ಬೆಂಗಳೂರು : ಸಂಚಾರ ದಟ್ಟಣೆ ನಿಯಂತ್ರಿಸಲು ಡ್ರೋಣ್ ಕ್ಯಾಮೆರಾ

Update: 2024-02-03 14:15 GMT

ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ಡ್ರೋಣ್ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ.

ಟೋಯಿಂಗ್ ವ್ಯವಸ್ಥೆ ಹಿಂಪಡೆದಿರುವ ಕಾರಣದಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಅಲ್ಲದೇ ನಗರದ ಕೆಲವು ಮುಖ್ಯ ಜಂಕ್ಷನ್‍ಗಳಲ್ಲಿ ಸಿಗ್ನಲ್‍ಗಳ ನಿರ್ವಹಣೆ ಕುರಿತು ಗೊಂದಲಗಳಾಗುತ್ತಿವೆ. ಇದರಿಂದಾಗಿ ಆಂಬ್ಯುಲೆನ್ಸ್ ಮತ್ತಿತರ ತುರ್ತು ವಾಹನಗಳು ಸಮಸ್ಯೆಗೊಳಗಾಗುತ್ತಿವೆ. ಆದ್ದರಿಂದ ಸಂಚಾರ ಪೊಲೀಸರ ಗೊಂದಲ ಹಾಗೂ ವೈಫಲ್ಯಗಳನ್ನು ಪರಿಹರಿಸಲು ಡ್ರೋಣ್ ಕ್ಯಾಮೆರಾಗಳು ಸಹಾಯ ಮಾಡಲಿವೆ.

ಡ್ರೋಣ್ ಕ್ಯಾಮೆರಾದ ವಿಡಿಯೋಗಳನ್ನು ಸಂಚಾರ ಪೊಲೀಸ್ ನಿಯಂತ್ರಣ ಕೋಣೆಯಲ್ಲಿ ಗಮನಿಸುವುದರಿಂದ ಎಲ್ಲೆಲ್ಲಿ ಸಂಚಾರ ದಟ್ಟಣೆಯಿದೆ. ಯಾವುದಾದರೂ ವಾಹನಗಳು ಕೆಟ್ಟು ನಿಂತಿವೆಯಾ, ಅಪಘಾತ ಸಂಭವಿಸಿದೆಯಾ ಎಂಬುದನ್ನು ತಿಳಿದುಕೊಂಡು ಸಂಬಂಧಪಟ್ಟ ಠಾಣೆಗಳಿಗೆ ಮಾಹಿತಿ ನೀಡಬಹುದು.

ತಕ್ಷಣ ಸ್ಥಳಕ್ಕೆ ತೆರಳಿ ವಾಹನ ಸವಾರರ ಸಮಸ್ಯೆಯನ್ನು ಬಗೆಹರಿಸಬಹುದು. ಸದ್ಯ ಪ್ರಾಯೋಗಿಕವಾಗಿ ಪ್ರಮುಖ ಜಂಕ್ಷನ್‍ಗಳಲ್ಲಿ ಡ್ರೋಣ್ ಕ್ಯಾಮೆರಾಗಳು ಹಾರಾಡುತ್ತಿವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಪ್ರಮುಖ ಜಂಕ್ಷನ್‍ಗಳ ಮೇಲೆ ಡ್ರೋಣ್ ಕ್ಯಾಮೆರಾಗಳ ಮೂಲಕ ಸಂಚಾರಿ ಪೊಲೀಸರು ಕಣ್ಣಿಡಲಿದ್ದಾರೆ ಎಂದು ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.

 ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್, ಇಬ್ಬಲೂರು ಜಂಕ್ಷನ್, ಮಾರತಳ್ಳಿ, ಕೆ.ಆರ್.ಪುರಂ, ಗೊರಗುಂಟೆಪಾಳ್ಯ, ಸಾರಕ್ಕಿ ಸೇರಿದಂತೆ ಸಂಚಾರ ದಟ್ಟಣೆಯಿರುವ ನಗರದ 8ಕ್ಕೂ ಅಧಿಕ ಸ್ಥಳಗಳಲ್ಲಿ ಡ್ರೋಣ್ ಕ್ಯಾಮೆರಾಗನ್ನು ಬಳಸಲಾಗುತ್ತಿದ್ದು, ಇದರಿಂದ ಅತಿಯಾದ ಸಂಚಾರ ದಟ್ಟಣೆ ಎಲ್ಲೆಲ್ಲಿ ಉಂಟಾಗಿದೆ ಮತ್ತು ಕಾರಣವೇನು ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಸಂಚಾರ ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News