ಬೆಂಗಳೂರು | ವಿದ್ಯಾರ್ಥಿಗಳ ಲ್ಯಾಪ್‍ಟಾಪ್ ಕಳ್ಳತನ : ಆರೋಪಿ ಬಂಧನ

Update: 2024-05-21 15:36 GMT

ಬೆಂಗಳೂರು : ರಾತ್ರಿ ಮತ್ತು ಬೆಳಗಿನ ಜಾವ ಸುತ್ತಾಡುತ್ತಾ ವಿದ್ಯಾರ್ಥಿಗಳು ವಾಸಿಸುತ್ತಿದ್ದ ಮನೆ ಬಳಿ ಹೋಗಿ ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣ ಸಂಬಂಧ ಅಂತಾರಾಜ್ಯದ ಆರೋಪಿಯನ್ನು ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 25 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ದಯಾನಂದ ಸಾಗರ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಾಲೇಜು ಸಮೀಪವೇ ಮನೆ ಮಾಡಿಕೊಂಡು ವಾಸವಾಗಿದ್ದು, ಮೇ 5ರಂದು ರಾತ್ರಿಯಿಂದ ಬೆಳಗ್ಗೆ ಸುಮಾರು 6.45 ವರೆಗೂ ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡಿದ್ದು, ಬಳಿಕ ಮಲಗಿದ್ದಾರೆ. ಅನಂತರ ಬೆಳಿಗ್ಗೆ 9.30ರ ಸುಮಾರಿನಲ್ಲಿ ಎದ್ದು ನೋಡಿದಾಗ ಸುಮಾರು 2.30 ಲಕ್ಷ ರೂ. ಬೆಲೆ ಬಾಳುವ ಮೂರು ವಿವಿಧ ಕಂಪೆನಿಯ ಲ್ಯಾಪ್‍ಟಾಪ್‍ಗಳು, ಒಂದು ಮೊಬೈಲ್ ಫೊನ್ ಕಳುವಾಗಿರುವುದು ಗೊತ್ತಾಗಿದೆ. ತಕ್ಷಣ ವಿದ್ಯಾರ್ಥಿಗಳು ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಸಿ.ಸಿ ಟಿವಿಯಿಂದ ಮಾಹಿತಿಯನ್ನು ಕಲೆಹಾಕಿ, ಕಾಟನ್‍ಪೇಟೆಯಲ್ಲಿರುವ ಪಿಜಿಯೊಂದರಲ್ಲಿ ವಾಸವಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ನೋಡಿದಾಗ ಆತನು ಆ ಪಿಜಿಯಲ್ಲಿ ಇರಲಿಲ್ಲ. ಆತನ ಬಗ್ಗೆ ಪೊಲೀಸರು ಕೆಲವು ಮಾಹಿತಿಗಳನ್ನು ಕಲೆಹಾಕಿ ನಂತರ, ಇಂದಿರಾನಗರದ ಮೆಟ್ರೋ ಪಿಲ್ಲರ್ ಕೆಳಭಾಗದಲ್ಲಿ ಆಂಧ್ರಪ್ರದೇಶದಿಂದ ಬಂದಿರುವ ಅವರ ಸಂಬಂಧಿಕರ ಜೊತೆ ಇರುವುದು ತಿಳಿದು ಅಲ್ಲಿಗೂ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಲ್ಯಾಪ್‍ಟಾಪ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗೊತ್ತಾಗಿದೆ.

ಆರೋಪಿಯು ಕಳ್ಳತನ ಮಾಡುತ್ತಿದ್ದ ಲ್ಯಾಪ್‍ಟಾಪ್‍ಗಳನ್ನು ತಮಿಳುನಾಡಿನ ಶಂಕರ ಪುರದಲ್ಲಿರುವ ವ್ಯಕ್ತಿಗೆ ನೀಡಿದ್ದು, ಆತನ ವಶದಿಂದ ಒಟ್ಟು 25 ಲ್ಯಾಪ್‍ಟಾಪ್‍ಗಳನ್ನು ವಶ ಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News