ಬೆಂಗಳೂರು | ಹನಿಟ್ರ್ಯಾಪ್ ಮೂಲಕ ಬೆದರಿಕೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

Update: 2024-06-26 15:30 GMT

ಬೆಂಗಳೂರು : ಹನಿಟ್ರ್ಯಾಪ್ ಮೂಲಕ ಕಾಂಗ್ರೆಸ್ ಶಾಸಕ ಹರೀಶ್‍ಗೌಡ ಅವರ ಪರಿಚಿತರನ್ನು ಸಂಪರ್ಕಿಸಿ ಬೆದರಿಕೆ ಹಾಕಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎಂಬುವರು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳ ಗುಂಪು ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್‍ಗೌಡ ಅವರ ಪರಿಚಿತರನ್ನು ಸಂಪರ್ಕಿಸಿ ಹನಿಟ್ರ್ಯಾಪ್ ಮಾದರಿ ವಿಡಿಯೋ ಸೃಷ್ಟಿಸಿ ಕೋಟ್ಯಂತರ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಈ ಕುರಿತು ಶಾಸಕ ಹರೀಶ್‍ಗೌಡ ಬೆಂಗಳೂರಿನ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡುತ್ತಿದ್ದ ಜಾಲವನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಶಾಸಕ ಹರೀಶ್‍ಗೌಡ ಮಾತನಾಡಿ, ಎರಡು ನಂಬರ್ ಗಳಿಂದ ಕರೆ ಮಾಡಿ ನನ್ನ ಪರಿಚಿತರಿಗೆ ಹನಿಟ್ರ್ಯಾಪ್ ಮಾಡಲಾಗಿತ್ತು. ಆ ನಂಬರ್ ಗಳ  ಆಧಾರದಲ್ಲಿ ಸಿಸಿಬಿಗೆ ದೂರು ಕೊಟ್ಟಿದ್ದೆ. ಈಗ ಇಬ್ಬರು ಆರೋಪಿಗಳ ಬಂಧನವಾಗಿದ್ದು, ತನಿಖೆ ನಡೆಯುತ್ತಿದೆ. ಕಾನೂನಾತ್ಮಕವಾಗಿ ಏನು ಆಗಬೇಕು ಆಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಕೆಲವು ದಿನಗಳ ಹಿಂದೆ ಸಿಸಿಬಿ ಠಾಣೆಗೆ ದೂರು ಬಂದಿತ್ತು. ಆರೋಪಿಗಳ ಗುಂಪೊಂದು ಕೆಲ ಅಂಶಗಳ ಮೇಲೆ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದೇವೆ. ಇಬ್ಬರ ಬಂಧನವಾಗಿದೆ ಮತ್ತೊಬ್ಬರು ಪರಾರಿಯಾಗಿದ್ದಾರೆ. ಬೇರೆಯವರಿಗೂ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಹೆಚ್ಚಿನ ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News