ಬೆಂಗಳೂರು | ಹಣಕ್ಕಾಗಿ ಮೊಬೈಲ್ ಸಿಡಿಆರ್ ಮಾರಾಟ ಆರೋಪ : ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರು ಸಿಸಿಬಿ ಬಲೆಗೆ

Update: 2024-08-08 15:20 GMT
  • ಸಾಂದರ್ಭಿಕ ಚಿತ್ರ (PC:Meta AI)

ಬೆಂಗಳೂರ : ಹಣಕ್ಕಾಗಿ ಸಾರ್ವಜನಿಕರಿಂದ ಮೊಬೈಲ್ ಸಿಡಿಆರ್ (ಕರೆ ವಿವರಗಳ ದಾಖಲೆ) ರಹಸ್ಯವಾಗಿ ಆಲಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ, ಮತ್ತೋರ್ವ ನಾಗೇಶ್ವರ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿಗೆ ಮಹಾನಗರಿ ಡಿಟೆಕ್ಟಿವ್ ಹಾಗೂ ಸೆಕ್ಯೂರಿಟಿ ಸೆಲ್ಯೂಷನ್ ಕಂಪೆನಿ, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಎಂಬ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಮೂರು ಪ್ರಕರಣಗಳನ್ನು ದಾಖಲಿಸಿ ಆರೋಪಿಗಳಾದ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬವರನ್ನು ಬಂಧಿಸಲಾಗಿತ್ತು.

ಈ ವೇಳೆ ವಿಚಾರಣೆಯಲ್ಲಿ ಬಂಧಿತ ನಾಗೇಶ್ವರ ರೆಡ್ಡಿಗೆ ಸಿಡಿಆರ್ ನೀಡುತ್ತಿದ್ದ ಆರೋಪದಡಿ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಇನ್ನೂ, ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಪ್ರಕರಣ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪೊವೈಡರ್ ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್‌ಗಳನ್ನು ಸೇರಿಸಿ ಸಿಡಿಆರ್ ಪಡೆಯುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.

ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್‌ಗಳನ್ನು ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್‌ಗಳನ್ನು ನಾಗೇಶ್ವರ ರೆಡ್ಡಿಗೆ ನೀಡುತ್ತಿದ್ದ.ಅದರಲ್ಲೂ ದಂಪತಿ, ಪ್ರೇಮಿಗಳ ನಡುವಿನ ಗುಮಾನಿಗೆ ಅಧಿಕ ಸಿಡಿಆರ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News