ಬೆಂಗಳೂರು | ಪೈಂಟ್ ಅಂಗಡಿಯಲ್ಲಿ ಅಗ್ನಿ ಅವಘಡ: 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

Update: 2024-01-27 12:54 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಪೈಂಟ್ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 30 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಬಳೆಪೇಟೆಯಲ್ಲಿ ವರದಿಯಾಗಿದೆ.

ಜ.26ರ ರಾತ್ರಿ ಘಟನೆ ನಡೆದಿದೆ. ಎರಡು ಅಂತಸ್ತಿನ ಕಟ್ಟಡ ಇದಾಗಿದ್ದು, ಕೆಳ ಮಹಡಿಯಲ್ಲಿ ಪೈಂಟ್ ಅಂಗಡಿ ಇದ್ದು, ಎರಡನೇ ಮಹಡಿಯಲ್ಲಿ ಬ್ಯಾಂಗ್ ಅಂಗಡಿ ಇತ್ತು ಎಂದು ತಿಳಿದುಬಂದಿದೆ. ಮೊದಲಿಗೆ ಪೈಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು. ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದೆ.

ಈ ವೇಳೆ ಕಟ್ಟಡದ ಒಳಗೆ ಪ್ರವೇಶಿಸಿದ್ದ ಯುವಕನೊಬ್ಬ ಹೊರಬರಲಾರದೆ ಸಿಲುಕಿಕೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಕಟ್ಟಡದ ಶೆಟರ್ಸ್ ಮುರಿದು ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೈಂಟ್ ಅಂಗಡಿ ಮಾಲಕ ಕೃಷ್ಣಮೂರ್ತಿ ಕುಟುಂಬಸ್ಥರು, ‘20 ವರ್ಷಕ್ಕೂ ಹಿಂದಿನಿಂದ ಇದೇ ಕಟ್ಟಡದಲ್ಲಿ ಪೈಂಟ್ ವ್ಯಾಪಾರ ಮಾಡುತ್ತಿದ್ದೆವು. ಇದೇ ಮೊದಲ ಬಾರಿಗೆ ಈ ಅನಾಹುತವಾಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.

ಘಟನೆಗೆ ನಿಖರ ಕಾರಣ ಏನು ಎಂಬುದಾಗಿ ತಿಳಿಯಲು ತನಿಖೆ ನಡೆಸಲಾಗಿದೆ. ಈ ಅವಘಡದಿಂದ ಅಂಗಡಿಯಲ್ಲಿ 30 ಲಕ್ಷ ರೂಪಾಯಿಗೂ ಅಧಿಕ ವಸ್ತುಗಳು ಸುಟ್ಟು ಕರುಕಲಾಗಿವೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News