ಬೆಂಗಳೂರು | ಗೃಹ ಬಂಧನದಲ್ಲಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಲು ನೆರವಾದ ಹೊಯ್ಸಳ ಸಿಬ್ಬಂದಿ!

Update: 2024-08-14 15:52 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಹಾಯವಾಣಿಗೆ ಬಂದ ಕರೆ ಆಧರಿಸಿ ತ್ವರಿತವಾಗಿ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಗೃಹ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಪಿಯುಸಿ ಪರೀಕ್ಷೆಗೆ ಹಾಜರಾಗಲು ನೆರವಾದ ಘಟನೆ ಇಲ್ಲಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಆ.12ರಂದು ಘಟನೆ ನಡೆದಿದ್ದು, ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಕರೆಯನ್ವಯ ಕಾರ್ಯಪ್ರವೃತ್ತರಾದ ಸಿದ್ದಾಪುರ ಠಾಣೆಯ ಎಎಸ್‍ಐ ಅಶೋಕ್ ನೇತೃತ್ವದ ಹೊಯ್ಸಳ ಸಿಬ್ಬಂದಿ, ಮನೆಗೆ ತೆರಳಿ ಆಕೆಯ ಅಜ್ಜಿ- ತಾತನ ಮನವೊಲಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.

ಪೋಷಕರಿಂದ ದೂರವಾಗಿದ್ದ ವಿದ್ಯಾರ್ಥಿನಿ ತನ್ನ ಅಜ್ಜಿ, ತಾತನೊಂದಿಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದಳು. ಮನೆಗೆಲಸದಲ್ಲಿ ಸಹಾಯ ಮಾಡುವುದಿಲ್ಲ. ಸದಾ ಮೊಬೈಲ್ ಬಳಕೆಯಲ್ಲಿ ತೊಡಗಿರುತ್ತಾಳೆ ಎಂದು ಆಕೆಯನ್ನು ಶಿಸ್ತಿನಲ್ಲಿರಿಸುವ ಉದ್ದೇಶದಿಂದ ಅಜ್ಜಿ, ತಾತ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು ಎಂದು ತಿಳಿದುಬಂದಿದೆ.

ಆ.12ರ ಸೋಮವಾರ ನಿಗದಿಯಾಗಿದ್ದ ಪಿಯುಸಿ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಸಹ ಅಜ್ಜಿ, ತಾತ ಅನುಮತಿ ನೀಡದಿದ್ದಾಗ ಬೇರೆ ವಿಧಿಯಿರದೆ ವಿದ್ಯಾರ್ಥಿನಿಯು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿ, ಲೋಕೇಷನ್ ಶೇರ್ ಮಾಡಿದ್ದಳು ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿ ಆಕೆಯ ಅಜ್ಜಿ, ತಾತನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟರಲ್ಲಾಗಲೇ ಪರೀಕ್ಷೆಗೆ ವಿಳಂಬವಾಗಿದ್ದರಿಂದ ಬಸವನಗುಡಿಯಲ್ಲಿರುವ ಕಾಲೇಜಿಗೆ ತಾವೇ ಬಾಲಕಿಯನ್ನು ಕರೆದೊಯ್ದ ಹೊಯ್ಸಳ ಸಿಬ್ಬಂದಿ, ಪ್ರಾಂಶುಪಾಲರಿಗೆ ವಿಷಯವನ್ನು ವಿವರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News