ಬೆಂಗಳೂರು | ವೈದ್ಯನಿಗೆ 6.02 ಕೋಟಿ ರೂ. ವಂಚನೆ ಆರೋಪ: ಎಫ್‍ಐಆರ್ ದಾಖಲು
ಬೆಂಗಳೂರು: ಕಾಸ್ಮೆಟಿಕ್ ಸರ್ಜರಿ ಮಾಡಿಸಲು ಬಂದ ಮಹಿಳೆಯು ಐಷಾರಾಮಿ ಕಾರು ಕೊಡಿಸುವುದಾಗಿ ವೈದ್ಯರೊಬ್ಬರಿಗೆ ನಂಬಿಸಿ ಬರೋಬ್ಬರಿ 6.02 ಕೋಟಿ ರೂ. ಪಡೆದು ವಂಚಿಸಿರುವ ಆರೋಪದಡಿ ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ವೈದ್ಯ ಗಿರೀಶ್ ಎಂಬುವರಿಗೆ ಐಶ್ವರ್ಯ ಗೌಡ ಎಂಬ ಮಹಿಳೆಯು ವಂಚಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2022ರ ಮಾರ್ಚ್‍ನಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಲು ಡಾ.ಗಿರೀಶ್ ಬಳಿ ಬಂದಾಗ ಮಹಿಳೆಯ ಪರಿಚಯವಾಗಿದೆ. ನಂತರದ ದಿನಗಳಲ್ಲಿ ತಾನು ರಿಯಲ್ ಎಸ್ಟೇಟ್ ಫೈನಾನ್ಸ್ ನಡೆಸುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರ ಸಹ ನಡೆಸುತ್ತಿದ್ದೇನೆ ಎಂದು ಮಹಿಳೆ ತಿಳಿಸಿದ್ದರು. ಐಷಾರಾಮಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದ ಗಿರೀಶ್, ಮಹಿಳೆಯನ್ನು ಸಂಪರ್ಕಿಸಿದ್ದರು.
ಈ ವೇಳೆ ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, 2 ಕೋಟಿ 75 ಲಕ್ಷ ರೂ.ಗಳನ್ನು ಆನ್‍ಲೈನ್ ಮೂಲಕ ಹಾಗೂ 3 ಕೋಟಿ 25 ಲಕ್ಷ ರೂ.ಗಳನ್ನು ನಗದಾಗಿ ಪಡೆದುಕೊಂಡಿದ್ದರು. ಆದರೆ ಕಾರನ್ನು ಕೊಡಿಸದೇ ಇದ್ದಾಗ, ವೈದ್ಯ ಹಣ ವಾಪಸ್ ಕೇಳಿದಾಗ ಇವತ್ತು ನಾಳೆ ಕೊಡುವುದಾಗಿ ಸಬೂಬು ಹೇಳಿದ್ದಾರೆ.
2023ರ ಡಿಸೆಂಬರ್ ನಲ್ಲಿ ಹಣ ಹಿಂದಿರುಗಿಸುವಂತೆ ಕೇಳಿದಾಗ ವಿಜಯನಗರ ಕ್ಲಬ್ ಹತ್ತಿರ ಬರಲು ಸೂಚಿಸಿದ್ದಾರೆ. ಅದರಂತೆ ಗಿರೀಶ್ ಮತ್ತು ಅವರ ಪತ್ನಿ ಕ್ಲಬ್ ಹತ್ತಿರ ಹೋದಾಗ, ಅವಾಚ್ಯವಾಗಿ ನಿಂದಿಸಿ, ಇದೇ ರೀತಿ ಹಣ ವಾಪಸ್ ಕೇಳಿದರೆ ನಿನ್ನ ವಿರುದ್ಧ ಅತ್ಯಾಚಾರದ ದೂರು ಕೊಡುತ್ತೇನೆ ಎಂದು ಬೆದರಿಸಿದ್ದಾರೆ. ಅಲ್ಲದೆ ವಿಷಯವನ್ನು ಕೈ ಬಿಡಬೇಕಾದರೆ 5 ಲಕ್ಷ ರೂ. ಹಣವನ್ನು ನೀಡುವಂತೆ ಬೆದರಿಕೆ ಹಾಕಿ ಪುನಃ 2 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.