ಬೆಂಗಳೂರು | ಸಿನಿಮಾಗೆ ಅವಕಾಶ ಕೊಡಿಸುವುದಾಗಿ ವಂಚನೆ : ಪ್ರಕರಣ ದಾಖಲು
ಬೆಂಗಳೂರು : ತಮಿಳಿನ ಸಿನಿಮಾವೊಂದರಲ್ಲಿ ಅವಕಾಶ ಕೊಡಿಸುವುದಾಗಿ ಕನ್ನಡದ ನಟಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಆರೋಪದಡಿ ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ 1.71 ಲಕ್ಷ ರೂ. ವಂಚಿಸಲಾಗಿದೆ ಎಂದು ಆರೋಪಿಸಿ ನಟಿ ನಂದಿತಾ.ಕೆ.ಶೆಟ್ಟಿ ಎಂಬುವರು ನೀಡಿದ ದೂರಿನನ್ವಯ ಕೋಣನಕುಂಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ತಮಿಳಿನ ಸಿನಿಮಾವೊಂದಕ್ಕೆ ನಟಿಯರ ಆಡಿಷನ್ ಇರುವುದಾಗಿ ಇನ್‍ಸ್ಟಾಗ್ರಾಂ ಪೋಸ್ಟ್ ಬಂದಿತ್ತು. ಅದನ್ನು ಗಮನಿಸಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ವಿವರಗಳನ್ನು ನಮೂದಿಸಿದ್ದೆ. ನಂತರ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿದ್ದ ವ್ಯಕ್ತಿಯೋರ್ವ ತನ್ನನ್ನು ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ.
ಬಳಿಕ ಆನ್‍ಲೈನ್‍ನಲ್ಲಿ ಆಡಿಷಷನ್ ಮಾಡಿದ್ದ ಸುರೇಶ್ ಕುಮಾರ್ ಆರ್ಟಿಸ್ಟ್ ಕಾರ್ಡ್, ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ, ಚಿತ್ರೀಕರಣಕ್ಕಾಗಿ ಮಲೇಷಿಯಾಗೆ ತೆರಳಲು ಪಾಸ್ ಪೋರ್ಟ್ ಹಾಗೂ ವಿಮಾನ ಟಿಕೆಟ್ ಶುಲ್ಕವೆಂದು ಹೇಳಿ ಹಂತ ಹಂತವಾಗಿ 1.71 ಲಕ್ಷ ರೂ. ಹಣವನ್ನು ಆನ್‍ಲೈನ್ ಮೂಲಕ ಪಡೆದಿದ್ದ. ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಾಗ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಕೋಣನಕುಂಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ನಟಿ ನಂದಿತಾ.ಕೆ.ಶೆಟ್ಟಿ ಉಲ್ಲೇಖಿಸಿದ್ದಾರೆ.