ಬೆಂಗಳೂರು | ನಕಲಿ ದಾಖಲೆಗಳನ್ನು ಸೃಷ್ಟಿಸಿ 70 ಕೋಟಿ ರೂ. ಪರಿಹಾರ ಪಡೆಯಲು ಯತ್ನ : ಐವರ ಬಂಧನ

Update: 2024-10-10 13:36 GMT

ಬೆಂಗಳೂರು : ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ 6 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ 70 ಕೋಟಿ ರೂ.ಪರಿಹಾರ ಪಡೆಯಲು ಯತ್ನಿಸಿದ ಐವರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ಐವರು ಆರೋಪಿಗಳ ಪೈಕಿ ನಾಗರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಉಳಿದ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ.

ಬಿಡಿಎ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್ ನೀಡಿದ ದೂರಿನ ಮೇರೆಗೆ ಚಲ್ಲಘಟ್ಟ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್, ಲಕ್ಷ್ಮಮ್ಮ, ಶ್ರೀನಿವಾಸ, ಸಂತೋಷ್, ರವಿಕುಮಾರ್, ಭರತ್, ಸುನೀತ್, ಆಶಾ, ಸ್ವಾಮಿ, ಉಮೇಶ್, ಬಿಡಿಎ ಭೂಸ್ವಾಧೀನ ಅಧಿಕಾರಿ, ವಿಶೇಷ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಆರೋಪಿಗಳಾದ ಪುಟ್ಟಮ್ಮ, ಗಂಗಮ್ಮ, ಲಕ್ಷ್ಮಮ್ಮ, ಆಶಾ ಮತ್ತು ಬಂಧಿತ ಐವರು ಇತರ ಖಾಸಗಿ ವ್ಯಕ್ತಿಗಳು ಕಾನೂನುಬದ್ಧ ಮಾಲಕರಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಚಲ್ಲಘಟ್ಟದ ಸರ್ವೇ ನಂ.13 ಮತ್ತು ಹೊಸ ಸರ್ವೇ ನಂಬರ್ 58ರಲ್ಲಿನ 6 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಎಲ್ಲ ಆರೋಪಿಗಳು ಹಾಗೂ ಜಮೀನಿನ ಮೂಲ ಮಾಲೀಕ ಮೂಡ್ಲಪ್ಪ ಯಾವುದೇ ರೀತಿಯಲ್ಲಿ ಸಂಬಂಧಿಗಳಲ್ಲದಿದ್ದರೂ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಿಡಿಎಗೆ ಸಲ್ಲಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಈ ಆಸ್ತಿಯ ಮಾಲಕರು ತಾವೇ ಎಂದು ಹೇಳಿಕೊಂಡು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದು, ಆಸ್ತಿಯ ಮೂಲ ಮಾಲಕ ಮೂಡ್ಲಪ್ಪ-ಮೂಡ್ಲಯ್ಯ 1976ರಲ್ಲಿ ನಿಧನರಾಗಿದ್ದು, 1992ರಲ್ಲಿ ಆಸ್ತಿಯ ಪೋಡಿ ಆಗಿದೆ. 2019-2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಆರೋಪಿಗಳು ರಿಲೀಸ್ ಡೀಡ್ ಮಾಡಿಕೊಂಡಿದ್ದಾರೆ.

ಈ ಆಸ್ತಿ ಈಗಾಗಲೇ ಕಂದಾಯ ನಿವೇಶನಗಳಾಗಿ ಮಾರ್ಪಾಡಾಗಿ ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ರವಿಪ್ರಕಾಶ್ ಮತ್ತು ಸುಧಾ ಅವರು ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ಸಿದ್ಧಪಡಿಸಿದ್ದರು ಎನ್ನಲಾಗಿದೆ.

ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ನಿಜವಾದ ಆಸ್ತಿ ಮಾಲಕರ ಬಗ್ಗೆ ವಿಚಾರ ಮಾಡಿರಲಿಲ್ಲ. ದಕ್ಷಿಣ ಉಪ ವಿಭಾಗಾಧಿಕಾರಿ ಡಾ.ಶಿವಣ್ಣ 2021ರಲ್ಲಿ ಆರೋಪಿ ಪುಟ್ಟಮ್ಮ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್ ಗೆ ಆದೇಶ ನೀಡಿ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಗೋವಿಂದರಾಜು ಎಂಬುವವರು ಬಿಡಿಎಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿ, ಬೆರಳಚ್ಚು ತಜ್ಞರಿಂದ ವರದಿ ಪರಿಶೀಲಿಸಿದಾಗ ಅಕ್ರಮ ಬಯಲಾಗಿರುವುದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News