ್ರೆ ಹಾಸನ ಸಹಾಯಕ ಆಡಳಿತಾಧಿಕಾರಿಗಳ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲವೆಂದು ಆದೇಶಿಸಿದೆ.