ಬೆಂಗಳೂರು | ಕೆಎಎಸ್ ಪರೀಕ್ಷೆ ಮುಂದೂಡಲು ಆಗ್ರಹಿಸಿ ಧರಣಿ
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆ.27ರಂದು ನಿಗದಿಪಡಿಸಿರುವ ಪೂರ್ವಭಾವಿ ಪರೀಕ್ಷೆ ಮುಂದೂಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಆಕಾಂಕ್ಷಿಗಳು ಧರಣಿ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಾಂತಕುಮಾರ್, ‘ಪರೀಕ್ಷೆ ನಿಗದಿಪಡಿಸಿಗಿರುವ ದಿನಾಂಕ ಕೆಲಸದ ದಿನ. ಅನೇಕ ಆಕಾಂಕ್ಷಿಗಳು ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿದ್ದು, ಅಂತಹ ಅಭ್ಯರ್ಥಿಗಳಿಗೆ ಆ ದಿನದಂದು ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ವಾರದ ದಿನಗಳಲ್ಲಿ ಪರೀಕ್ಷೆ ನಡೆಯುವುದರಿಂದ ಕೇಂದ್ರ ಸರಕಾರ, ಖಾಸಗಿ ನೌಕರರು ಹಾಗೂ ನೆಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. 2017-18ನೆ ಬ್ಯಾಚ್‍ನ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸರಕಾರ ಅವಕಾಶ ನೀಡಿದೆ. ಆದರೆ, ಅಭ್ಯಾಸ ಮಾಡಲು ಕನಿಷ್ಠ ಸಮಯವನ್ನು ನೀಡಿಲ್ಲ ಮತ್ತು ಪರೀಕ್ಷಾ ಕೇಂದ್ರಗಳನ್ನು 350-400ಕಿ.ಮೀ. ದೂರದಲ್ಲಿ ನಿಗದಿಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
‘ಪ್ರಶ್ನೆ ಪತ್ರಿಕೆಯನ್ನು ತಿಂಗಳ ಮುಂಚೆಯೆ ಮುದ್ರಣ ಮಾಡಿ ಇಟ್ಟುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ತಲುಪಿಸುವ ಮಾರ್ಗದ ಮಾಹಿತಿ ಸೋರಿಕೆಯಾಗಿದೆ. ಈ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಆ.27ರಂದು ನಡೆಯುವ ಪರೀಕ್ಷೆ ವೇಳೆ ಅಕ್ರಮ ನಡೆಯುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಪರೀಕ್ಷೆಯನ್ನು ಮುಂದೂಡಿ ಮರು ದಿನಾಂಕ ನಿಗದಿಪಡಿಸಬೇಕು ಎಂದು ಕಾಂತಕುಮಾರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿ ಗುರುಬಸವ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಪದಾಧಿಕಾರಿ ಮುಹಮ್ಮದ್ ಫೀರ್, ಪರೀಕ್ಷಾ ಆಕಾಂಕ್ಷಿಗಳಾದ ಹರೀಶ್, ಸತೀಶ್, ಸಂಜಯ್ ಕುಮಾರ್ ಜೆ., ಪ್ರಸನ್ನ, ಅಭಿಲಾಷ್, ಸೇರಿದಂತೆ ಹಲವರು ಭಾಗವಹಿಸಿದ್ದರು.