ಬೆಂಗಳೂರು | ಯುವತಿಗೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಆರೋಪ: ಯುವಕ ಸೆರೆ
ಬೆಂಗಳೂರು: ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಆರೋಪದಡಿ ಬೀದರ್ ಮೂಲದ ಯುವಕನನ್ನು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ ಟೌನ್ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಶಿವಕುಮಾರ್ ಹೊಸಳ್ಳಿ(25) ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಾಸವಾಗಿರುವ ಶಿವಕುಮಾರ್, 2018ರಲ್ಲಿ ಉಡುಪಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಯುವತಿಯೊಬ್ಬಳ ಪರಿಚಯವಾಗಿದ್ದು, ಬಳಿಕ ಯುವತಿ ತಾಯಿ ಬಳಿ ಮೊಬೈಲ್ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದಾನೆ.
2018ರ ಮಾರ್ಚ್‍ನಲ್ಲಿ ನೆಲಮಂಗಲದಲ್ಲಿರುವ ಯುವತಿ ಮನೆಗೆ ಶಿವಕುಮಾರ್ ಹೋಗಿದ್ದು, ಈ ವೇಳೆ ಯುವತಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ಯುವತಿ ಮೇಲೆ ಅತ್ಯಾಚರವೆಸಗಿದ್ದಾನೆ. ಅಲ್ಲದೆ ಯುವತಿಗೆ ಗೊತ್ತಿಲ್ಲದಂತೆ ಫೋನಿನಲ್ಲಿ ಫೋಟೋ ತೆಗೆದು, ವಿಡಿಯೋ ಮಾಡಿಕೊಂಡಿದ್ದಾನೆ.
ಬಳಿಕ ಈ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಸಂತ್ರಸ್ತೆಯಿಂದ 85 ಸಾವಿರ ರೂ.ಗಳನ್ನು ಆರೋಪಿ ಶಿವಕುಮಾರ್ ಪಡೆದುಕೊಂಡಿದ್ದಾನೆ. ಬಳಿಕ ಸಂತ್ರಸ್ತೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಂತ್ರಸ್ತೆಯ ಚಿಕ್ಕಪ್ಪನ ಮಗಳ ಮೊಬೈಲ್‍ಗೆ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
2024ರ ಜ.30 ರಂದು ಸಂತ್ರಸ್ತೆ ಮತ್ತು ಆಕೆಯ ತಂದೆ-ತಾಯಿ ನೆಲಮಂಗಲದ ಗಣೇಶನ ದೇವಸ್ಥಾನಕ್ಕೆಂದು ಹೋದಾಗ, ಆರೋಪಿಯು ಸಂತ್ರಸ್ತೆಗೆ ಕರೆ ಮಾಡಿ ‘ಬಾ ನಿನ್ನೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಕು’ ಎಂಬುದಾಗಿ ಬಲವಂತವಾಗಿ ಪೀಡಿಸಿದ್ದಾನೆ. ಈ ವಿಚಾರವನ್ನು ಸಂತ್ರಸ್ತೆ ತಂದೆ, ತಾಯಿಗೆ ತಿಳಿಸಿದ್ದಾರೆ. ನಂತರ ಈ ಬಗ್ಗೆ ಸಂತ್ರಸ್ತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.