ಬೆಂಗಳೂರು | ಕ್ಲರ್ಕ್ ಹುದ್ದೆಗೆ ಪರೀಕ್ಷೆ ಬರೆಯಲು ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಆರೋಪ : ಇಬ್ಬರ ಬಂಧನ

Update: 2024-04-03 15:29 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪ್‍ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ನಡೆದಿದ್ದ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಆರೋಪ ಸಂಬಂಧ ಇಬ್ಬರು ಆರೋಪಿಗಳನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಅತೀಶ್ ಹಾಗೂ ಅಜಯ್ ಕುಮಾರ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮಾ.24ರಂದು ನಡೆದಿದ್ದ ಲಿಖಿತ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಆರೋಪಿಗಳು, ಮಾ.30ರಂದು ಕೌಶಲ್ಯ ಪರೀಕ್ಷೆಗೆ ಹಾಜರಾದಾಗ ಪ್ರಕರಣ ಬಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪ್‍ನಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಮಾ.9ರಂದು ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ್ದ ಆರೋಪಿಗಳಾದ ಅಕ್ಷಿತ್ ಮತ್ತು ಅಜಯ್ ಕುಮಾರ್, ಡಿಡಿ ಮುಖಾಂತರ ಹಣ ಪಾವತಿಸಿದ್ದರು. ಆದರೆ ಮಾ.24ರಂದು ನಡೆದಿದ್ದ ಲಿಖಿತ ಪರೀಕ್ಷೆಗೆ ಆರೋಪಿಗಳ ಪರವಾಗಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ವೇಳೆ ಲಿಖಿತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಬೆರಳಚ್ಚು ಮಾದರಿ ಸಂಗ್ರಹಿಸಲಾಗಿತ್ತು. ಬಳಿಕ ಮಾ.30ರಂದು ಕರೆಯಲಾಗಿದ್ದ ಕೌಶಲ್ಯ ಪರೀಕ್ಷೆಗೆ ಆರೋಪಿಗಳು ಹಾಜರಾದಾಗ ಬೆರಳಚ್ಚು ಹೊಂದಾಣಿಕೆಯಾಗದ ಕಾರಣ, ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿಗಳ ವಂಚನೆ ಯತ್ನ ಬಯಲಾಗಿತ್ತು.

ಆರೋಪಿಗಳ ವಿರುದ್ಧ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಪ್ರತಿನಿಧಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ನಕಲಿ ಅಭ್ಯರ್ಥಿಗಳಿಬ್ಬರು ತಲೆಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆಸಲಾಗಿದೆ ಎಂದು ಅಶೋಕನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News