ಬೆಂಗಳೂರು| ಮಾದಕ ವಸ್ತು ಸಾಗಾಣೆ: 7 ಮಂದಿ ಸೆರೆ, 60 ಲಕ್ಷ ರೂ. ಮೌಲ್ಯದ ಗಾಂಜಾ ವಶ

Update: 2023-12-30 13:13 GMT

ಬೆಂಗಳೂರು: ಹೊಸ ವರ್ಷಾಚರಣೆಗೆ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ 7 ಮಂದಿ ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಿರುವ ರೈಲ್ವೆ ಪೊಲೀಸ್ ಘಟಕದ ವಿಶೇಷ ತಂಡ, 60 ಲಕ್ಷ ರೂ. ಮೌಲ್ಯದ 60.965 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಒಡಿಸ್ಸಾದ ಸಿಮುಲಿಯಾ ಬಲೇಶ್ವರ ವಾಸಿ ನಿತ್ಯಾನಾದ್ ದಾಸ್(37), ತ್ರಿಪುರದ ನಾರ್ಥ್ ಭಾಗನ್‍ನ ರಾಜೇಶ್ ದಾಸ್(25), ಬಿಹಾರದ ಕುಮ್ರಾವಿಷ್ಣುಪುರದ ಅಮರ್‍ಜಿತ್ (23), ಒಡಿಸ್ಸಾದ ಬಾಲಾಂಗಿರ್ ಜಿಲ್ಲೆಯ ನಿಕೇಶ್ ರಾಣಾ (23), ಒಡಿಸ್ಸಾದ ಕೊಂದಮಾಲ್‍ನ ಜಲಂಧರ್ ಕನ್ಹರ್(20), ಬೈಕುಂಟಾ ಕನ್ಹರ್ ಹಾಗೂ ಸಾಗರ್ ಕನ್ಹರ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಹೊಸ ವರ್ಷ ಹಿನ್ನೆಲೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ತಡೆಗೆ ರೈಲ್ವೆ ಪೊಲೀಸರು ಡಿ. 22ರಿಂದ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಒಡಿಸ್ಸಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಬಗ್ಗೆ ನಿಗಾ ವಹಿಸಿ ತಪಾಸಣೆ ಕೈಗೊಂಡಾಗ ಪ್ರಶಾಂತಿ ಎಕ್ಸ್ ಪ್ರೆಸ್, ಶೇಷಾದ್ರಿ ಎಕ್ಸ್ ಪ್ರೆಸ್, ಶಾಲಿಮಾರ್ ವಾಸ್ಕೊ ಎಕ್ಸ್ ಪ್ರೆಸ್ ರೈಲುಗಳಲ್ಲಿ ಈ ಆರೋಪಿಗಳು ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ.

ಈ ಸಂಬಂಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆ, ಬೈಯ್ಯಪ್ಪನಹಳ್ಳಿ, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಹುಬ್ಬಳ್ಳಿಯಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. 7 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News