ಬೆಂಗಳೂರು | 2 ಕೋಟಿ ರೂ. ನಗದು ಪತ್ತೆ ಪ್ರಕರಣ : ಬಿಜೆಪಿ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಎಫ್‍ಐಆರ್

Update: 2024-04-22 12:58 GMT

ಬೆಂಗಳೂರು : ಕಾರಿನಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ.ನಗದು ಪತ್ತೆಯಾದ ಪ್ರಕರಣ ಸಂಬಂಧ ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿರುವುದು ವರದಿಯಾಗಿದೆ.

ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದು, ಹಣ ಜಪ್ತಿ ಮಾಡಿಕೊಂಡ ಇಲಾಖೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಎ.20ರ ಶನಿವಾರ ಮಧ್ಯಾಹ್ನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ ಕಾರಿನಲ್ಲಿ 2 ಕೋಟಿ ರೂ. ನಗದು ಪತ್ತೆ ಹಿನ್ನೆಲೆ, ಚುನಾವಣಾಧಿಕಾರಿ ರವಿ ಅಸೂತಿ ಎಂಬುವರು ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೊಕೇಶ್ ಅಂಬೆಕಲ್, ಹಣ ಸಾಗಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಗಂಗಾಧರ್ ಎಂಬುವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಹಣ ಜಪ್ತಿ ಮಾಡಿಕೊಂಡಿದ್ದು, ಇಬ್ಬರು ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಲು ನೊಟೀಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೋದಂಡರಾಮಪುರ ಕೆನೆರಾ ಬ್ಯಾಂಕಿನಲ್ಲಿ ಮಾ.27ರಂದು 5 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಲಾಗಿದ್ದು, ಈ ಪೈಕಿ 2 ಕೋಟಿ ಹಣವನ್ನು ಮೈಸೂರು - ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆ ಹಣ ಹಂಚಲು ಹೋಗುತ್ತಿರುವುದಾಗಿ ಆರೋಪಿತರು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದರು.

ಈ ವೇಳೆ, ಪತ್ತೆಯಾದ ಪತ್ರದಲ್ಲಿ ಮೇಲಿನ ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣ ಹಂಚಲು ವೆಂಕಟೇಶ್ ಮೂಲಕ ಹಣ ಸಾಗಿಸುತ್ತಿರುವ ಬಗ್ಗೆ ಉಲ್ಲೇಖವಾಗಿತ್ತು ಎಂದು ಚುನಾವಣಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

ಈ ಸಂಬಂಧ ಪೊಲೀಸರ ಸಮಕ್ಷಮದಲ್ಲಿ ಹಣ ಎಣಿಕೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಐಟಿ ಅಧಿಕಾರಿಗಳು ಚುರುಕುಗೊಳಿಸಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News