ಬೆಂಗಳೂರು | ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ವಂಚನೆ ಆರೋಪ: ದಂಪತಿ ಸೆರೆ

Update: 2024-02-14 14:21 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ವಂಚಿಸಿದ ಆರೋಪದಡಿ ಖ್ಯಾತ ತಿಂಡಿ ಹೋಟೆಲ್ ಇಡ್ಲಿಗುರು ಮಾಲಕನನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಚೇತನ್ ಎಂಬುವವರು ನೀಡಿದ ದೂರಿನನ್ವಯ ಇಡ್ಲಿಗುರು ಹೋಟೆಲ್ ಮಾಲಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ ಎಂಬುವರನ್ನು ಮುಂಬೈನಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಫ್ರಾಂಚೈಸಿ ನೀಡುವುದಾಗಿ ತಮ್ಮನ್ನು ನಂಬಿಸಿದ್ದ ಆರೋಪಿಗಳು, ಪ್ರತಿಯಾಗಿ ಠೇವಣಿ ರೂಪದಲ್ಲಿ ಮೂರು ಲಕ್ಷ ರೂ. ಪಡೆದಿದ್ದರು. ಹೋಟೆಲ್ ಆರಂಭಿಸುವುದಕ್ಕಾಗಿ ತಮ್ಮ ಮನೆಯ ನೆಲಮಹಡಿಯಲ್ಲಿದ್ದ ಬಾಡಿಗೆ ಆದಾಯ ಬರುತ್ತಿದ್ದ ಜಾಗವನ್ನು ತೆರವುಗೊಳಿಸಲು ಹೇಳಿದ್ದರು.

ಬಳಿಕ ಅಲ್ಲಿ ಫುಡ್‍ಕಾರ್ಟ್ ತಂದು ನಿಲ್ಲಿಸಿದ್ದ ಆರೋಪಿಗಳು, ಸ್ವಲ್ಪ ದಿನಗಳ ಬಳಿಕ ಅಂದುಕೊಂಡಂತೆ ವ್ಯಾಪಾರ ಆಗುತ್ತಿಲ್ಲ, ಬೇರೆಡೆ ವ್ಯಾಪಾರ ಮಾಡೋಣ. ಕಮಿಷನ್ ನೀಡುತ್ತೇವೆ ಎಂದಿದ್ದರು. ಆದರೆ ಯಾವುದೇ ಕಮಿಷನ್ ನೀಡದೆ, ಅಂಗಡಿಗಾಗಿ ಖರ್ಚಾದ ಹಣವನ್ನೂ ನೀಡದೆ ವಂಚಿಸಿದ್ದು, ಆರೋಪಿಗಳನ್ನು ಭೇಟಿಯಾಗಿ ವಿಚಾರಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚೇತನ್ ಅವರು ದೂರು ನೀಡಿದ್ದರು.

ಈ ಸಂಬಂಧ ಇಡ್ಲಿಗುರು ಹೋಟೆಲ್ ಮಾಲಕ ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬುಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬುವವರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಈ ಹಿಂದೆ ಎಫ್‍ಐಆರ್ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಮುಂಬೈಗೆ ತೆರಳಿದ್ದ ಆರೋಪಿಗಳಾದ ಕಾರ್ತಿಕ್ ಶೆಟ್ಟಿ ಹಾಗೂ ಪತ್ನಿ ಮಂಜುಳಾರನ್ನು ಈಗ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದು, ಸದ್ಯ ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News