ಬೆಂಗಳೂರು | ಮ್ಯಾಟ್ರಿಮೋನಿ ವೆಬ್‍ಸೈಟ್ ಗಳಲ್ಲಿ ನಕಲಿ ಪ್ರೊಫೈಲ್ ರಚಿಸಿ ವಂಚನೆ : ಆರೋಪಿ ಬಂಧನ
ಬೆಂಗಳೂರು : ವೈವಾಹಿಕ ಸಂಬಂಧಕ್ಕೆ ವೇದಿಕೆಯಾಗಿರುವ ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳ ಮೂಲಕ ನಕಲಿ ಪ್ರೊಫೈಲ್ ರಚಿಸಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಮಾಡಿಕೊಳ್ಳುತ್ತೇನೆ ಎಂದು ವಂಚಿಸುತ್ತಿದ್ದ ಆರೋಪಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದು ವರದಿಯಾಗಿದೆ.
ಬಂಧಿತ ಆರೋಪಿಯನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಮೂಲದ ದೀಪಕ್ (42) ಎಂದು ಗುರುತಿಸಲಾಗಿದೆ. ಬಿಎಸ್‍ಸಿ ಓದಿರುವ ದೀಪಕ್, ಈ ಹಿಂದೆ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯೋಗ ಆಕಾಂಕ್ಷಿಗಳಳಿಂದ ಹಣ ಪಡೆದು ವಂಚಿಸುತ್ತಿದ್ದನು ಎನ್ನಲಾಗಿದೆ.
ಇದೇ ರೀತಿ ವಿಧವೆ ಅಥವಾ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಫೇಸ್‍ಬುಕ್‍ನಲ್ಲಿ ನಕಲಿ ಪೇಜ್ ತೆರೆದು ಅಪರಿಚಿತರ ಫೋಟೊ ಬಳಸಿಕೊಂಡು ತಾನೇ ಎಂದು ಬಿಂಬಿಸಿಕೊಳ್ಳುತ್ತಿದ್ದ. ನಂತರ ಮದುವೆ ಮಾಡಿಕೊಳ್ಳುವುದಾಗಿ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಮಹಿಳೆ ಜೆ.ಪಿ.ನಗರದ 1ನೇ ಹಂತದಲ್ಲಿ ಸುಮಾರು 20 ವರ್ಷಗಳಿಂದ ತಾಯಿಯೊಂದಿಗೆ ವಾಸವಾಗಿದ್ದು, ಕಳೆದ ಫೆಬ್ರವರಿಯಲ್ಲಿ ವಿವಾಹ ಮಾಡಿಕೊಳ್ಳಲು ವರ ಹುಡುಕುತ್ತಿದ್ದರು. ಇದಕ್ಕಾಗಿ ಮ್ಯಾಟ್ರಿಮೋನಿ ಆಪ್‍ನಲ್ಲಿ ಲಾಗಿನ್ ಆಗಿದ್ದರು. ಈ ವೇಳೆ ದೀಪಕ್ ಎಂಬಾತನ ಪ್ರೊಫೈಲ್ ಕಂಡು ಸಂಪರ್ಕಿಸಿದ್ದಾರೆ. ತಾನು ತಮಿಳುನಾಡಿನ ಮಧುರೈಯ ಎಸ್‍ಬಿಐನಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ದೀಪಕ್ ಹೇಳಿಕೊಂಡಿದ್ದ. ವಾಟ್ಸ್ ಆಪ್ ಮೂಲಕ ಪರಸ್ಪರ ಬಯೋಡೇಟಾ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಮಹಿಳೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಆರೋಪಿ ಹೇಳಿದ್ದಾನೆ ಎಂದು ದೂರಲಾಗಿದೆ.
ಕಾಲಕ್ರಮೇಣ ಪರಸ್ಪರ ಇಬ್ಬರು ಕರೆ ಮಾಡಿ ಮಾತನಾಡುತ್ತಿದ್ದರು. ಈ ಮಧ್ಯೆ ತನ್ನ ವ್ಯಾಲೆಟ್ ಕಳೆದುಕೊಂಡಿದ್ದು ಹಣ ಬೇಕಾಗಿದೆ ಎಂದು ಮಹಿಳೆಯಿಂದ 30 ಸಾವಿರ ರೂ. ಪಡೆದುಕೊಂಡಿದ್ದ. ಅಲ್ಲದೇ ತಾನು ಬಳಸುತ್ತಿರುವ ಸಿಮ್ ಬ್ಯಾಂಕ್‍ನವರದ್ದು, ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ಹೀಗಾಗಿ ಸಿಮ್ ಖರೀದಿಸುವಂತೆಯೂ ಬೇಡಿಕೆಯಿಟ್ಟಿದ್ದ. ಇದನ್ನು ನಂಬಿದ್ದ ಮಹಿಳೆ ಸಿಮ್ ಖರೀದಿಸಿದ್ದರು ಎಂದು ಹೇಳಲಾಗಿದೆ.
ಸಿಮ್ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಸ್ನೇಹಿತರ ಬಳಿ ಈ ವಿಚಾರದ ಬಗ್ಗೆ ಹೇಳಿದಾಗ ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ತನ್ನ ಹೆಸರಿನಲ್ಲಿ ಖರೀದಿಸಿದ ಸಿಮ್ ಬ್ಲಾಕ್ ಮಾಡಿಸಿದ್ದರು. ಅಲ್ಲದೆ, ತನ್ನನ್ನು ನಂಬಿಸಿ ವಂಚಿಸಿದ ಆರೋಪಿ ವಿರುದ್ಧ ದೂರು ನೀಡಿದ್ದರು. ಸದ್ಯ ಆರೋಪಿ ದೀಪಕ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.