ಬೆಂಗಳೂರು | ʼಡ್ರಂಕ್ ಆ್ಯಂಡ್ ಡ್ರೈವ್ʼ ತಪಾಸಣೆ ಹೆಸರಿನಲ್ಲಿ ಸುಲಿಗೆ ಆರೋಪ: ಪೊಲೀಸ್ ಆಯುಕ್ತರಿಗೆ ದೂರು
ಬೆಂಗಳೂರು : ನಗರದಲ್ಲಿ ʼಡ್ರಂಕ್ ಆ್ಯಂಡ್ ಡ್ರೈವ್ʼ ತಪಾಸಣೆ ಹೆಸರಿನಲ್ಲಿ ಜೀವನ್ ಭೀಮಾ ನಗರ ಸಂಚಾರ ಠಾಣೆ ಪೊಲೀಸರು ಮಹಿಳೆಯಿಂದ ಗೂಗಲ್‍ಪೇ ಮೂಲಕ ಹಣ ಪಡೆದಿದ್ದಾರೆಂದು ಆರೋಪಿಸಿ ಆಕೆಯ ತಂದೆ ʼಎಕ್ಸ್ʼ ಆ್ಯಪ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಫೆ.24ರ ರಾತ್ರಿ 11 ಗಂಟೆ ಸುಮಾರಿಗೆ ಹಳೆ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ಮಹಿಳೆಯು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ತಪಾಸಣೆ ಮಾಡಲು ಬಂದ ಸಂಚಾರಿ ಪೊಲೀಸರಿಂದ ಹಣಕ್ಕೆ ಬೇಡಿಕೆ ಜೊತೆಗೆ ಕುಡಿದು ವಾಹನ ಚಾಲನೆ ಮಾಡುತ್ತಿದ್ದೀರಾ ಎಂದು ಹೆದರಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಸಂಚಾರ ಪೊಲೀಸರು ಮೊದಲಿಗೆ 15 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು, ನಂತರ ಗೂಗಲ್ ಪೇ ಮೂಲಕ 5 ಸಾವಿರ ರೂ. ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸಬೇಕು. ಈ ರೀತಿಯ ಸುಲಿಗೆಯನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಬೇಕು ಎಂದು ಮಹಿಳೆಯ ತಂದೆ ದೂರಿನಲ್ಲಿ ಒತ್ತಾಯಿಸಿದ್ದಾರೆ.