ಬೆಂಗಳೂರು | ಮಗುವನ್ನು ಕೊಲೆಗೈದ ಆರೋಪ : ತಾಯಿ ಬಂಧನ
ಬೆಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ತನ್ನ ಮಗುವನ್ನು ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪದಡಿ ತಾಯಿಯನ್ನು ಇಲ್ಲಿನ ಸುಬ್ರಮಣ್ಯಪುರ ಠಾಣೆ ಪೋಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ರಮ್ಯಾ(35) ಎಂಬವರನ್ನು ಅವರದ್ದೇ ಮಗು ಪ್ರೀತಿಕಾ(3)ಳನ್ನು ಹತ್ಯೆ ಮಾಡಿದ ಆರೋಪದಡಿ ಬಂಧಿಸಲಾಗಿದೆ. ಬಂಧಿತ ರಮ್ಯ ಗೃಹಿಣಿಯಾಗಿದ್ದು, ಈಕೆಯ ಪತಿ ವೆಂಕಟೇಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ದೂರದ ನಾರ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
11 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಅವಳಿ ಹೆಣ್ಣು ಮಗುವಾಗಿದ್ದು, ಇಬ್ಬರ ಮಗುವಿನ ಪೈಕಿ ಪ್ರೀತಿಕಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಮತ್ತೊಂದು ಮಗು ಸದೃಢವಾಗಿದ್ದು, ಶಾಲೆಗೆ ಹೋಗುತಿತ್ತು. ಹತ್ಯೆಯಾದ ಮಗು ಅನಾರೋಗ್ಯದಿಂದಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಇದರಿಂದ ರಮ್ಯಾ ಮನ ನೊಂದಿದ್ದರು ಎನ್ನಲಾಗಿದೆ.
ಮಾನಸಿಕವಾಗಿ ಸದೃಢವಾಗಿರದ ಮಗುವನ್ನು ಸಾಯಿಸಲು ನಿರ್ಧರಿಸಿ ಮಗುವನ್ನು ವೇಲಿನಿಂದ ಬಿಗಿದು ಸಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ ಆಸ್ಪತ್ರೆಗೆ ಬಂದು ಮಗುವನ್ನು ತೋರಿಸಿದ್ದರು. ಈ ಸಂಬಂಧ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಮ್ಯಾ ಅವರನ್ನು ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ನಾರ್ವೆಯಲ್ಲಿರುವ ಪತಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ತನಿಖೆ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರುವರೆ ವರ್ಷದ ಮಗುವಿನ ಕೊಲೆ ಪ್ರಕರಣ ವರದಿಯಾಗಿದೆ. ತಾಯಿಯೆ ಮಗುವಿನ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಮಗು ತನ್ನ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಆಗುತ್ತಿರಲ್ಲ. ಹೀಗಾಗಿ ಮುಂದೆ ಮಗುವಿನ ಭವಿಷ್ಯ ಹೇಗೋ ಎಂಬ ದುಃಖದಲ್ಲಿ ಮಗುವಿನ ಜೀವ ತೆಗೆದಿರುತ್ತಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ.
-ಲೋಕೇಶ್ ಭರಮಪ್ಪ, ಡಿಸಿಪಿ, ಬೆಂಗಳೂರು ನಗರ ದಕ್ಷಿಣ ವಿಭಾಗ.