ಬೆಂಗಳೂರು| ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ: ಅಧಿಕಾರಿಗಳ ಅಮಾನತು ಆದೇಶ ಪುರಸ್ಕರಿಸಿದ ಕೆಎಟಿ

Update: 2023-12-06 15:51 GMT

ಬೆಂಗಳೂರು, ಡಿ.6: ಅತ್ತಿಬೆಲೆ ಬಾಲಾಜಿ ಟ್ರೇಡರ್ಸ್‍ಗೆ ಸೇರಿದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ ಸಂಬಂಧ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದ ರಾಜ್ಯ ಸರಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಪುರಸ್ಕರಿಸಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಆನೇಕಲ್ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಅತ್ತಿಬೆಲೆ ವೃತ್ತ ಕಂದಾಯ ನಿರೀಕ್ಷಕ ಎ ಪುಷ್ಪರಾಜ್ ಮತ್ತು ಅತ್ತಿಬೆಲೆ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಭಾಗೇಶ್ ಹೊಸಮನಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಕೆಎಟಿ ಮುಖ್ಯಸ್ಥರಾದ ಆರ್.ಬಿ.ಬೂದಿಹಾಳ್ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.

ವಿಚಾರಣೆ ವೇಳೆ ಸರಕಾರಿ ವಕೀಲ ಜಿ.ರಮೇಶ್ ನಾಯ್ಕ್, ಅವಘಡ ಸಂಭವಿಸಿರುವ ಗೋದಾಮಿನ ಮಾಲಕರಾದ ವಿ.ರಾಮಸ್ವಾಮಿ ರೆಡ್ಡಿ ಎಂಬುವರಿಗೆ ಹಸಿರು ಪಟಾಕಿ ಸಂಗ್ರಹ ಹಾಗೂ ಮಾರಾಟ ಮಾಡಲು ಅರ್ಜಿದಾರ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಿಲ್ಲ. ಗೋದಾಮು ಮಾಲಕರು ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿಲ್ಲ. ಗೋದಾಮಿನಲ್ಲಿ ಅಗ್ನಿ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಿದ್ದರೂ ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಕ್ಕೆ ಅನುಮತಿ ನೀಡಲಾಗಿತ್ತು. ಇಲ್ಲಿ ಅರ್ಜಿದಾರರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವಿದೆ. ಹೀಗಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಕರಣವೇನು:? ಅತ್ತಿಬೆಲೆ ಗೋದಾಮಿನಲ್ಲಿ ಅ.7ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ 14 ಜನರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News